Advertisement

ಅಸಮಾಧಾನ ಶಮನಕ್ಕಾಗಿ ನಿತಿನ್‌ ಪಟೇಲ್‌ಗೆ ಹಣಕಾಸು ಖಾತೆ

06:00 AM Jan 01, 2018 | Team Udayavani |

ಅಹಮದಾಬಾದ್‌: ಗುಜರಾತ್‌ನ ಹೊಸ ಸರ್ಕಾರದಲ್ಲಿ ನೀಡಿದ್ದ ಖಾತೆಯಿಂದಾಗಿ ಅಸಮಾಧಾನಗೊಂಡಿದ್ದ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ಗೆ ಹಣಕಾಸು ಖಾತೆಯನ್ನು ನೀಡಲಾಗಿದ್ದು, ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಖಾತೆ ಹಂಚಿಕೆ ಬಗ್ಗೆ ಅಸಮಾಧಾನವಿದ್ದುದರಿಂದ, ಮೂರು ದಿನಗಳಾದರೂ ನಿತಿನ್‌ ಅಧಿಕಾರ ವಹಿಸಿಕೊಂಡಿರಲಿಲ್ಲ. ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮಧ್ಯಪ್ರವೇಶದಿಂದಾಗಿ ಸಮಸ್ಯೆ ಬಗೆಹರಿದಿದೆ. ಈ ಹಿಂದಿನ ಅವಧಿಯಲ್ಲಿ ಉಪಮುಖ್ಯಮಂತ್ರಿ ಹುದ್ದೆಯೆ ಜತೆಗೆ ಇತರ ಮಹತ್ವದ ಖಾತೆಗಳನ್ನೂ ನಿತಿನ್‌ ಪಟೇಲ್‌ಗೆ ನೀಡಲಾಗಿತ್ತು. ಆದರೆ ಈ ಬಾರಿ ಯಾವುದೇ ಪ್ರಮುಖ ಖಾತೆ ನೀಡಿರಲಿಲ್ಲ.

Advertisement

ಅಸಮಾಧಾನ ಶಮನದ ನಂತರ ಮಾತನಾಡಿದ ನಿತಿನ್‌ ಪಟೇಲ್‌, ನನಗೆ ನನ್ನ ಅನುಭವ ಹಾಗೂ ಹುದ್ದೆಗೆ ಸರಿಹೊಂದುವ ಖಾತೆಗಳನ್ನು ನೀಡುವ ಭರವಸೆ ನೀಡಿದ ನಂತರದಲ್ಲಿ ಅಧಿಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಅಧಿಕಾರ ಸ್ವೀಕರಿಸಿದ ನಂತರ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಭೇಟಿ ಮಾಡಲು ಸ್ವಕ್ಷೇತ್ರ ಮೆಹಸಾನಾಗೆ ನಿತಿನ್‌ ತೆರಳಿದ್ದಾರೆ. ಇನ್ನೊಂದೆಡೆ ಸಿಎಂ ವಿಜಯ್‌ ರುಪಾಣಿ ಕೂಡ ನಿತಿನ್‌ ಪಟೇಲ್‌ಗೆ ಹಣಕಾಸು ಖಾತೆಯನ್ನು ನೀಡಿರುವುದಾಗಿ ಘೋಷಿಸಿದ್ದಾರೆ.

ಶನಿವಾರವಷ್ಟೇ ಪಟೇಲ್‌ ಅವರು ಮುನಿಸಿಕೊಂಡಿರುವುದು ಸುದ್ದಿಯಾಗಿತ್ತು. ಜತೆಗೆ, ಅವರು ಸಿಎಂ ರೂಪಾಣಿ ಅವರಿಗೆ 3 ದಿನಗಳ ಗಡುವು ನೀಡಿದ್ದಾರೆ ಎಂದೂ ಹೇಳಲಾಗಿತ್ತು. ಇದರ ಲಾಭ ಪಡೆದುಕೊಳ್ಳಲು ಯತ್ನಿಸಿದ್ದ ಪಟೇಲ್‌ ಮೀಸಲು ಹೋರಾಟಗಾರ ಹಾರ್ದಿಕ್‌, ಕಾಂಗ್ರೆಸ್‌ಗೆ ಬರುವಂತೆ ನಿತಿನ್‌ಗೆ ಆಫ‌ರ್‌ ಕೂಡ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next