Advertisement

ಎಲ್ಕೆಜಿ, ಯುಕೆಜಿ ಬೋಧನೆಗೂ ಅತಿಥಿ ಶಿಕ್ಷಕರು!

01:58 AM May 29, 2019 | mahesh |

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಆರಂಭವಾಗುತ್ತಿರುವ ಪೂರ್ವಪ್ರಾಥಮಿಕ ತರಗತಿ(ಎಲ್ಕೆಜಿ, ಯುಕೆಜಿ) ಮಕ್ಕಳಿಗೆ ಬೋಧಿಸಲು ತರಬೇತಿ ಪಡೆದ ನುರಿತ ಕಾಯಂ ಶಿಕ್ಷಕರನ್ನು ನೇಮಿಸದೆ, ಶಿಕ್ಷಣದ ಆರಂಭವನ್ನು ಅತಿಥಿ ಶಿಕ್ಷಕರ ಮೂಲಕ ನೀಡಲು ಇಲಾಖೆ ಮುಂದಾಗಿದೆ.

Advertisement

ಸದಾ ಗುಣಮಟ್ಟದ ಶಿಕ್ಷಣವನ್ನು ಹುಡುಕುತ್ತಿರುವ ಮಕ್ಕಳ ಪಾಲಕ, ಪೋಷಕರಿಗೆ ಇಲಾಖೆಯ ಈ ಕ್ರಮ ಕೊಡಲಿ ಪೆಟ್ಟು ನೀಡಿದಂತಾಗಿದೆ. ರಾಜ್ಯ ಸರ್ಕಾರ 2019-20ನೇ ಸಾಲಿನಿಂದ 276 ಕರ್ನಾಟಕ ಪಬ್ಲಿಕ್‌ ಶಾಲೆಗಳು ಸೇರಿ ಸಾವಿರ ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ನಡೆಸಲು ಸೂಚನೆ ನೀಡಿತ್ತು. ಅದರಂತೆ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಅರ್ಹ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ನಡೆಸಲು ನಿರ್ದೇಶಿಸಿತ್ತು.

ಹೀಗಾಗಿ ರಾಜ್ಯದ ಎಲ್ಲ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಿ, ದಾಖಲಾತಿ ಪ್ರಕ್ರಿಯೆ ಕೂಡ ನಡೆಸಲಾಗುತ್ತಿದೆ. ಆದರೆ, ಮಕ್ಕಳಿಗೆ ಉತ್ಕೃಷ್ಟ ಬೋಧನೆಗೆ ಬೇಕಾದ ಕಾಯಂ ಶಿಕ್ಷಕರನ್ನು ನೇಮಿಸುವುದನ್ನೇ ಮರೆತು ಬಿಟ್ಟಿದೆ. ಸರ್ಕಾರಿ ಶಾಲೆಗಳಲ್ಲಿ ಪಾಲಕ, ಪೋಷಕರು ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭ ಮಾಡಿರುವುದು ಸಾಕಷ್ಟು ಪಾಲಕ, ಪೋಷಕರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು. ಖಾಸಗಿ ಶಾಲೆಯಲ್ಲಿ ಲಕ್ಷಾಂತರ ರೂ.ನೀಡಿ ಮಕ್ಕಳನ್ನು ಸೇರಿಸುವ ಬದಲು ಸರ್ಕಾರಿ ಶಾಲೆಯಲ್ಲೇ ಎಲ್ಕೆಜಿ ಯುಕೆಜಿಗೆ ಸೇರಿಬಹುದು ಎಂದಿದ್ದ ಪಾಲಕರಿಗೆ ಈಗ ನಿರಾಸೆ ಮೂಡಿದೆ.

ತರಾತುರಿಯಲ್ಲಿ ಪೂರ್ವ ಪ್ರಾಥಮಿಕ ಶಾಲೆಯನ್ನು ಆರಂಭಿಸಲು ಮುಂದಾಗಿರುವ ಇಲಾಖೆ, ಕಾಯಂ ಶಿಕ್ಷಕರ ಬದಲಿಗೆ ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ದೇಶನ ನೀಡಿದೆ. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯೇ ಅತಿಥಿ ಶಿಕ್ಷಕರನ್ನು ನೇಮಿಸಲಿದೆ. ಇಲಾಖೆಯಿಂದ 7500 ರೂ.ಗಳ ವರೆಗೂ ಮಾಸಿಕ ವೇತನ ನಿಗದಿ ಮಾಡಲಾಗಿದೆ. ಸ್ಥಳೀಯವಾಗಿಯೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವುದರಿಂದ ಹಲವು ರೀತಿಯಲ್ಲಿ ಗುಣಮಟ್ಟದ ಹೊಂದಾಣಿಕೆ ನಡೆದು, ಓಲೈಸಬೇಕಾದ ಪ್ರಮೆಯಗಳು ಇರುತ್ತದೆ. ಕನಿಷ್ಠ ಮಾನದಂಡದಡಿಯಲ್ಲೇ ಅತಿಥಿ ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ಶಿಕ್ಷಣ ತಜ್ಞರು ಆಗ್ರಹಿಸಿದ್ದಾರೆ.

ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಬೋಧಿಸಲು ವಿಶೇಷ ಕಲೆ ಬೇಕಾಗುತ್ತದೆ. ಅಲ್ಲದೆ, ಎಲ್ಲ ಮಕ್ಕಳನ್ನು ಸಮಾನ ಭಾವದಿಂದ ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ತರಬೇತಿ ಇಲ್ಲದವರನ್ನು ನೇಮಿಸಿಕೊಂಡು ಮಕ್ಕಳಿಗೆ ಯಾವ ಮಾದರಿಯ ಗುಣಮಟ್ಟ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ ಎಂದು ಪಾಲಕ ಪೋಷಕರು ಪ್ರಶ್ನಿಸಿದ್ದಾರೆ.

Advertisement

ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ತೆರೆಯಲು ಮೊದಲು ಎಲ್ಲ ಸೌಲಭ್ಯವನ್ನು ಒದಗಿಸಿ, ಕಾಯಂ ಶಿಕ್ಷಕರನ್ನು ನೇಮಿಸಿ, ಅವರಿಗೆ ಸೂಕ್ತ ತರಬೇತಿ ನೀಡಬೇಕಿತ್ತು. ಅಲ್ಲದೆ, ಎಲ್ಕೆಜಿ, ಯುಕೆಜಿ ಕೊಠಡಿ ವಿನ್ಯಾಸ, ಕುಳಿತುಕೊಳ್ಳಲು ಅವಶ್ಯ ಇರುವ ಕುರ್ಚಿ ಹಾಗೂ ಇತರೆ ಸೌಲಭ್ಯಗಳು ಮಕ್ಕಳಿಗೆ ಪೂರಕವಾಗಿರಬೇಕು. ಇದ್ಯಾವುದನ್ನೂ ಶಾಲೆಗಳಿಗೆ ಒದಗಿಸದೇ ಏಕಾಏಕಿ ಪೂರ್ವ ಪ್ರಾಥಮಿಕ ಶಾಲೆ ತೆರೆದು, ಅತಿಥಿ ಶಿಕ್ಷಕರ ಮೂಲಕ ಶಿಕ್ಷಣ ನೀಡಲು ಮುಂದಾಗಿರುವುದಕ್ಕೆ ಪಾಲಕರು ಆಕ್ರೋಶ ಹೊರ ಹಾಕಿದ್ದಾರೆ.

ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗೆ ಸ್ಥಳೀಯವಾಗಿ ಅತಿಥಿ ಶಿಕ್ಷಕರನ್ನು ನೇಮಿಸಲು ಸೂಚಿಸಿದ್ದೇವೆ. ಹೊಸ ನೇಮಕಾತಿಯಾದ ನಂತರ ಅತಿಥಿ ಶಿಕ್ಷಕರನ್ನು ತೆರೆವುಗೊಳಿಸುತ್ತೇವೆ. ಅತಿಥಿ ಶಿಕ್ಷಕರ ಹುದ್ದೆಗೆ ತರಬೇತಿ ಪಡೆದ ಸ್ಥಳೀಯ ಪ್ರತಿನಿಧಿಗಳಿಗೆ ಆದ್ಯತೆ ನೀಡಲಾಗುತ್ತದೆ.
● ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ

ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸುತ್ತಿರುವುದು ಒಳ್ಳೆಯ ಕ್ರಮ. ಇದಕ್ಕಾಗಿ ಹೊಸ ನೇಮಕಾತಿ ಮಾಡಿದರೂ ಸಮಸ್ಯೆಯಿಲ್ಲ ಅಥವಾ ಕಾರ್ಯಭಾರದ ಆಧಾರದಲ್ಲಿ ಇರುವ ಶಿಕ್ಷಕರಿಗೆ ಹಂಚಿಕೆ ಮಾಡಿದರೂ ನಿಭಾಯಿಸುತ್ತೇವೆ.
● ವಿ.ಎಂ.ನಾರಾಯಣಸ್ವಾಮಿ, ಅಧ್ಯಕ್ಷ, ಸರ್ಕಾರಿ ಶಾಲಾ ಶಿಕ್ಷಕರ ಸಂಘ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next