Advertisement

ಪ್ರೊ ಕಬಡ್ಡಿ: ಮತ್ತೆ ಸೋತ ಗುಜರಾತ್‌

08:55 AM Sep 04, 2017 | Karthik A |

ಕೋಲ್ಕತಾ: ಗೆಲುವಿನ ಹಳಿ ತಪ್ಪಿರುವ ಕನ್ನಡಿಗ ಸುಕೇಶ್‌ ಹೆಗ್ಡೆ ನೇತೃತ್ವದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಮತ್ತೂಮ್ಮೆ ಮುಗ್ಗರಿಸಿದೆ. ಜೈಪುರ ಪಿಂಕ್‌ ಪ್ಯಾಂಥರ್ಸ್‌ನ ರಣತಂತ್ರಗಳನ್ನು ಬೇಧಿಸುವಲ್ಲಿ ಫಾರ್ಚೂನ್‌ ಸೋತಿತು. 25-31 ಅಂಕಗಳಿಂದ ಕಹಿ ಅನುಭವಿಸಿತು. ಇದು ಗುಜರಾತ್‌ಗೆ ಕೋಲ್ಕತಾದಲ್ಲಿ ಎದುರಾದ 2ನೇ ಸೋಲು.

Advertisement

ತಮಿಳ್‌ ತಲೈವಾಸ್‌ ವಿರುದ್ಧ ನಡೆದ ರವಿವಾರದ 2ನೇ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ 29-25 ಅಂತರದಿಂದ ವಿಜಯ ಸಾಧಿಸಿತು. ಮೊದಲ 20 ನಿಮಿಷದಲ್ಲಿ 9 ಅಂಕಗಳಿಂದ ಹಿನ್ನಡೆ ಕಂಡ ತಲೈವಾಸ್‌, 38ನೇ ನಿಮಿಷದಲ್ಲಿ ಅಂಕ ಸಮಬಲದತ್ತ ಮುನ್ನುಗ್ಗಿತ್ತು. ಆದರೆ, ವಾರಿಯರ್ಸ್‌ನ ಮಣಿಂದರ್‌ ಸಿಂಗ್‌ ಅವರ ಕೊನೆಯ ಹಂತದಲ್ಲಿನ ಸೂಪರ್‌ ರೈಡ್‌ನ‌ 3 ಅಂಕಗಳು, ತಲೈವಾಗೆ ಬಿಸಿ ತಟ್ಟಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನಿ ಆಗಿದ್ದರೂ ಗುಜರಾತ್‌ ಪಾಲಿಗೆ ಇಲ್ಲಿನ ಸುಭಾಶ್‌ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಅದೃಷ್ಟ ಕುದುರುತ್ತಿಲ್ಲ. ಪ್ಯಾಂಥರ್ಸ್‌ ನಾಯಕ ಜಸ್ವೀರ್‌ ಸಿಂಗ್‌ರ ಪರಿಣಾಮಕಾರಿ ದಾಳಿಗೆ ಗುಜರಾತ್‌ ಬಳಿ ಪ್ರತಿ ತಂತ್ರಗಳೇ ಇರಲಿಲ್ಲ.

ಆರಂಭದಲ್ಲೇ ಹಿನ್ನಡೆ: ಗುಜರಾತ್‌ನ ತ್ರಿವಳಿ ಸ್ಟಾರ್‌ ರೈಡರ್‌ಗಳನ್ನು ಅಕ್ಷರಶಃ ಪೆವಿಲಿಯನ್‌ನಲ್ಲಿ ಪ್ಯಾಂಥರ್ಸ್‌ ಕೂರಿಸಿತು. ಆರಂಭದಿಂದಲೇ ಮುನ್ನಡೆ ಸಾಧಿಸಿತು. ಸುಕೇಶ್‌, ಸಚಿನ್‌, ರೋಹಿತ್‌ ಕೋರ್ಟ್‌ ಒಳಗೆ ಇದ್ದಿದ್ದೇ ಕಡಿಮೆ. 19ನೇ ನಿಮಿಷದಲ್ಲಿ ಪ್ಯಾಂಥರ್ಸ್‌ನ ಜಸ್ವೀರ್‌ ಸಿಂಗ್‌ “ಮಾಡು ಮಡಿ’ಯ ಮುನ್ನುಗ್ಗುವಿಕೆಯಲ್ಲಿ 2 ಸೂಪರ್‌ ರೈಡಿಂಗ್‌ ಪಾಯಿಂಟ್‌ ಕಲೆಹಾಕಿ, ಗುಜರಾತ್‌ನ ಮನೆ ಖಾಲಿ ಮಾಡಿಸಿದರು.

ಲೆಕ್ಕಾಚಾರ ಉಲ್ಟಾ: ಸಾಮಾನ್ಯವಾಗಿ ಕಬಡ್ಡಿಯಲ್ಲಿ ಜಾದೂ ನಡೆಯುವುದು ದ್ವಿತೀಯಾರ್ಧದಲ್ಲಿ. ಆದರೆ, ಗುಜರಾತ್‌ನ ಪೇಲವ ದಾಳಿ, ಅಭದ್ರ ರಕ್ಷಣಾದಳಕ್ಕೆ ಪ್ಯಾಂಥರ್ಸ್‌ನ ಓವರ್‌ಟೇಕ್‌ ಮಾಡುವ ಸಾಮರ್ಥ್ಯವೇ ಕುಂದಿತ್ತು. ಅತ್ತ ಮೇಲಿಂದ ಮೇಲೆ ‘ಮಾಡು ಮಡಿ’ ಅಂಕಗಳನ್ನು ಮುಡಿಗೇರಿಸಿಕೊಂಡ ಜೈಪುರ ಭರ್ಜರಿ ಅಂತರವನ್ನೇ ಕಾಯ್ದುಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next