ಅಹ್ಮದಾಬಾದ್ : ಇಲ್ಲಿನ ಓಧವ್ ಪ್ರದೇಶದಲ್ಲಿ ನಿನ್ನೆ ಕುಸಿದಿದ್ದ ನಾಲ್ಕು ಮಹಡಿಯ ಕಟ್ಟಡದ ಅವಶೇಷಳಗಡಿ ಸಿಲುಕಿದ್ದವರಲ್ಲಿ ಮೂವರನ್ನು ಜೀವಸಹಿತ ಪಾರುಗೊಳಿಸಲಾಗಿದೆ; ಆದರೆ ಇನ್ನೂ ಐವರು ಅವಶೇಷಗಳಡಿ ಸಿಲುಕಿಕೊಂಡಿದ್ದು ಅವರನ್ನು ಹೊರತರುವ ಕಾರ್ಯಾಚರಣೆ ಈಗಲೂ ಸಾಗಿದೆ. ಕಟ್ಟಡ ಕುಸಿದ ಸುದ್ದಿ ತಿಳಿದೊಡನೆಯೇ ನಾಲ್ಕು ಅಗ್ನಿಶಾಮಕ ಘಟಕಗಳು ಸ್ಥಳಕ್ಕೆ ಧಾವಿಸಿ ಬಂದವು; ಇದೇ ರೀತಿ ಗಾಂಧೀನನಗರದಿಂದ ರಾಷ್ಟ್ರೀಯ ವಿಪತ್ತು ಸ್ಪಂದನ ದಳದ (ಎನ್‌ಡಿಆರ್‌ಎಫ್) ಎರಡು ತಂಡಗಳು ಕೂಡ ಧಾವಿಸಿ ಬಂದಿದ್ದವು. ಕುಸಿದು ಬಿದ್ದ ಈ ಕಟ್ಟಡದಲ್ಲಿ ಒಟ್ಟು 32 ಫ್ಲ್ಯಾಟುಗಳಿವೆ. ಕಟ್ಟಡವು ದುರ್ಬಲವಾಗಿರುವ ಬಗ್ಗೆ ನೊಟೀಸ್ ನೀಡಲಾಗಿದ್ದು ನಿವಾಸಿಗಳನ್ನು ತೆರವುಗೊಳಿಸಲಾಗಿತ್ತು ಎಂದು ಅಗ್ನಿ ಶಾಮಕ ದಳದ ಹೆಚ್ಚುವರಿ ಮುಖ್ಯಸ್ಥ ರಾಜೇಶ್ ಭಟ್ ತಿಳಿಸಿದ್ದಾರೆ. ಹಾಗಿದ್ದರೂ ಕಟ್ಟಡ ಕುಸಿದ ದುರಂತಕ್ಕೆ ಮುನ್ನ ಕೆಲವರು ಕಟ್ಟಡವನ್ನು ಹೇಗೆ ಮತ್ತು ಏಕೆ ಪ್ರವೇಶಿಸಿದರು ಎಂಬುದು ಗೊತ್ತಾಗಿಲ್ಲ; ಅದನ್ನು ದೃಡ ಪಡಿಸಿಕೊಳ್ಳುವ ಯತ್ನ ನಡೆದಿದೆ ಎಂದು ಭಟ್ ಹೇಳಿದರು. ಹತ್ತು ಮಂದಿ ಕಟ್ಟಡದ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಇಬ್ಬರನ್ನು ಪಾರುಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಈಗಲೂ ಸಾಗಿದೆ ಎಂದು ರಾಜೇಶ್ ಭಟ್ ಹೇಳಿದರು.