Advertisement
ಜಿಲ್ಲೆಯಿಂದ ಇತರ ರಾಜ್ಯಗಳಿಗೆ ಪ್ರಯಾಣಿಸುವವರು sevasindhu.karnataka.gov.in ನಲ್ಲಿ ಲಾಗಿನ್ ಆಗಿ ಹೆಸರು, ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲದವರು ಗ್ರಾ.ಪಂ. ಕಚೇರಿಗಳು, ಪಟ್ಟಣ ಪಂಚಾಯತ್, ನಗರಸಭೆ, ಪುರಸಭೆ ಕಚೇರಿಗಳು, ತಾಲೂಕು ಕಚೇರಿ, ನಗರಪಾಲಿಕೆಯ ವಲಯ ಕಚೇರಿಗಳು, ಮಂಗಳೂರು ಒನ್‌ಗಳಲ್ಲೂ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಮುಖ್ಯಮಂತ್ರಿಯರ ಅಧ್ಯಕ್ಷತೆಯಲ್ಲಿ ಮೇ 2ರಂದು ನಡೆದ ವೀಡಿಯೋ ಸಂವಾದದಲ್ಲಿ ನೀಡಲಾಗಿರುವ ಸೂಚನೆಯಂತೆ ದ.ಕ.ದಿಂದ ಹೊರ ಜಿಲ್ಲೆಗಳಿಗೆ ಪ್ರಯಾಣಿಸುವವರಿಗೆ ಒಂದು ಬಾರಿ ಪ್ರಯಾಣಿಸಲು ಅವಕಾಶವಿರುತ್ತದೆ. ಇದಕ್ಕಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗಳು, ಗ್ರಾಮಾಂತರ ಪ್ರದೇಶಗಳಲ್ಲಿ ಸಮೀಪದ ಪೊಲೀಸ್ ಠಾಣೆಗಳಲ್ಲಿ ಅರ್ಜಿ ಸಲ್ಲಿಸಬೇಕು. ಪ್ರಯಾಣದ ಅನುಮತಿಯನ್ನು ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರು ಅಥವಾ ಪೊಲೀಸ್ ಉಪ ಆಯುಕ್ತರ ಕಚೇರಿ ಗಳಿಂದ ನೀಡಲಾಗುವುದು. ಕೋವಿಡ್ ಲಕ್ಷಣರಹಿತರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಅನುಮೋದಿತ ಪ್ರಯಾಣಿಕರು ಮಾಸ್ಕ್, ಗ್ಲೌಸ್ ಧರಿಸಬೇಕು. ಕೇಂದ್ರ, ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಮುಂಜಾಗರೂಕತ ಕ್ರಮಗಳನ್ನು ವಹಿಸಬೇಕು. ಪ್ರಯಾಣವನ್ನು ಸ್ವೀಕರಿಸುವ ಜಿಲ್ಲೆಗಳಲ್ಲಿನ ಎಲ್ಲ ಕ್ವಾರಂಟೈನ್ ಸಂಬಂಧಿತ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಸಂಚರಿಸುವ ಮಾರ್ಗದ ಮಧ್ಯೆ ಎಲ್ಲಿಯೂ ನಿಲುಗಡೆ ಮಾಡುವಂತಿಲ್ಲ. ನೀಡಲಾಗುವ ಪಾಸ್‌ಗಳನ್ನು ದುರುಪಯೋಗಪಡಿಸಿದರೆ ಕಾನೂನುರೀತಿ ಕ್ರಮ ಕೈಗೊಳ್ಳಲಾಗು ವುದು ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ದ.ಕ. ಜಿಲ್ಲೆಗೆ ಬೇರೆ ರಾಜ್ಯಗಳಿಂದ ಆಗಮಿಸ ಬಯಸುವವರೂ ಇದೇ ಮಾದರಿಯನ್ನು ಅನುಸರಿಸಬೇಕು.