Advertisement

ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಗಡಿ ನಿಗದಿಗೆ ಮಾರ್ಗಸೂಚಿ

11:46 PM May 23, 2022 | Team Udayavani |

ಬೆಂಗಳೂರು: ತಾ.ಪಂ. ಹಾಗೂ ಜಿ.ಪಂ.ಗಳ ಕ್ಷೇತ್ರಗಳ ಸೀಮೆಗಳನ್ನು ನಿಗದಿಪಡಿಸುವ ಸಂಬಂಧ ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ ಮಾರ್ಗಸೂಚಿಗಳನ್ನು ಹೊರಡಿಸಿದೆ.

Advertisement

ಗಡಿ ನಿಗದಿಗೆ ಮಾರ್ಗಸೂಚಿಗಳು
– ತಾ|ನಲ್ಲಿರುವ ನಗರ ಸ್ಥಳೀಯ ಸಂಸ್ಥೆಗೆ ಸೇರ್ಪಡೆಯಾಗಿರುವ, ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಿರುವ ಗ್ರಾಮಾಂತರ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಗ್ರಾಮೀಣ ಪ್ರದೇಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಇದೇ ಜಿ.ಪಂ. ಕ್ಷೇತ್ರಗಳ ನಿಗದಿಗೂ ಅನ್ವಯವಾಗುತ್ತದೆ.
– ಒಂದು ಜಿ.ಪಂ. ಕ್ಷೇತ್ರದೊಳಗೆ ಎಷ್ಟು ತಾ.ಪಂ. ಕ್ಷೇತ್ರಗಳನ್ನು ರಚಿಸಬಹುದೋ ಅಷ್ಟು ಕ್ಷೇತ್ರಗಳನ್ನು ಆ ಜಿ.ಪಂ. ಕ್ಷೇತ್ರದ ವ್ಯಾಪ್ತಿಯೊಳಗೆ ಅಳವಡಿಸಿರಬೇಕು.
– ಜಿ.ಪಂ. ಕ್ಷೇತ್ರದೊಳಗೆ ಬರುವ ಪೂರ್ಣ ಗ್ರಾ.ಪಂ.ಗಳನ್ನು ಸಾಧ್ಯವಾದಷ್ಟು ಒಟ್ಟುಗೂಡಿಸಿ, ತಾ.ಪಂ. ಕ್ಷೇತ್ರಗಳನ್ನು ನಿರ್ಧರಿಸಬೇಕು. ಸಾಧ್ಯವಾಗದಿದ್ದರೆ ಗ್ರಾಮಗಳನ್ನು ಗುಂಪು ಮಾಡುವುದು, ಈ ಸಂದರ್ಭದಲ್ಲಿ ಮೂಲ ಗ್ರಾಮವನ್ನು ವಿಭಜಿಸತಕ್ಕದ್ದಲ್ಲ. ಕಂದಾಯ ಗ್ರಾಮದ ದಾಖಲೆ ಗ್ರಾಮಗಳನ್ನು ಬೇರೆಯಾಗಿ ವಿಂಗಡಿಸಬಾರದು.
– ತಾ.ಪಂ., ಜಿ.ಪಂ. ಕ್ಷೇತ್ರದೊಳಗೆ ಒಟ್ಟುಗೂಡಿಸುವ ಸಂದರ್ಭ ಒಂದು ತಾ.ಪಂ. ಕ್ಷೇತ್ರ ಎರಡು ಜಿ.ಪಂ. ಕ್ಷೇತ್ರಗಳಿಗೆ ವಿಭಜಿಸತಕ್ಕದ್ದಲ್ಲ.
– ಪ್ರತೀ ಚುನಾವಣ ಕ್ಷೇತ್ರಗಳ ಜನಸಂಖ್ಯೆಯಲ್ಲಿ ಸಾಧ್ಯವಾಗುವಷ್ಟರ ಮಟ್ಟಿಗೆ ಹೆಚ್ಚಿನ ವ್ಯತ್ಯಾಸವಿರದಂತೆ ನೋಡಿಕೊಳ್ಳಬೇಕು. ಇದೇ ನಿಯಮ ಜಿ.ಪಂ. ಕ್ಷೇತ್ರ ನಿಗದಿಗೂ ಅನ್ವಯವಾಗುತ್ತದೆ.
– ಹೊಸ ಕ್ಷೇತ್ರ ರಚನೆ ಮಾಡಬೇಕಾದ ಸಂದರ್ಭ ಮಾತ್ರ ಆ ಕ್ಷೇತ್ರದಲ್ಲಿನ ಅತೀ ಹೆಚ್ಚು ಜನಸಂಖ್ಯೆಯಿರುವ ಗ್ರಾಮದ ಹೆಸರನ್ನು ಕ್ಷೇತ್ರದ ಹೆಸರಾಗಿ ಪರಿಗಣಿಸಬೇಕು. ಇದೇ ನಿಯಮ ಜಿ.ಪಂ. ಕ್ಷೇತ್ರಗಳ ನಿಗದಿಗೂ ಅನ್ವಯಿಸುತ್ತದೆ.
– ತಾಲೂಕಿನಲ್ಲಿರುವ ಗ್ರಾ.ಪಂ.ಗಳನ್ನು ವಿಭಜಿಸದೆ ಪೂರ್ಣ ಗ್ರಾ.ಪಂ.ಗಳನ್ನು ಒಟ್ಟುಗೂಡಿಸಿ ಜಿ.ಪಂ. ಕ್ಷೇತ್ರ ರಚನೆಯಾಗುವಂತೆ ನೋಡಿಕೊಳ್ಳಬೇಕು.
– ಗ್ರಾ.ಪಂ.ಗಳನ್ನು ಒಟ್ಟುಗೂಡಿಸುವಾಗ ಅಕ್ಕ-ಪಕ್ಕದ ಗ್ರಾ.ಪಂ.ಗಳನ್ನು ಒಟ್ಟುಗೂಡಿಸಬೇಕು. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು. ಬೆಟ್ಟಗುಡ್ಡ, ಅರಣ್ಯ, ಜಲಾಶಯ, ನದಿ ಇತ್ಯಾದಿ ಅಡಚಣೆಗಳು ಇರಬಾರದು.

ಡಿಸಿಗಳ ಕರ್ತವ್ಯಗಳು
– ತಾ.ಪಂ., ಜಿ.ಪಂ. ಸೀಮಾ ನಿರ್ಣಯವನ್ನು ನಿಯಮಾ ನುಸಾರ ಕೂಲಂಕಷವಾಗಿ ಹಾಗೂ ಸ್ಥಳೀಯವಾಗಿ ಪರಿಶೀಲಿಸಿ ಕ್ಷೇತ್ರಗಳ ಗಡಿಗಳನ್ನು ನಿರ್ಣಯಿಸಬೇಕು.
– ಗಡಿಗಳನ್ನು ಗುರುತಿಸಿದ ಅನಂತರ ಪ್ರಸ್ತಾವಗಳನ್ನು ಆಯೋಗಕ್ಕೆ ಸಲ್ಲಿಸುವ ಪೂರ್ವದಲ್ಲಿ ಒಟ್ಟು ಪ್ರಕ್ರಿಯೆಯ ಭಾಗವಾಗಿ ಸ್ಥಳೀಯರ, ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆದು, ಪರಿಶೀಲಿಸಿ ಪ್ರಸ್ತಾವಗಳನ್ನು ಸಲ್ಲಿಸಬೇಕು.
– ಹೊಸದಾಗಿ ರಚಿಸುವ ಜಿ.ಪಂ., ತಾ.ಪಂ. ಕ್ಷೇತ್ರಗಳ ಹೆಸರನ್ನು ನಿಗದಿಪಡಿಸುವಾಗ ಅತೀ ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಹೆಸರಲ್ಲದೇ ಐತಿಹಾಸಿಕ, ಶೈಕ್ಷಣಿಕ, ಸಾಂಸ್ಕೃತಿಕ, ವಾಣಿಜ್ಯ ಇತ್ಯಾದಿ ಮಹತ್ವವಿರುವ ಗ್ರಾಮಗಳ ಹೆಸರು ಪರಿಗಣಿಸಬೇಕು.
-ಪ್ರಸ್ತಾವವನ್ನು ಆಯೋಗಕ್ಕೆ ಸಲ್ಲಿಸುವಾಗ ಕ್ಷೇತ್ರಗಳ ನಕ್ಷೆಗಳೊಂದಿಗೆ ಸಲ್ಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next