Advertisement

ಗುಜರಾತ್ ಚುನಾವಣಾ ಫಲಿತಾಂಶವು ಸುಶಾಸನದ ಫಲ: ಸಿಎಂ ಬೊಮ್ಮಾಯಿ

01:54 PM Dec 08, 2022 | Team Udayavani |

ಬೆಂಗಳೂರು: ಗುಜರಾತ್ ಚುನಾವಣಾ ಫಲಿತಾಂಶ ಸುಶಾಸನದ ಫಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಲಲಿತ್ ಅಶೋಕ್ ಹೋಟೆಲ್ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಮುನ್ನಡೆಯಲ್ಲಿದ್ದು, ಈ ಬಾರಿಯೂ ಗುಜರಾತ್ ನಲ್ಲಿ ಅಭೂತಪೂರ್ವ ಗೆಲುವು ಸಾಧಿಸುತ್ತಿದೆ. ಕಳೆದ ಎಲ್ಲ ಚುನಾವಣೆಗಳಿಗಿಂತ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಕೊಳ್ಳುತ್ತಿದ್ದೇವೆ. ಇದು ಚುನಾವಣೋತ್ತರ ಸಮೀಕ್ಷೆಯಲ್ಲಿಯೂ ತಿಳಿದು ಬಂದಿತ್ತು. ಒಂದು ರಾಜ್ಯದಲ್ಲಿ ಸುಶಾಸನ ತಂದರೆ ಜನ ಬೆಂಬಲ ಕೊಡುತ್ತಾರೆ. ಇದುವರೆಗೂ ದೇಶದಲ್ಲಿ ಆಡಳಿತ ವಿರೋಧ ಟ್ರೆಂಡ್ ಇತ್ತು. ಗುಜರಾತ್ ಆಡಳಿತದ ಪರವಾಗಿದೆ ಎಂದು ನಿರೂಪಿಸಿದೆ. 7 ನೇ ಬಾರಿ ಗೆಲ್ಲುತ್ತಿರುವುದು ಸುಲಭದ ಮಾತಲ್ಲ. ಆಡಳಿತದ ಪರವಾಗಿ ಜನ ನಿಲ್ಲಲು ಸರ್ಕಾರಗಳು ಕೆಲಸ ಮಾಡಬೇಕಾಗುತ್ತದೆ. ಆ ಕೆಲಸವನ್ನು ಗುಜರಾತ್ ಸರ್ಕಾರ ಮಾಡಿದೆ ಎಂದರು.

ಮೋದಿಯವರ ನಾಯಕತ್ವ: ಎಲ್ಲಕ್ಕೂ ಮಿಗಿಲಾಗಿ ಇದಕ್ಕೆ ಅಡಿಪಾಯ ಹಾಕಿ ಬೆಳಸಿ, ಮಾರ್ಗದರ್ಶನ ಮಾಡುತ್ತಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಾಯಕತ್ವ. ಅವರ ಸಕಾರಾತ್ಮಕ ನಾಯಕತ್ವ ಸುಮಾರು ಒಂದು ತಲೆಮಾರು ದಾಟಿದರೂ ಹಳೆ ಮತ್ತು ಹೊಸ ಪೀಳಿಗೆ ಅವರ ಆಡಳಿತ, ದಕ್ಷತೆಯನ್ನು ಒಪ್ಪಿದ್ದಾರೆ. ದೇಶ ಮುನ್ನಡೆಸುವ ಶಕ್ತಿಯ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕಳೆದ ಬಾರಿ 3 ರಾಜ್ಯಗಳಲ್ಲಿ ಸಹ ಗೆದ್ದಿದ್ದೇವೆ. ಹಿಮಾಚಲ ಪ್ರದೇಶದಲ್ಲಿ ಸಮಬಲದ ಹೋರಾಟವಿದೆ. ಅಂತಿಮವಾಗಿ ಬಿಜೆಪಿ ಗೆದ್ದು ಸರ್ಕಾರ ರಚಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಹಿಮಾಚಲ ಫಲಿತಾಂಶ: ಟ್ರೆಂಡ್ ಬದಲಿಸುತ್ತಾ ಕಾಂಗ್ರೆಸ್; ಭರ್ಜರಿ ಮುನ್ನಡೆ

ಹೋಲಿಕೆ ಸಲ್ಲದು: ನವದೆಹಲಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ 15 ವರ್ಷ ಆಡಳಿತ ಮಾಡುವುದೇ ದೊಡ್ಡ ಸಾಧನೆ. ಸ್ಥಳೀಯ ಸಮಸ್ಯೆಗಳು ಬಹಳ ಇರುತ್ತವೆ. ಮತದಾರರ ಸಣ್ಣ ಸಂಖ್ಯೆ, ಬಹು ಆಯಾಮದ ಸ್ಪರ್ಧೆ ಇರುತ್ತದೆ. ಮುನಿಸಿಪಲ್ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಗೆ ಹೋಲಿಕೆ ಮಾಡಲಾಗುವುದಿಲ್ಲ ಎಂದರು.

Advertisement

ಜಯ ನಿಶ್ಚಿತ: ಬಿಜೆಪಿ ಗೆಲುವಿನ ಪರಿಣಾಮ ಸಕಾರಾತ್ಮಕವಾಗಿ ಕರ್ನಾಟಕದ ಚುನಾವಣೆಯ ಮೇಲೆ ಆಗಿಯೇ ಆಗುತ್ತದೆ. ಭಾಜಪ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ದೊಡ್ಡ ನೈತಿಕ ಬಲ ಸಿಗಲಿದೆ. ಇನ್ನಷ್ಟು ಹುರುಪು, ಹುಮ್ಮಸ್ಸಿನಲ್ಲಿ ಕೆಲಸ ಮಾಡಿದರೆ ಜಯ ನಿಶ್ಚಿತ ಎಂದರು.

ಯಾವುದೂ ನಿಜವಾಗಿಲ್ಲ: ಚುನಾವಣಾ ಫಲಿತಾಂಶ ಪರಿಣಾಮ ಬೀರುವುದಿಲ್ಲ ಎಂದಿರುವ ವಿಪಕ್ಷ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿಗಳು ಅವರು ಹಾಗೆಯೇ ಹೇಳಬೇಕು. ಅವರು ಹೇಳಿದ್ದು ಯಾವುದೂ ನಿಜವಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next