Advertisement

ಮೋಡೆರಾಕ್ಕೆ ಸೌರ ಬಲ; ಸೌರ ಗ್ರಾಮದ ಹೆಗ್ಗಳಿಕೆ ಏನು?

11:27 PM Oct 09, 2022 | Team Udayavani |

ಗುಜರಾತ್‌ನ ಮೆಹಸಾನಾ ಜಿಲ್ಲೆಯ ಮೋಡೆರಾ ಗ್ರಾಮ ಈಗ ದೇಶದಲ್ಲಿ ಅಗ್ರ ಸ್ಥಾನ ಪಡೆದಿದೆ. ಅದಕ್ಕೆ ಕಾರಣವೂ ಇದೆ. ಸೂರ್ಯನ ಬೆಳಕಿನಿಂದ ದಿನವಹಿ ಅಗತ್ಯಗಳನ್ನು ಪೂರೈಸುವ ವ್ಯವಸ್ಥೆಯನ್ನು ಹೊಂದಿದ ದೇಶದ ಏಕೈಕ ಗ್ರಾಮ ಎಂಬ ಹೆಗ್ಗಳಿಕೆ ಅದರದಾಗಿದೆ. ಅಲ್ಲಿ ಇನ್ನು ಮುಂದೆ 24 ತಾಸು ಕಾಲ ವ್ಯತ್ಯಯ ಇಲ್ಲದೆ ವಿದ್ಯುತ್‌ ಪೂರೈಕೆಯಾಗಲಿದೆ. ಐತಿಹಾಸಿಕವಾಗಿ ಈ ಗ್ರಾಮ ಮತ್ತು ನಮ್ಮ ಕರ್ನಾಟಕಕ್ಕೆ ವಿಶೇಷ ನಂಟು ಇದೆ. ಬಾದಾಮಿಯ ಚಾಲುಕ್ಯರ ವಂಶಸ್ಥರು ನಿರ್ಮಿಸಿದ ಸೂರ್ಯ ದೇಗುಲ ಈ ಗ್ರಾಮದಲ್ಲಿದೆ.

Advertisement

ಸೌರ ಗ್ರಾಮದ ಹೆಗ್ಗಳಿಕೆ ಏನು?
– ಗ್ರಾಮದಲ್ಲಿ ಇರುವ ಮನೆಗಳು, ಸರಕಾರಿ ಕಚೇರಿಗಳ ಮೇಲೆ 1,300 ಸೌರ ಫ‌ಲಕಗಳನ್ನು ಅಳವಡಿಸಲಾಗಿದೆ. ಇದರಿಂದ ದಿನದ 24 ತಾಸು ಕೂಡ ವಿದ್ಯುತ್ಛಕ್ತಿ ಉತ್ಪಾದನೆಯಾಗುತ್ತಿದೆ. ಇದರಿಂದಾಗಿ ಅವರಿಗೆ ವಿದ್ಯುತ್‌ ಬಿಲ್‌ನಲ್ಲಿ ಶೇ. 60ರಿಂದ ಶೇ. 100ರ ವರೆಗೆ ಉಳಿತಾಯ ಆಗಲಿದೆ. ಕೇಂದ್ರ ಮತ್ತು ಗುಜರಾತ್‌ ಸರಕಾರ ಎರಡು ಹಂತಗಳಲ್ಲಿ 80 ಕೋಟಿ ರೂ. ಖರ್ಚು ಮಾಡಿ, ಈ ಯೋಜನೆಯನ್ನು ಅನುಷ್ಠಾನಗೊಳಿಸಿವೆ.
– ಒಟ್ಟು ಎರಡು ಹಂತಗಳಲ್ಲಿ ಅದನ್ನು ಅನುಷ್ಠಾನಗೊಳಿಸಲಾಗಿದೆ. ಗ್ರಾಮದಲ್ಲಿ 12 ಹೆಕ್ಟೇರ್‌ (29 ಎಕರೆ) ಜಮೀನನ್ನು ಸೌರಫ‌ಲಕ ಅಳವಡಿಸಲು ನೀಡಲಾಗಿದೆ.
– ಸೂರ್ಯ ದೇಗುಲದ ಆವರಣದಲ್ಲಿ ಕೂಡ ಸೌರ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ. ದೇಗುಲದಿಂದ 6 ಕಿ.ಮೀ. ದೂರದಲ್ಲಿ ಇರುವ ಸುಜ್ಜನ್‌ಪುರ ಎಂಬಲ್ಲಿ ಬ್ಯಾಟರಿಯಲ್ಲಿ ಸೂರ್ಯನಿಂದ ಪಡೆದ ಶಕ್ತಿಯನ್ನು ಸಂಗ್ರಹಿಸಿ (ಬಿಇಎಸ್‌ಎಸ್‌) ಗ್ರಾಮಕ್ಕೆ ವಿದ್ಯುತ್‌ ಪೂರೈಕೆ ಮಾಡಲಾಗುತ್ತದೆ. ಮನೆಗಳು, ಸರಕಾರಿ ಕಟ್ಟಡಗಳ ಮೇಲೆ ಹಾಕಿರುವ ಸೌರಫ‌ಲಕಗಳನ್ನು ಸುಜ್ಜನ್‌ಪುರದಲ್ಲಿರುವ ಬಿಇಎಸ್‌ಎಸ್‌ಗೆ ಲಿಂಕ್‌ ಮಾಡಲಾಗಿದೆ.

ಸೂರ್ಯ ದೇಗುಲದ ಹಿನ್ನೆಲೆ
ಮೋಡೆರಾ ಗ್ರಾಮದ ಪುಷ್ಪವತಿ ನದಿಯ ತೀರದಲ್ಲಿರುವ ಸೂರ್ಯ ದೇಗುಲವು ಪ್ರಸಿದ್ಧಿ ಪಡೆದಿದೆ. 1026-27ರ ಅವಧಿಯಲ್ಲಿ ಚಾಲುಕ್ಯ ಸಾಮ್ರಾಜ್ಯದ ದೊರೆ ಒಂದನೇ ಭೀಮ ಈ ದೇವಾಲಯವನ್ನು ನಿರ್ಮಿಸಿದ್ದಾನೆ.

ಮೋಡೆರಾ ಗ್ರಾಮದ ಜನರು ವಿದ್ಯುತ್ಛಕ್ತಿಗಾಗಿ ಹಣ ಕೊಡಬೇಕಾಗಿಲ್ಲ. ಬದಲಾಗಿ ಅವರೇ ವಿದ್ಯುತ್ಛಕ್ತಿಯನ್ನು ಮಾರಾಟ ಮಾಡಿ ಆದಾಯ ಗಳಿಸಬಹುದು. ಮೊನ್ನೆ ಮೊನ್ನೆಯವರೆಗೂ ನಾಗರಿಕರಿಗೆ ಸರಕಾರವೇ ವಿದ್ಯುತ್‌ ಸರಬರಾಜು ಮಾಡಬೇಕಾಗಿತ್ತು.
-ನರೇಂದ್ರ ಮೋದಿ, ಪ್ರಧಾನಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next