ಅಹಮಹಾಬಾದ್: ಗುಜರಾತ್ ನ ಅಮ್ರೇಲಿ ಜಿಲ್ಲೆಯಲ್ಲಿ ಐದು ವರ್ಷದ ಬಾಲಕನನ್ನು ಹೆಣ್ಣು ಸಿಂಹ ಕೊಂದು ಹಾಕಿರುವ ಘಟನೆ ಮಂಗಳವಾರ ನಸುಕಿನ ವೇಳೆ ನಡೆದಿರುವುದಾಗಿ ವರದಿ ತಿಳಿಸಿದೆ.
ಅಮ್ರೇಲಿ ಜಿಲ್ಲೆಯ ರಾಜೌಲಾ ತಾಲೂಕಿನ ಉಚೈಯಾ ಗ್ರಾಮದ ರೈತನ ಐದು ವರ್ಷದ ಮಗ ಕಿಶೋರ್ ಪರ್ಮಾರ್ ಮೇಲೆ ಹೆಣ್ಣು ಸಿಂಹ ದಾಳಿ ನಡೆಸಿತ್ತು. ಹೆಣ್ಣು ಸಿಂಹ ತನ್ನ ಮರಿಗಳೊಂದಿಗೆ ಇದ್ದ ವೇಳೆ ಈ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಮಂಗಳವಾರ ನಸುಕಿನ 1ಗಂಟೆ ಸಮಯದಲ್ಲಿ ಮಗ ಕಿಶೋರ್ ಹಾಸಿಗೆಯಲ್ಲಿ ಇಲ್ಲದಿರುವುದನ್ನು ಪೋಷಕರು ಗಮನಿಸಿದ್ದರು. ಕೂಡಲೇ ಹುಡುಕಲು ಆರಂಭಿಸಿದ್ದು, ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದರು.
ನಂತರ ಅರಣ್ಯ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿರುವಾಗ ಸುಮಾರು ನಾಲ್ಕು ಕಿಲೋ ಮೀಟರ್ ದೂರದಲ್ಲಿ ಅರ್ಧ ಭಾಗ ತಿಂದ ಕಿಶೋರ್ ಶವ ಪತ್ತೆಯಾಗಿತ್ತು ಎಂದು ಸಹಾಯಕ ಸಬ್ ಇನ್ಸ್ ಪೆಕ್ಟರ್ ದಾದ್ಬಾಯಿ ದಾವ್ ತಿಳಿಸಿದ್ದಾರೆ.
ಬಾಲಕನ ಪೋಷಕರು ರಾಜೌಲಾ ನಗರದ ಲಿಲಾಪಿರ್ ನಿ ಧಾರ್ ಪ್ರದೇಶದ ನಿವಾಸಿಗಳಾಗಿದ್ದು, ಕೃಷಿ ಭೂಮಿಯಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಉಚೈಯಾ ಗ್ರಾಮಕ್ಕೆ ಬಂದು ತಾತ್ಕಾಲಿಕ ಟೆಂಟ್ ನಲ್ಲಿ ನೆಲೆಸಿದ್ದರು ಎಂದು ವರದಿ ವಿವರಿಸಿದೆ.