ವಡ್ಗಾಮ್: ಪತ್ರಕರ್ತರ ಖರೀದಿ ಸಾಧ್ಯವಾಗದಿದ್ದಾಗ ಚಾನೆಲ್‌ಗಳನ್ನೇ ಖರೀದಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಗುಜರಾತ್‌ನಲ್ಲಿ ಕೇಂದ್ರ ಸರಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯ ವಡ್ಗಾಮ್ ಕ್ಷೇತ್ರದ ಅಭ್ಯರ್ಥಿ ಜಿಗ್ನೇಶ್ ಮೇವಾನಿ ಪರ ಪ್ರಚಾರದ ವೇಳೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್ ಬಿಜೆಪಿ ವಿರುದ್ಧ ಹಲವು ವಿಷಯಗಳ ಕುರಿತು ತೀವ್ರ ವಾಗ್ದಾಳಿ ನಡೆಸಿದರು. ನನಗೆ ಗುಜರಾತಿ ಗೊತ್ತಿಲ್ಲ ಆದರೆ ಜನರನ್ನು ಅರ್ಥ ಮಾಡಿಕೊಳ್ಳುವಷ್ಟು ಅರ್ಥವಾಗಿದೆ. ನಾನು ಏನನ್ನೂ ಮಾರಲು ಗುಜರಾತ್‌ಗೆ ಬಂದಿಲ್ಲ’ ಎಂದರು.
”ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ಮಾರಾಟಕ್ಕಿದೆ ಎಂದರೆ ಏನು?,ಪತ್ರಕರ್ತರ ಖರೀದಿ ಸಾಧ್ಯವಾಗದಿದ್ದಾಗ ಚಾನೆಲ್‌ಗಳನ್ನೇ ಖರೀದಿಸುತ್ತಾರೆ. ಉದಾಹರಣೆಗೆ, ಶಾಸಕರು ಪಕ್ಷಗಳನ್ನು ಬದಲಾಯಿಸಿದಾಗ, ಜನರು ಖರೀದಿದಾರ ಮತ್ತು ಮಾರಾಟಗಾರ ಇಬ್ಬರನ್ನೂ ಖಂಡಿಸುತ್ತಾರೆ. ಇದರಲ್ಲೂ ಅದೇ ರೀತಿ ಇರಬೇಕು” ಎಂದರು.
‘ಜಿಗ್ನೇಶ್ ಮೇವಾನಿ ಮೇಲೆ ಅಸ್ಸಾಂ ಪೊಲೀಸರು ಕೈಗೊಂಡಿರುವ ಕ್ರಮವನ್ನು ಉಲ್ಲೇಖಿಸಿದ ಕನ್ಹಯ್ಯಾ ಕುಮಾರ್, ಗುಜರಾತ್ ಮಾತ್ರವಲ್ಲ, ಅಸ್ಸಾಂ ಪೊಲೀಸರು ಕೂಡ ನಮ್ಮನ್ನು ಕರೆಯುತ್ತಿದ್ದಾರೆ. ಗೌರವಾನ್ವಿತ ಪ್ರಧಾನಿ ಮೋದಿ ಜಿ ಅವರ ಆಶೀರ್ವಾದ ಮತ್ತು ಜೈ ಶಾ ಅವರ ತಂದೆಯ ಪ್ರೀತಿ ಮುಂದುವರಿದರೆ ಅಸ್ಸಾಂ ಏನು 60 ದೇಶಗಳ ಪೊಲೀಸರು ಕೂಡ ನಮ್ಮನ್ನು ಹುಡುಕುತ್ತಾರೆ’ ಎಂದರು.
ಕಳೆದ ಬಾರಿ ಮೇವಾನಿ ಅವರು ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದರು.