Advertisement

ಗುಜರಾತ್‌: ಮೊದಲ ಹಂತದ ಚುನಾವಣೆ ಶೇ.68 ಮತದಾನ

06:00 AM Dec 10, 2017 | Team Udayavani |

ಅಹ್ಮದಾಬಾದ್‌: ಇವಿಎಂಗಳ ಮೇಲಿನ ಅನುಮಾನದ ನಡುವೆಯೇ ಗುಜರಾತ್‌ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. 2012ರ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ. 1ರಷ್ಟು ಮತಪ್ರಮಾಣ ಕಡಿಮೆಯಾಗಿದ್ದು, ಶೇ. 68 ದಾಖಲಾಗಿದೆ.

Advertisement

182 ಸ್ಥಾನಗಳ ಪೈಕಿ 89 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆದಿದ್ದು, ಇದೇ ಮೊದಲ ಬಾರಿ ಮತ ಹಾಕಿದ ಅನಂತರ ರಸೀದಿ ನೀಡುವ ವಿವಿಪ್ಯಾಟ್‌ ಮತಯಂತ್ರಗಳ ಬಳಕೆ ಮಾಡಲಾಗಿದೆ. ಸೌರಾಷ್ಟ್ರ ಮತ್ತು ಕಛ…, ದಕ್ಷಿಣ ಗುಜರಾತ್‌ನ 89 ಕ್ಷೇತ್ರಗಳಲ್ಲಿ ಹಕ್ಕು ಚಲಾವಣೆ ನಡೆದಿತ್ತು. ರಾಜ್‌ಕೋಟ್‌ ಪಶ್ಚಿಮದಿಂದ ಸಿಎಂ ವಿಜಯ್‌ ರೂಪಾಣಿ, ಮಾಂಡ್ವಿಯಿಂದ ಕಾಂಗ್ರೆಸ್‌ ಮುಖಂಡ ಶಕ್ತಿಸಿಂಗ್‌ ಗೋಹಿಲ್‌ ಮತ್ತು ಅಮ್ರೇಲಿಯಿಂದ ಪರೇಶ್‌ ಧನಾನಿ ಸ್ಪರ್ಧಿಸಿದ್ದಾರೆ. ಈ ಚುನಾವಣೆಯು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದರೆ, ಅಧ್ಯಕ್ಷ ಗಾದಿಗೇರಲಿರುವ ರಾಹುಲ್‌ ಗಾಂಧಿಗೆ ಅಗ್ನಿ ಪರೀಕ್ಷೆಯಾಗಿರಲಿದೆ. ಒಟ್ಟು 977 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರ ಭವಿಷ್ಯ ಡಿಸೆಂಬರ್‌ 18ರಂದು ಪ್ರಕಟವಾಗಲಿದೆ. ಎರಡನೇ ಹಂತದ ಮತದಾನ ಡಿ. 14ರಂದು ನಡೆಯಲಿದೆ.

ಮತಯಂತ್ರ ವಿವಾದ: ಪೋರಬಂದರ್‌ನಲ್ಲಿ ಮುಸ್ಲಿಂ ಪ್ರಾಧಾನ್ಯದ ಮೂರು ಮತಗಟ್ಟೆಗಳಲ್ಲಿ ಮತ ಯಂತ್ರಕ್ಕೆ ಬಾಹ್ಯ ಸಾಧನಗಳನ್ನು ಸಂಪರ್ಕಿಸ ಲಾಗಿದೆ. ಬ್ಲೂಟೂತ್‌ ಮೂಲಕ ಮತಯಂತ್ರವನ್ನು ನಿಯಂತ್ರಿಸಲಾಗುತ್ತಿದೆ ಎಂದು ಕಾಂಗ್ರೆಸ್‌ ಮುಖಂಡ ಅರ್ಜುನ್‌ ಮೊದ್ವಾಡಿಯಾ ಆರೋಪ ಮಾಡಿದ್ದಾರೆ. ಮೆಮನ್‌ವಾಡಾ ಮತಗಟ್ಟೆಯಲ್ಲಿ ಮತಯಂತ್ರಕ್ಕೆ ಬಾಹ್ಯ ಸಾಧನವೊಂದನ್ನು ಸಂಪರ್ಕಿಸಿದ್ದು ಕಂಡು ಬಂತು. ಇದು ಬ್ಲೂಟೂತ್‌ ಆಗಿದ್ದು, ಇದನ್ನು ಸ್ಮಾರ್ಟ್‌
ಫೋನ್‌ನಿಂದ ನಿಯಂತ್ರಿಸಲಾಗುತ್ತಿದೆ. ಸ್ಮಾರ್ಟ್‌ ಫೋನ್‌ನಲ್ಲಿ ಇದು ಇಕೋ 105 ಎಂದು ಕಾಣಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಇವಿಎಂಗಳಲ್ಲಿ ಅಳವಡಿಸಿದ ಚಿಪ್‌ಗ್ಳನ್ನು ಬ್ಲೂಟೂತ್‌ ಬಳಸಿ ನಿಯಂತ್ರಿಸಬಹು ದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ತಳ್ಳಿ ಹಾಕಿದ ಚುನಾ ವಣ ಆಯೋಗ, ಬ್ಲೂಟೂತ್‌ನಿಂದ ಇವಿಎಂ ನಿಯಂತ್ರಿಸಲಾಗುತ್ತಿದೆ ಎಂಬ ಆರೋಪ ಹುಸಿ. ಅರ್ಜುನ್‌ ಹೇಳಿರುವಂತೆ ಇಸಿ 105 ಎಂಬ ಹೆಸರಿನ ಬ್ಲೂಟೂತ್‌ ಇವಿಎಂನದ್ದಲ್ಲ. ಬದಲಿಗೆ ಪೋಲಿಂಗ್‌ ಬೂತ್‌ನಲ್ಲಿರುವ ಅಧಿಕಾರಿಯದ್ದು ಎಂದಿದೆ. ಕಾಂಗ್ರೆಸ್‌ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಮಾಧ್ಯಮ ಗಳೆದುರೇ ತಪಾಸಣೆ ನಡೆಸಲಾಗಿದೆ ಎಂದು ಚುನಾ ವಣ ಆಯೋಗ ಹೇಳಿದೆ.

ಪ್ರಧಾನಿ ಕೃತಜ್ಞತೆ: ಮೊದಲ ಹಂತದಲ್ಲಿ ಭಾರೀ ಪ್ರಮಾಣದಲ್ಲಿ ಹಕ್ಕು ಚಲಾವಣೆ ಮಾಡಿದ ಗುಜರಾತ್‌ ಜನರಿಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಗುಜರಾತ್‌ಗೆ ಧನ್ಯವಾದ. ಸಾವಿರಾರು ಮಂದಿ ನನ್ನ ಸಹೋದರ, ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ತೆರಳಿ ಹಕ್ಕು ಚಲಾವಣೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಗೆ ಚಾರಿತ್ರಿಕ ಜಯ ಸಿಗುವ ಸಾಧ್ಯತೆ ಇದೆ ಎಂಬ ವಿಶ್ವಾಸವಿದೆ’ ಎಂದು ಬರೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next