ಸೂರತ್: ಸಂಬಂಧಿಕರ ಸಂಸ್ಥೆಯಲ್ಲಿ ದುಡಿಯಲು ಇಷ್ಟವಿಲ್ಲದ ಭೂಪನೊಬ್ಬ, ಕೆಲಸ ಕಳೆದುಕೊಳ್ಳಲು ಅನುವಾಗಲೆಂದು ತನ್ನ ಕೈ ಬೆರಳುಗಳನ್ನೇ ಕತ್ತರಿಸಿಕೊಂಡ ವಿಲಕ್ಷಣ ಘಟನೆ ಸೂರತ್ನಲ್ಲಿ ನಡೆದಿದೆ. ಕಂಪ್ಯೂಟರ್ ಆಪರೇಟರ್ ಆಗಿದ್ದ ಮಯೂರ್, “ರಸ್ತೆಯಲ್ಲಿ ಸಾಗುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದ. ತನ್ನ ಎಡಗೈನ 4 ಬೆರಳುಗಳು ಕತ್ತರಿಸಲ್ಪಟ್ಟಿವೆ ಎಂದು ದೂರಿದ್ದ. ಪ್ರಾರಂಭದಲ್ಲಿ ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು, ಸೂಕ್ತ ತನಿಖೆ ನಡೆಸಿದಾಗ ಮಯೂರ್ ಸ್ವತಃ ತನ್ನ ಬೆರಳುಗಳನ್ನು ಕತ್ತರಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಡಿಸೆಂಬರ್ 8 ರಂದು ಪೊಲೀಸರನ್ನು ಸಂಪರ್ಕಿಸಿ, ತನ್ನ ಎಡಗೈಯ ಬೆರಳುಗಳು ಕಾಣೆಯಾಗಿವೆ ಎಂದು ಹೇಳಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ನೇಹಿತ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಕತ್ತರಿಸಿದ ಬೆರಳುಗಳಿಗೆ ಚಿಕಿತ್ಸೆ ನೀಡಿ ಅದೇ ದಿನ ಅವರನ್ನು ಬಿಡುಗಡೆ ಮಾಡಿದ್ದರು. ಪೋಲೀಸ್ ತನಿಖೆಗಳ ಹೊರತಾಗಿಯೂ, ಅವನು ವಿವರಿಸಿದ ಸ್ಥಳದಲ್ಲಿ ಯಾವುದೇ ರಕ್ತದ ಕುರುಹುಗಳು ಅಥವಾ ಪುರಾವೆಗಳು ಕಂಡುಬಂದಿಲ್ಲ, ಇದು ಅವನ ಕಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿತು.
ಕೆಲವು ದಿನಗಳ ನಂತರ, ಸೂರತ್ ಕ್ರೈಂ ಬ್ರಾಂಚ್ ಸತ್ಯವನ್ನು ಬಹಿರಂಗಪಡಿಸಿದ್ದು, ಉಪ ಪೊಲೀಸ್ ಆಯುಕ್ತ ಭವೇಶ್ ರೋಜಿಯಾ ಅವರು, “ಮಯೂರ್ ತಾರಾಪರಾ ತನ್ನ ಬೆರಳುಗಳನ್ನು ಕತ್ತರಿಸಿರುವುದನ್ನು ಒಪ್ಪಿಕೊಂಡಿದ್ದು, ಆತ ಚಾಕು ಖರೀದಿಸಿ ಯೋಜಿತ ರೀತಿಯಲ್ಲಿ ಕೃತ್ಯ ಮಾಡಿದ್ದಾನೆ” ಎಂದು ಹೇಳಿದ್ದಾರೆ.