ಹಿರೇಕೆರೂರ: ಸಾಧನೆ ಮಾಡಲು ಜ್ಞಾನ ಮತ್ತು ಮಾರ್ಗದರ್ಶನದ ಜತೆಗೆ ಆತ್ಮವಿಶ್ವಾಸ ಅತೀ ಅವಶ್ಯ. ಮಕ್ಕಳಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಳಿಸಿ ಅವರ ಸಾಧನೆಗೆ ಸ್ಫೂರ್ತಿ ತುಂಬಬೇಕು ಎಂದು ನಟ ವಿಜಯರಾಘವೇಂದ್ರ ಹೇಳಿದರು.
ತಾಲೂಕಿನ ಬಾಳಂಬೀಡ ಗ್ರಾಮದ ಕೌರವ ಶಿಕ್ಷಣ ಸಂಸ್ಥೆಯಲ್ಲಿ ನಡೆದ 11ನೇ ವರ್ಷದ ಅಕ್ಷರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಗುರಿ ಸಾಧಿಸುವ ಛಲವಿರಬೇಕು. ಸಾಧನೆ ಮಾಡುವ ಆತ್ಮವಿಶ್ವಾಸವಿರಬೇಕು. ಶಿಕ್ಷಣದಿಂದ ಸಮಾಜದಲ್ಲಿ ಎಲ್ಲವನ್ನೂ ಪಡೆಯಲು ಸಾಧ್ಯ. ಸತತ ಪರಿಶ್ರಮ, ಏಕಾಗ್ರತೆಯಿಂದ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆ ಅಲಂಕರಿಸುವ ಜತೆಗೆ ಸಂಸ್ಕಾರದ ಗುಣಗಳನ್ನು ಬೆಳೆಸಿಕೊಳ್ಳಿ. ಗುರು ಹಿರಿಯರಿಗೆ ಗೌರವ ನೀಡುವ ಮೂಲಕ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುವಂತೆ ಕರೆ ನೀಡಿದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ಗುರು ಹಿರಿಯರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದು ಪ್ರತಿಭಾವಂತರಾಗಬೇಕು. ವಿದ್ಯಾರ್ಥಿ ದೆಸೆಯಿಂದಲೇ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೌರವ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಶಾಸಕ ಬಿ.ಸಿ. ಪಾಟೀಲ, ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಪಾಲಕರು ಮತ್ತು ಪೋಷಕರ ಪಾತ್ರವೂ ಅತ್ಯಮೂಲ್ಯವಾಗಿದ್ದು, ಅವರ ನಿತ್ಯದ ಶಾಲಾ ಚಟುವಟಿಕೆಗಳ ಮೇಲೆ ನಿಗಾ ಇರಿಸಿಕೊಂಡು ಶೈಕ್ಷಣಿಕ ಪ್ರಗತಿಗೆ ಶ್ರಮಿಸುವ ಜತಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.
ಸಿಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್.ಪಾಟೀಲ, ಕೌರವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವನಜಾ ಪಾಟೀಲ, ಉಪಾಧ್ಯಕ್ಷೆ ಸೃಷ್ಟಿ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಸಿದ್ಧಲಿಂಗಪ್ಪ, ಐ.ಆರ್. ಲಮಾಣಿ, ಸಂಸ್ಥೆಯ ಆಡಳಿತಾಧಿಕಾರಿ ಅಂಬರೀಶ ಹೂಗಾರ, ಮುಖ್ಯಶಿಕ್ಷಕರಾದ ಶಾಂತೇಶ ಪೂಜಾರ, ಮಂಜುನಾಥ ವಂಟಕರ ಸೇರಿದಂತೆ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಹಾಜರಿದ್ದರು. ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.