Advertisement

ಮಂಗಳೂರು: ದೇವಸ್ಥಾನಗಳ ಕಾಣಿಕೆ ಡಬ್ಬಿಯ ಹಣ ಎಣಿಕೆಗೆ ಮಾರ್ಗಸೂಚಿ ರಚನೆ 

09:46 AM Mar 25, 2022 | Team Udayavani |

ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯ ಹಣ ಎಣಿಕೆ ಸಂದರ್ಭ ಟ್ರಸ್ಟಿಯೊಬ್ಬರು ಹಣ ಎಗರಿಸಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದು ಜಿಲ್ಲಾಡಳಿತದ ಗಮನಕ್ಕೂ ಬಂದು ಇದೀಗ ಎಲ್ಲ ದೇವಸ್ಥಾನಗಳಿಗೆ ಅನ್ವಯವಾಗುವಂತೆ ಹುಂಡಿಯ ಹಣ ಎಣಿಕೆಗೆ ನಿಗದಿತ ಮಾರ್ಗಸೂಚಿ ರಚಿಸಲು ಜಿಲ್ಲಾಡಳಿತ ಮುಂದಾಗಿದೆ.

Advertisement

ಈ ಬಗ್ಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಉದಯವಾಣಿಗೆ ಮಾಹಿತಿ ನೀಡಿದ್ದಾರೆ. ಹುಂಡಿ ಹಣ ಎಣಿಕೆಗೆ ಇದುವರೆಗೆ ನಿರ್ದಿಷ್ಟ ಮಾನದಂಡ ಅಥವಾ ಮಾರ್ಗಸೂಚಿ ಇರಲಿಲ್ಲ. ಮುಂದಿನ ಸೋಮವಾರ ಧಾರ್ಮಿಕ ಪರಿಷತ್‌ ಸಭೆ ನಡೆಯಲಿದ್ದು, ಮಾರ್ಗಸೂಚಿ ಕುರಿತಂತೆ ಚರ್ಚಿಸಿ ನಿರ್ಣಯ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ವರದಿ ಸಲ್ಲಿಸಲು ಸೂಚನೆ :

ಕದ್ರಿಯಲ್ಲಿ ಹಣ ಎಣಿಕೆ ವೇಳೆ ಟ್ರಸ್ಟಿಯೊಬ್ಬರು ಹಣ ಎಗರಿಸಿದ್ದಾರೆಂಬ ಆರೋಪದ ಸತ್ಯಾಸತ್ಯತೆಯನ್ನು ಅರಿಯುವ ನಿಟ್ಟಿನಲ್ಲಿ ದೇವಸ್ಥಾನದ ಸಿಸಿ ಟಿವಿ ಫುಟೇಜ್‌ ಪರಿಶೀಲಿಸಿ ವರದಿ ಸಲ್ಲಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ವರದಿಯನ್ನು ಆಧರಿಸಿ ಅಗತ್ಯ ಬಿದ್ದರೆ ಎಫ್‌ಐಆರ್‌ ದಾಖಲಿಸಲು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ಟ್ರಸ್ಟಿಯಿಂದ ದೂರು :

Advertisement

ಗುರುವಾರ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಟ್ರಸ್ಟಿ ಎಚ್‌.ಕೆ. ಪುರುಷೋತ್ತಮ ಅವರು ಕದ್ರಿ ಠಾಣೆಗೆ ದೂರೊಂದನ್ನು ನೀಡಿ, ಕಾಣಿಕೆ ಡಬ್ಬಿಯ ಹಣ ಎಣಿಕೆ ಸಂದರ್ಭ ಹಣವನ್ನು ಎಗರಿಸಿದ ಆರೋಪದ ಕುರಿತು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

ಇನ್ನೊಂದೆಡೆ ಅವರು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೂ ದೂರು ನೀಡಿ ಸತ್ಯಾಂಶ ಬಹಿರಂಗಪಡಿಸುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next