ಅಹ್ಮದಾಬಾದ್:ಧಾರಾಕಾರ ಮಳೆಗೆ ಗುಜರಾತ್ ತತ್ತರಿಸಿಹೋಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಬನ್ಸಾಕಾಂತಾ ಮತ್ತು ಪಠಾನ್ ಜಿಲ್ಲೆಯ ಸುಮಾರು 25 ಸಾವಿರ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಗುಜರಾತ್ ಪ್ರವಾಹದಿಂದ ತತ್ತರಿಸಿ ಹೋಗಿದೆ. ಬನ್ಸಾಕಾಂತಾ ಜಿಲ್ಲೆಯ 10 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಪಠಾನ್ ನ 9790 ಜನರನ್ನು ಹಾಗೂ ಅಹ್ಮದಾಬಾದ್ ನ 2,800 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ವಿವರಿಸಿದೆ.
ವಾಹನಗಳು ಪ್ರವಾಹದ ನೀರಿನಲ್ಲಿ ಮುಳುಗಿರುವ ದೃಶ್ಯ ಕಂಡು ಬಂದಿರುವುದಾಗಿ ವರದಿ ತಿಳಿಸಿದೆ. ತುರ್ತು ಸೇವೆ ನೀಡಲು ವಿಳಂಬವಾಗುತ್ತಿದ್ದು ಜನರು ತಾಳ್ಮೆಯಿಂದ ಸಹಕಾರ ನೀಡಬೇಕೆಂದು ಸಚಿವ ವಿಜಯ್ ರೂಪಾನಿ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಐಎಎಫ್, ಎನ್ ಡಿಆರ್ ಎಫ್ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.