Advertisement

ಗುಜರಾತ್‌ ನೀತಿ ಜಾರಿಗೆ ತನ್ನಿ

10:51 PM Oct 16, 2019 | Team Udayavani |

ಬೆಂಗಳೂರು: ಗುಜರಾತ್‌ನಲ್ಲಿ “ವಿಶೇಷ ಹೂಡಿಕೆ ವಲಯ’ಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಇದಕ್ಕಾಗಿ ಕಾಯ್ದೆಯನ್ನೇ ತರಲಾಗಿದೆ. ಆ ಕಾಯ್ದೆ ಕುರಿತು ಅಧ್ಯಯನ ನಡೆಸಿ ರಾಜ್ಯದಲ್ಲೂ ಜಾರಿಗೊಳಿಸಬೇಕು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

“ಕೈಗಾರಿಕಾ ನೀತಿ- 2020’ರ ಕರಡು ಪ್ರತಿ ಸಿದ್ಧತೆ ಕುರಿತು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ಉದ್ಯೋಗ ಮಿತ್ರ ಭವನದಲ್ಲಿ ಸಭೆ ನಡೆಸಿದ ಅವರು, ಕೈಗಾರಿಕಾ ನೀತಿಯಲ್ಲಿ “ವಿಶೇಷ ಹೂಡಿಕೆ ವಲಯ’ಕ್ಕೆ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ಗುಜರಾತ್‌ ಸರ್ಕಾರ ಜಾರಿಗೊಳಿಸಿರುವ “ವಿಶೇಷ ಹೂಡಿಕೆ ವಲಯ -2009′ ಕಾಯ್ದೆ ಕುರಿತು ಅಧ್ಯಯನ ನಡೆಸಿ ಜಾರಿಗೊಳಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ಕಳೆದ ಕೈಗಾರಿಕಾ ನೀತಿಯಡಿ 5 ಲಕ್ಷ ಕೋಟಿ ರೂ.ಹೂಡಿಕೆ ಗುರಿ ಹೊಂದಿದ್ದರೂ 3.75 ಲಕ್ಷ ಕೋಟಿ ರೂ.ಬಂಡವಾಳವಷ್ಟೇ ಹರಿದು ಬಂದಿತ್ತು. ಹಾಗೆಯೇ 20 ಲಕ್ಷ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿತ್ತು. ಈ ಸಾಲಿನಲ್ಲಿಯೂ ಐದು ಲಕ್ಷ ಕೋಟಿ ರೂ.ಹೂಡಿಕೆ ಗುರಿ ಹೊಂದಲಾಗಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.

ಯೋಜನೆ ಚುರುಕುಗೊಳಿಸಿ: 2014-15ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ “ಬೆಂಗಳೂರು- ಮುಂಬೈ ಎಕನಾಮಿಕ್‌ ಕಾರಿಡಾರ್‌’ ಯೋಜನೆಯನ್ನು ಚುರುಕುಗೊಳಿಸಬೇಕು. ಯೋಜನೆಗೆ ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ ವೆಚ್ಚದ ಬಗ್ಗೆ ಮಾಹಿತಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಭೂ ಹಂಚಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲು ಏಕಗವಾಕ್ಷಿ ವ್ಯವಸ್ಥೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಇತರ ರಾಜ್ಯಗಳಲ್ಲೂ ಏಕಗವಾಕ್ಷಿ ಪದ್ಧತಿಯಿದ್ದು, ರಾಜ್ಯದಲ್ಲೂ ಶೀಘ್ರವೇ ಏಕಗವಾಕ್ಷಿ ವ್ಯವಸ್ಥೆಯಾಗಬೇಕಿದೆ. ಕೈಗಾರಿಕಾ ಟೌನ್‌ಶಿಪ್‌ ನಿರ್ಮಾಣದಲ್ಲಿ ಗುಜರಾತ್‌, ತಮಿಳುನಾಡು ಯಶಸ್ಸು ಸಾಧಿಸಿದ್ದು, ಈ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.

Advertisement

ಕೆಐಎಡಿಬಿ ಬಗ್ಗೆ ದೂರು: ಇದೇ ವೇಳೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಟ್ಟಡಗಳ ಅಭಿವೃದ್ಧಿಗೆ ಅನುಸರಿಸುವ ಮಾನದಂಡದ ಬಗ್ಗೆ ಮಾಹಿತಿ ಪಡೆದ ಜಗದೀಶ ಶೆಟ್ಟರ್‌, ಕೆಐಎಡಿಬಿ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.

ಹಾಗೆಯೆ, ಕೈಗಾರಿಕಾ ಇಲಾಖೆಯ “ಚೈನಾದೊಂದಿಗಿನ ಸ್ಪರ್ಧೆ’ ಪರಿಕಲ್ಪನೆಯಡಿ ಕ್ಲಸ್ಟರ್‌ ನಿರ್ಮಾಣದ ಬಗ್ಗೆಯೂ ಮಾಹಿತಿ ಪಡೆದರು. ಈ ವೇಳೆ ಸಚಿವರಿಗೆ ಮಾಹಿತಿ ನೀಡಿದ ಅಧಿಕಾರಿಗಳು, ರಾಜ್ಯದ 9 ಜಿಲ್ಲೆಗಳಲ್ಲಿ ವಿವಿಧ ವಲಯಗಳ ಕ್ಲಸ್ಟರ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಹೂಡಿಕೆದಾರರನ್ನು ಇತರ ಜಿಲ್ಲೆಗಳತ್ತ ಆಕರ್ಷಿಸಲು ಅಗತ್ಯವಿರುವ ಸೌಕರ್ಯ ಕಲ್ಪಿಸಲಾಗುತ್ತಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ.

ಎಂಎಸ್‌ಎಂಇ ಕ್ಷೇತ್ರವನ್ನು ಪ್ರೋತ್ಸಾಹಿಸಲು ಕಳೆದ ಬಜೆಟ್‌ನಲ್ಲಿ ಘೋಷಿಸಿದ “ಸಾರ್ಥಕ್‌’ ಯೋಜನೆ ಜಾರಿಗೆ ಗಮನ ಹರಿಸಲಾಗುತ್ತಿದೆ ಎಂದರು. ಜತೆಗೆ, ಈ ಕ್ಷೇತ್ರದ ಉದ್ದಿಮೆದಾರರನ್ನು ಉತ್ತೇಜಿಸಲು ಸರ್ಕಾರದಿಂದಲೇ ನೀಡುವ ಸಬ್ಸಿಡಿ ಮೊತ್ತ ಹೆಚ್ಚಿಸುವ ಬಗ್ಗೆಯೂ ಮಾಹಿತಿ ನೀಡಿದರು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್‌ ಕೃಷ್ಣ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಒಟ್ಟಾರೆ ನೂತನ ಕೈಗಾರಿಕಾ ನೀತಿಯು ಕೈಗಾರಿಕಾ ಸ್ನೇಹಿಯಾಗಿರುವುದರ ಜತೆಗೆ ಮಹಿಳಾ ಉದ್ಯಮಿಗಳು, ಸೂಕ್ಷ್ಮಮತ್ತು ಸಣ್ಣ ಉದ್ದಿಮೆದಾರರು ಸೇರಿದಂತೆ ಕೈಗಾರಿಕೋದ್ಯಮಿಗಳಿಗೆ ಪೂರಕವಾಗಿರಬೇಕು.
-ಜಗದೀಶ ಶೆಟ್ಟರ್‌, ಕೈಗಾರಿಕಾ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next