Advertisement

ಅತಿಥಿ ಉಪನ್ಯಾಸಕರು-ಶಿಕ್ಷಕರ ಸಂಕಷ್ಟಕ್ಕೆ ಸ್ಪಂದಿಸಲು ಒತ್ತಾಯ

10:25 AM Jun 11, 2020 | Suhan S |

ಹುಬ್ಬಳ್ಳಿ: ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರು, ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸುತ್ತ ತೀವ್ರ ಸಂಕಷ್ಟದಲ್ಲಿದ್ದು, ರಾಜ್ಯ ಸರಕಾರ ಕೂಡಲೇ ನೆರವಿಗೆ ಧಾವಿಸಬೇಕೆಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರು, ಶಿಕ್ಷಕರ ವೇದಿಕೆ ಒತ್ತಾಯಿಸಿದೆ.

Advertisement

ಅತಿಥಿ ಉಪನ್ಯಾಸಕರಿಗೆ ಸಮರ್ಪಕವಲ್ಲದ ವೇತನ ನೀಡಲಾಗುತ್ತಿದೆ. ಅಲ್ಲದೆ ಯಾವುದೇ ಕನಿಷ್ಟ ಸೌಲಭ್ಯಗಳು ಇಲ್ಲ. ಇಪಿಎಫ್‌ ಅನ್ನು ಶಿಕ್ಷಣ ಸಂಸ್ಥೆಗಳು ನೀಡುತ್ತಿಲ್ಲ. ವಯೋಮಿತಿ ಮೀರಿದ ಹಾಗೂ ಮೀರುತ್ತಿರುವ ಅತಿಥಿ ಉಪನ್ಯಾಸಕರಿಗೆ, ಶಿಕ್ಷಕರಿಗೆ ಸೇವಾ ಭದ್ರತೆ ಇಲ್ಲ ಸೇರಿದಂತೆ ಅನೇಕ ಸಮಸ್ಯೆಗಳ ಸುಳಿಯಲ್ಲಿ ಅತಿಥಿ ಉಪನ್ಯಾಸಕರು, ಶಿಕ್ಷಕರು ಸಿಲುಕಿದ್ದಾರೆ. ಇಂತಹುಗಳ ನಡುವೆ ಮಹಾಮಾರಿ ಕೋವಿಡ್ ಹಾವಳಿಯಿಂದ ಕಳೆದೆರಡು ತಿಂಗಳಿಂದ ವೇತನವಿಲ್ಲ. ಅಲ್ಲದೇ ಮುಂದಿನ ಮೂರು ತಿಂಗಳವರೆಗೂ ವೇತನ ಸಿಗುವ ಭರವಸೆ ಇಲ್ಲದಾಗಿದೆ. ಈ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರು, ಶಿಕ್ಷಕರು ಕೆಲಸ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳು ಗಮನ ಹರಿಸಿಲ್ಲ. ಕೇಂದ್ರ ಸರಕಾರ ರೂಪಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್‌ನಲ್ಲಿಯೂ ಕೂಡ ಅತಿಥಿ ಉಪನ್ಯಾಸಕರ, ಶಿಕ್ಷಕರ ಸ್ಥಿತಿ ಸುಧಾರಿಸುವ ಅಂಶಗಳಿಗೆ ಆದ್ಯತೆ ನೀಡಿಲ್ಲ. ಆದ್ದರಿಂದ ರಾಜ್ಯ ಸರಕಾರ ತಕ್ಷಣವೇ ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕ ಕಲ್ಯಾಣಕ್ಕಾಗಿ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ವೇದಿಕೆ ಅಧ್ಯಕ್ಷ ಶೇಖರ ಸುಂಕದ, ಉಪಾಧ್ಯಕ್ಷ ವೀರನಬಸನಗೌಡ ಎಂ.ಬಿ., ಕಾರ್ಯದರ್ಶಿ ಪ್ರೊ| ಟಿ.ಬಿ. ದೇಸಾಯಿ ಆಗ್ರಹಿಸಿದ್ದಾರೆ.

ಹುಬ್ಬಳ್ಳಿ ನವನಗರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ/ಶಿಕ್ಷಕರ ವೇದಿಕೆ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ರಾಜ್ಯದ ಅತಿಥಿ ಉಪನ್ಯಾಸಕರು, ಶಿಕ್ಷಕರು ಸದಸ್ಯತ್ವ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಶೇಖರ ಸುಂಕದ(9945629809), ಪ್ರೊ|ಟಿ.ಬಿ. ದೇಸಾಯಿ (8050649099) ಅವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next