Advertisement

ಶೇ.60ರಷ್ಟು ಮತದಾನ: ಗುಜರಾತ್‌ನಲ್ಲಿ ಮೊದಲ ಹಂತ ಮುಕ್ತಾಯ

09:12 PM Dec 01, 2022 | Team Udayavani |

ಗಾಂಧಿನಗರ/ಅಹಮದಾಬಾದ್‌: ಬಹು ನಿರೀಕ್ಷಿತ ಗುಜರಾತ್‌ ವಿಧಾನಸಭೆ ಚುನಾವಣೆಯ ಮೊದಲ ಹಂತ ಗುರುವಾರ ಮುಕ್ತಾಯವಾಗಿದೆ. ಸೌರಾಷ್ಟ್ರ, ಕಛ್ ಮತ್ತು ದಕ್ಷಿಣ ಗುಜರಾತ್‌ನ 19 ಜಿಲ್ಲೆಗಳಲ್ಲಿನ 89 ಕ್ಷೇತ್ರಗಳಿಗೆ ಮತದಾನ ಹೆಚ್ಚು ಕಡಿಮೆ ಶಾಂತಿಯುತವಾಗಿ ಕೊನೆಗೊಂಡಿದೆ.

Advertisement

ಚುನಾವಣಾ ಆಯೋಗ ನೀಡಿದ ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ ಶೇ.60.20ರಷ್ಟು ಹಕ್ಕು ಚಲಾವಣೆ ಆಗಿದೆ. ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಡಿ.5ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಡಿ.8ರಂದು ಫ‌ಲಿತಾಂಶ ಪ್ರಕಟವಾಗಲಿದೆ.

ಕೆಲವೊಂದು ಸ್ಥಳಗಳಲ್ಲಿ ಇವಿಎಂಗಳು ಕೆಟ್ಟು ಹೋದ ಕಾರಣ ಮತದಾನ ವಿಳಂಬವಾಗಿ ಶುರುವಾದ ಘಟನೆಗಳು ನಡೆದಿವೆ. ಅವುಗಳ ಬದಲಾಗಿ ಬೇರೆ ಇವಿಎಂಗಳನ್ನು ಒದಗಿಸಿದ ಬಳಿಕ ಹಕ್ಕು ಚಲಾವಣೆ ಸುಗಮವಾಗಿ ನಡೆಯಿತು.

ಮತದಾನ ನಡೆದ ಜಿಲ್ಲೆಗಳ ಪೈಕಿ ನೋಡುವುದಿದ್ದರೆ ಭಾರಿ ಪ್ರಮಾಣದಲ್ಲಿ ಹಕ್ಕು ಚಲಾವಣೆಯಾಗಿದೆ. ತಪಿ ಜಿಲ್ಲೆಯಲ್ಲಿ ಸಂಜೆ 5 ಗಂಟೆಯ ವರೆಗಿನ ಮಾಹಿತಿ ಪ್ರಕಾರ ಶೇ.72.32 ಹಕ್ಕು ಚಲಾವಣೆಯಾಗಿದೆ. ಉಳಿದಂತೆ ಇತರ ಜಿಲ್ಲೆಗಳಲ್ಲಿಯೂ ಶೇ.60ಕ್ಕಿಂತ ಹೆಚ್ಚು ಮತದಾನವಾಗಿದೆ.

ಜಂಜೋಧ್‌ಪುರ ತಾಲೂಕಿನಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಮತಗಟ್ಟೆಗಳನ್ನು ಸ್ಥಾಪಿಸಲಿಲ್ಲ ಎಂಬ ಕಾರಣಕ್ಕಾಗಿ ಮತದಾರರು ಕೆಲ ಕಾಲ ಪ್ರತಿಭಟನೆ ನಡೆಸಿದರು. ನಂತರ ಅವರ ಮನವೊಲಿಕೆ ನಡೆಸಿ ಪರಿಸ್ಥಿತಿಯನ್ನು ತಹಬದಿಗೆ ತರಲಾಯಿತು. ಜುನಾಗಡದಲ್ಲಿ ಮತಗಟ್ಟೆ ಕೇಂದ್ರಕ್ಕೆ ಕಾಂಗ್ರೆಸ್‌ ಮುಖಂಡರ ಪ್ರವೇಶವನ್ನು ಪೊಲೀಸರು ತಡೆದರು ಎಂಬ ಕಾರಣಕ್ಕೆ ಘರ್ಷಣೆ ನಡೆದಿದೆ.

Advertisement

ವೆಬ್‌ಕಾಸ್ಟಿಂಗ್‌ಗೆ ಆದೇಶ:

ಮತದಾನದ ವೇಳೆ ಪಾರದರ್ಶತೆ ಕಾಪಾಡುವ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗ (ಇಸಿಐ) 13,065 ಮತಗಟ್ಟೆಗಳಲ್ಲಿನ ಹಕ್ಕು ಚಲಾವಣೆಯ ಪ್ರಕ್ರಿಯೆಯನ್ನು ನೇರ ವೆಬ್‌ಕಾಸ್ಟಿಂಗ್‌ಗೆ ಆದೇಶ ನೀಡಿತ್ತು. ಬೆಳಗ್ಗೆ 6.30ರಿಂದ ಮತದಾನ ಮುಕ್ತಾಯದ ವರೆಗೆ ಈ ಪ್ರಕ್ರಿಯೆ ನಡೆದಿತ್ತು ಎಂದು ಗುಜರಾತ್‌ನ ಮುಖ್ಯ ಚುನಾವಣಾ ಅಧಿಕಾರಿ ಪಿ.ಭಾರತಿ ಹೇಳಿದ್ದಾರೆ.

ಅತ್ಯುತ್ಸಾಹ:

ಮೊದಲ ಹಂತದ ಮತದಾನ ನಡೆದ 89 ಕ್ಷೇತ್ರಗಳಲ್ಲಿನ ಮತದಾರರು ಅತ್ಯುತ್ಸಾಹದಿಂದ ಹಕ್ಕು ಚಲಾವಣೆಯಲ್ಲಿ ಭಾಗವಹಿಸಿದ್ದರು. ಚುನಾವಣಾ ಆಯೋಗ 104 ವರ್ಷದ ರಾಮ್‌ಜಿ ಭಾಯ್‌ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ್ದ ಫೋಟೋ ಟ್ವೀಟ್‌ ಮಾಡಿದೆ.

ಗಮನ ಸಳೆದ ಅಭ್ಯರ್ಥಿಯ ಮೀಸೆ:

ಸಬರ್‌ಕಾಂತ ಜಿಲ್ಲೆಯ ಹಿಮಾಂತ್‌ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಮಗನ್‌ಭಾಯ್‌ ಸೋಲಂಕಿ ಅವರು ಹೊಂದಿರುವ ಭಾರೀ ಮೀಸೆ ಮತದಾರರ ಆಕರ್ಷಣೆಯಾಗಿತ್ತು. ಸೇನೆಯಲ್ಲಿ ಕರ್ತವ್ಯ ಸಲ್ಲಿಸಿ ನಿವೃತ್ತರಾಗಿರುವ ಅವರು 5 ಅಡಿ ದಪ್ಪದ ಮೀಸೆ ಹೊಂದಿದ್ದಾರೆ. ಅದನ್ನು ಅವರು ಅಚ್ಚುಕಟ್ಟಾಗಿ ಆರೈಕೆ ಮಾಡಿದ್ದಾರೆ. ನನ್ನ ಹಾಗೆ ದಪ್ಪ ಮೀಸೆ ಯಾರು ಬಿಡುತ್ತಾರೆಯೋ ಅವರಿಗೆ ಸರ್ಕಾರ ನಿರ್ವಹಣಾ ವೆಚ್ಚ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 ಜಿಲ್ಲೆ        /    ಮತ ಪ್ರಮಾಣ (ಶೇ.)

ತಪಿ           /     72.32

ನವಾಸಿ        /       65.91

ದಂಗ್‌         /       64.84

ವಲ್ಸಾಡ್‌    /        62.46

ಗಿರ್‌ ಸೋಮನಾಥ್‌ / 60.46

ಭಾವನಗರ          /  51.34

 

Advertisement

Udayavani is now on Telegram. Click here to join our channel and stay updated with the latest news.

Next