Advertisement

ಸಾಮೂಹಿಕ ಯೋಗ ಪ್ರದರ್ಶನ ಗಿನ್ನಿಸ್‌ ದಾಖಲೆ

01:46 PM Jun 05, 2018 | Team Udayavani |

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಕಳೆದ ವರ್ಷ ಗಿನ್ನಿಸ್‌ ದಾಖಲೆ ಮಾಡಿದ್ದ ಮೈಸೂರು ಜಿಲ್ಲಾಡಳಿತ, ಈ ವರ್ಷ ಗಿನ್ನಿಸ್‌ ದಾಖಲೆ ಉಳಿಸಿಕೊಂಡು, ಯೋಗ ಪ್ರದರ್ಶನವನ್ನು ಇನ್ನಷ್ಟು ಉತ್ತಮಪಡಿಸಲು ಸಿದ್ಧತೆ ಆರಂಭಿಸಿದೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ 2017ರಲ್ಲಿ ಮೈಸೂರು ಜಿಲ್ಲಾಡಳಿತ 55506 ಜನರನ್ನು ಸೇರಿಸಿ ನೀಡಿದ ಸಾಮೂಹಿಕ ಯೋಗ ಪ್ರದರ್ಶನ ಗಿನ್ನಿಸ್‌ ದಾಖಲೆಯಾಗಿದೆ. ಹೀಗಾಗಿ ಈ ವರ್ಷ ಕೂಡ ಗಿನ್ನಿಸ್‌ ದಾಖಲೆ ಉಳಿಸಿಕೊಳ್ಳಲು ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ನಗರದ ರೇಸ್‌ಕೋರ್ಸ್‌ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶನಕ್ಕೆ 1ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. 

ಇದಕ್ಕಾಗಿ ಮೈಸೂರು ನಗರದ ಎಲ್ಲಾ ಧಾರ್ಮಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಯೋಗ ಸಂಸ್ಥೆಗಳು, ಹೋಟೆಲ್‌ ಮಾಲೀಕರ ಸಂಘ, ಟ್ರಾವೆಲ್‌ ಅಸೋಸಿಯೇಷನ್‌, ಪ್ರವಾಸೋದ್ಯಮ ಇಲಾಖೆ, ಆಯುಷ್‌ ಇಲಾಖೆ ಸೇರಿದಂತೆ ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಂತೆ ಜಿಲ್ಲಾಡಳಿತ ಇದರಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಯಿತು.

“ಸ್ವಸ್ಥ-ಸ್ವತ್ಛ ಮೈಸೂರು’ ಘೋಷಣೆ: ಸತತ ಎರಡು ಬಾರಿ ದೇಶದ ಪ್ರಥಮ ಸ್ವತ್ಛ ನಗರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಮೈಸೂರು, ಕಳೆದ ವರ್ಷ ಪ್ರಶಸ್ತಿ ವಂಚಿತವಾಗಿತ್ತು. ಈ ವರ್ಷ ಪ್ರಶಸ್ತಿ ಬಂದಿದೆಯಾದರೂ ಮಧ್ಯಮ ನಗರಗಳ ವಿಭಾಗದಲ್ಲಿ ಬಂದಿರುವುದರಿಂದ ಮುಖ್ಯ ಪ್ರಶಸ್ತಿಯನ್ನು ಪಡೆಯುವ ನಿಟ್ಟಿನಲ್ಲಿ ನಗರಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ

ವಿವಿಧ ಕ್ಷೇತ್ರಗಳ ಗಣ್ಯರನ್ನು ಒಳಗೊಂಡ ಸಮಿತಿ ರಚಿಸಿ, ಸಾರ್ವಜನಿಕರಲ್ಲಿ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸುವುದು, ಅಂತಾರಾಷ್ಟ್ರೀಯ ಯೋಗ ದಿನದಂದೇ ಮೈಸೂರು ನಗರದಲ್ಲಿ ಸ್ವತ್ಛತೆಗೂ ಚಾಲನೆ ನೀಡುವುದರಿಂದ ಈ ವರ್ಷ “ಸ್ವಸ್ಥ-ಸ್ವತ್ಛ ಮೈಸೂರು’ ಘೋಷಣೆಯೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. 

Advertisement

ಸಾಮೂಹಿಕ ಯೋಗ ಪ್ರದರ್ಶನಕ್ಕೆ ಒಂದು ಲಕ್ಷ ಜನರನ್ನು ಸೇರಿಸುವ ಗುರಿಹೊಂದಿರುವುದರಿಂದ ಜಿಲ್ಲಾಡಳಿತಕ್ಕೆ ಕಾರ್ಯಕ್ರಮದ ಖರ್ಚು ಹೊರೆಯಾಗದಂತೆ ಪ್ರಾಯೋಜಕತ್ವ ಪಡೆಯಬೇಕು. ಜಿಲ್ಲಾಡಳಿತದಿಂದ ಪ್ರತಿನಿಧಿಗಳ ನೋಂದಣಿ ಹಾಗೂ ವೇದಿಕೆ ನಿರ್ವಹಣೆ ಮಾತ್ರ ಮಾಡಬೇಕು ಎಂದು ಚರ್ಚಿಸಲಾಯಿತು. 

ಈಗಾಗಲೇ ಒಂದು ಸಾವಿರ ಯೋಗ ತರಬೇತುದಾರರು ನೋಂದಣಿ ಮತ್ತು ಯೋಗ ತರಬೇತಿ ಆರಂಭಿಸಿದ್ದು, ಮೈಸೂರು ನಗರದ ನಾಲ್ಕು ವಲಯಗಳಲ್ಲೂ ಇದಕ್ಕಾಗಿ ಕಚೇರಿ ತೆರೆದು ಜಿಲ್ಲಾಧಿಕಾರಿಯವರಿಗೆ ಆಯಾಯ ದಿನದ ನೋಂದಣಿ ವರದಿಯನ್ನು ಸಲ್ಲಿಸಬೇಕು.

ಸಾರ್ವಜನಿಕರು www.yogadaymysuru.com ಮೂಲಕವು ಹೆಸರು ನೋಂದಾಯಿಸಿಕೊಳ್ಳಬಹುದು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಕೈಜೋಡಿಸುವಂತೆ ಜಿಎಸ್‌ಎಸ್‌ ಫೌಂಡೇಷನ್‌ನ ಶ್ರೀಹರಿ ಮನವಿ ಮಾಡಿದರು.

ಸಭೆಯಲ್ಲಿ ನೆಹರೂ ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎಂ.ಎನ್‌.ನಟರಾಜು, ಮೈಸೂರು ವಿವಿ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಪ್ರೊ.ಬಿ.ಚಂದ್ರಶೇಖರ್‌, ನಗರ ಪಾಲಿಕೆ ಆರೋಗ್ಯಾಧಿಕಾರಿ ರಾಮಚಂದ್ರ, ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ, ಮೈಸೂರು ಟ್ರಾವೆಲ್‌ ಅಸೋಸಿಯೇಷನ್‌ನ ರವಿ ಮೊದಲಾದವರು  ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next