Advertisement

ಉಪಾಧ್ಯಾಯರ ಆದರ್ಶ ಬಿಜೆಪಿ ಸಂಘಟನೆಗೆ ಮಾರ್ಗದರ್ಶನ

08:51 PM Feb 16, 2020 | Lakshmi GovindaRaj |

ಬಂಗಾರಪೇಟೆ: ಪಂಡಿತ್‌ ದೀನದಯಾಳ್‌ ಉಪಾಧ್ಯಾಯರ ತತ್ವಾದರ್ಶ ಪಕ್ಷ ಸಂಘಟನೆಗೆ ಮಾರ್ಗದರ್ಶನವಾಗಿದ್ದು, ಮಂಡಲ ಅಧ್ಯಕ್ಷರ ಜೊತೆ ಕೈಜೋಡಿಸಿ ಬಿಜೆಪಿ ಸಂಘಟಿಸಬೇಕು ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಬಿ.ಪಿ.ವೆಂಕಟಮುನಿಯಪ್ಪ ಹೇಳಿದರು.

Advertisement

ಪಟ್ಟಣದಲ್ಲಿ ತಾಲೂಕು ಬಿಜೆಪಿ ಘಟಕ ಏರ್ಪಡಿಸಿದ್ದ ಉಪಾಧ್ಯಾಯರ ಸಮರ್ಪಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮ ಆಡಳಿತ ನೀಡುತ್ತಿದ್ದಾರೆ. ಪಕ್ಷದಲ್ಲಿ ಉನ್ನತ ಸ್ಥಾನ ಪಡೆದಿರುವವರು ಅವರ ಜೊತೆ ಕೈಜೋಡಿಸಬೇಕು. ತಾಲೂಕಿನಲ್ಲೂ ಪಕ್ಷ ಸಂಘಟಿಸಿ ಎಲ್ಲಾ ಕಡೆ ಅಧಿಕಾರಕ್ಕೆ ತರುವ ಮೂಲಕ ಜನಸೇವೆ ಮಾಡಬೇಕೆಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ವಿವಿಧ ಮೋರ್ಚಾಗೆ ಆಯ್ಕೆ: ಕೆಲವೇ ದಿನಗಳಲ್ಲಿ ಮಂಡಲ ಕಾರ್ಯಕರ್ತರ ಸಭೆ ಕರೆದು ಪದಾಧಿಕಾರಿಗಳು ಮತ್ತು ವಿವಿಧ ಮೋರ್ಚಾಗಳ ಅಧ್ಯಕ್ಷರ ಆಯ್ಕೆ ಮಾಡಲಾಗುತ್ತದೆ. ಪಂಡಿತ್‌ ದೀನದಯಾಳ್‌ ಉಪಾಧ್ಯಾಯರು ಭಾರತೀಯ ಜನಸಂಘವನ್ನು ಬಲಪಡಿಸಲು ಹಗಲಿರುಳು ಶ್ರಮಿಸಿದ್ದರು. ಅವರ ಆದರ್ಶದಲ್ಲಿ ಬೆಳೆದ ಮಾಜಿ ಪ್ರಧಾನಿ ದಿ.ವಾಜಪೇಯಿ, ಲಾಲ್‌ ಕೃಷ್ಣ ಅಡ್ವಾಣಿ ಪಕ್ಷ ಕಟ್ಟಿದ್ದರಿಂದ ಬಿಜೆಪಿ ಅಧಿಕಾರದಲ್ಲಿದೆ ಎಂದು ಹೇಳಿದರು.

ಪಕ್ಷದ ಹಿರಿಯ ಮುಖಂಡ ಬಿ.ಹೊಸರಾಯಪ್ಪ ಮಾತನಾಡಿ, ಪಂಡಿತ್‌ ದೀನದಯಾಳ್‌ ಉಪಾಧ್ಯಾಯರು ನಡೆದು ಬಂದ ಹಾದಿ ಸ್ಮರಿಸಿದರು. ಶ್ಯಾಮಪ್ರಸಾದ್‌ ಮುಖರ್ಜಿ ಅವರೊಂದಿಗೆ ಭಾರತೀಯ ಜನಸಂಘ ಬೆಳೆಸಿದ ರೀತಿಯನ್ನು ಮೆಲಕು ಹಾಕಿದರು.

ಉತ್ತಮ ಕಾರ್ಯ ಜನರಿಗೆ ತಲುಪಿಸಿ: ಬಿಜೆಪಿಯ ಜನಪರ ಆಡಳಿತವನ್ನು ಸಹಿಸದ ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳು ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ ಹೊಸರಾಯಪ್ಪ, ಬಿಜೆಪಿ ಕಾರ್ಯಕರ್ತರು ಸರ್ಕಾರದ ಉತ್ತಮ ಕಾರ್ಯಗಳನ್ನು ಜನರಿಗೆ ತಲುಪಿಸುವ ಮೂಲಕ ಬಿಜೆಪಿಯನ್ನು ಸಂಘಟಿಸಬೇಕೆಂದು ಕಿವಿಮಾತು ಹೇಳಿದರು.

Advertisement

ಶಂಕರ್‌ ಅವರ ಸೇವೆ ಸ್ಮರಿಸಿ: ಜಿಪಂ ಸದಸ್ಯ ಬಿ.ವಿ.ಮಹೇಶ್‌ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ಸಂಘಟನೆಗೆ ಶ್ರಮಿಸಿದ ಆರ್‌.ಶಂಕರ್‌ ಅವರ ಸೇವೆಯನ್ನು ಪಕ್ಷದ ಕಾರ್ಯಕರ್ತರು ಸ್ಮರಿಸಬೇಕಾಗಿದೆ. ಬೆರಳೆಣಿಕೆ ಕಾರ್ಯಕರ್ತರನ್ನು ಕಟ್ಟಿಕೊಂಡು ಪಕ್ಷ ಸಂಘಟಿಸಿದ ಕೀರ್ತಿ ಶಂಕರ್‌ ಅವರದ್ದಾಗಿದೆ. ಅವರಿಂದು ಅನಾರೋಗ್ಯದಲ್ಲಿದ್ದಾರೆ. ಅವರ ಜೊತೆ ಪಕ್ಷದ ಕಾರ್ಯಕರ್ತರು ನಿಲ್ಲಬೇಕು. ಪಕ್ಷಕ್ಕಾಗಿ ಸಮರ್ಪಣೆಯಾಗುವ ನಿಧಿಯನ್ನು ಶಂಕರ್‌ಗೆ ಸಮರ್ಪಿಸಲು ಸಹಕರಿಸಬೇಕೆಂದೂ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ದೀನದಯಾಳರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮಂಡಲ ಅಧ್ಯಕ್ಷ ನಾಗೇಶ್‌ ಮಾತನಾಡಿದರು. ತಾಪಂ ಸದಸ್ಯ ಅಮರೇಶ್‌, ಲಕ್ಷ್ಮಯ್ಯ, ಮುಖಂಡರಾದ ನಾರಾಯಣಗೌಡ, ಪ್ರಭಾಕರರಾವ್‌, ಪ್ರಧಾನ ಕಾರ್ಯದರ್ಶಿ ಅನುಚಂದ್ರಶೇಖರ್‌ ಸ್ವಾಗತಿಸಿ ವಂದಿಸಿದರು. ನಗರ ಘಟಕದ ಕಾರ್ಯದರ್ಶಿ ಮಂಜುನಾಥ್‌, ಭಜರಂಗದಳ ಮಹೇಶ್‌, ಮಂಜುನಾಥ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next