Advertisement

Udupi: ಬಿಪಿಎಲ್‌ಗೆ ಅಕ್ಕಿಯೂ ಇಲ್ಲ , ಹಣವೂ ಸಿಗುತ್ತಿಲ್ಲ !

01:12 AM Dec 10, 2024 | Team Udayavani |

ಉಡುಪಿ: ಮೂರು ತಿಂಗಳುಗಳಿಂದ ರಾಜ್ಯ ಸರಕಾರದ ಅನ್ನಭಾಗ್ಯದ ಹಣವೂ ಬಾರದೆ, ಅಕ್ಕಿಯೂ ಸಿಗದೆ ಬಿಪಿಎಲ್‌ ಕಾರ್ಡ್‌ ದಾರರು ನೊಂದಿದ್ದಾರೆ. ಅರ್ಜಿ ಸಲ್ಲಿಸಿದವರಿಗೆ ಹೊಸ ಬಿಎಪಿಎಲ್‌ ಕಾರ್ಡ್‌ ಸಿಗುತ್ತಿಲ್ಲ, ಎಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ.

Advertisement

ಉಡುಪಿ ಜಿಲ್ಲೆಯಲ್ಲಿ ಬಿಪಿಎಲ್‌, ಅಂತ್ಯೋದಯದ 1.96 ಲಕ್ಷ ಕಾರ್ಡ್‌ಗಳಿವೆ. ಈ ಪೈಕಿ 1.80 ಲಕ್ಷ ಕಾರ್ಡ್‌ಗಳು ಅನ್ನಭಾಗ್ಯದ ಅಕ್ಕಿ ಅಥವಾ ಹಣ ಪಡೆಯಲು ಅರ್ಹ. ದ. ಕನ್ನಡ ಜಿಲ್ಲೆಯಲ್ಲಿ 4.84 ಲಕ್ಷ ಕಾರ್ಡ್‌ಗಳಿದ್ದು, ಅವುಗಳಲ್ಲಿ 4.50 ಲಕ್ಷಕ್ಕೂ ಅಧಿಕ ಕಾರ್ಡ್‌ಗಳು ಅನ್ನಭಾಗ್ಯ ಅಕ್ಕಿ ಅಥವಾ ಹಣಕ್ಕೆ ಅರ್ಹವಾಗಿವೆ.

ಅರ್ಹ ಕಾರ್ಡ್‌ಗಳಿಗೆ 2024ರ ಆಗಸ್ಟ್‌ ತಿಂಗಳಿನಲ್ಲಿ (ಜುಲೈ ತಿಂಗಳ) ಕೊನೆಯದಾಗಿ ಪಡಿತರಕ್ಕೆ ಸಮನಾದ ಹಣವನ್ನು ಪಡಿತರ ಚೀಟಿದಾರರ ಖಾತೆಗೆ ವರ್ಗಾಯಿಸಲಾಗಿದೆ. ಅನಂತರ ಸೆಪ್ಟಂಬರ್‌, ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಪಡಿತರವೂ ಸಿಕ್ಕಿಲ್ಲ, ಹಣವೂ ಬಂದಿಲ್ಲ.

ಕೇಂದ್ರದ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ
ಕೇಂದ್ರ ಸರಕಾರದಿಂದ ಬಿಪಿಎಲ್‌ ಹಾಗೂ ಅಂತ್ಯೋದಯ ಕುಟುಂಬಕ್ಕೆ ಪ್ರತೀ ತಿಂಗಳು ಅಕ್ಕಿ ಉಚಿತವಾಗಿ ನೀಡಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಅರ್ಹತೆಯ ಮಾನದಂಡ ಬದಲು
ಈ ಹಿಂದೆ ನಿರಂತರ 6 ತಿಂಗಳು ಅಕ್ಕಿ ಪಡೆಯದವರ ಬಿಪಿಎಲ್‌ ಕಾರ್ಡ್‌ ರದ್ದಾಗುತ್ತಿತ್ತು. ಅವರಿಗೆ ಉಚಿತ ಅಕ್ಕಿಯೂ ಸಿಗುತ್ತಿರಲಿಲ್ಲ. ಈಗ ನಿರಂತರ ಮೂರು ತಿಂಗಳು ಅಕ್ಕಿ ಪಡೆಯದವರಿಗೆ ಡಿಬಿಟಿ ಮೂಲಕ ಹಣವೂ ಬರುವುದಿಲ್ಲ. ಇಲಾಖೆಯ ತಾಂತ್ರಿಕ ಕಾರಣಕ್ಕೆ ಪಡಿತರ ಪಡೆಯದವರಿಗೂ ಹಣ ಬರದೆ ಇರುವ ಸಾಧ್ಯತೆ ಇದೆ. ನಿರಂತರ ಅಕ್ಕಿಯನ್ನಾದರೂ ರಾಜ್ಯ ಸರಕಾರ ನೀಡಲಿ ಎಂದು ಬಿಪಿಎಲ್‌ ಕಾರ್ಡ್‌ದಾರರು ಆಗ್ರಹಿಸಿದ್ದಾರೆ.

Advertisement

ಪರಿಶೀಲನೆ ತಾತ್ಕಾಲಿಕ ಸ್ಥಗಿತ
ಅನರ್ಹ ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಆದಾಯ ತೆರಿಗೆ ಪಾವತಿದಾರರು ಹಾಗೂ ಸರಕಾರಿ ನೌಕರರಿಗೆ ಸಂಬಂಧಿಸಿದ ಬಿಪಿಎಲ್‌ ಕಾರ್ಡ್‌ಗಳಿದ್ದರೆ ಅವುಗಳನ್ನು ಅನರ್ಹಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಆಹಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಡ್‌ ಪಡೆಯುವುದೇ ಕಷ್ಟ
ಹೊಸ ಪಡಿತರ ಚೀಟಿ ಪಡೆಯಲು ಉಭಯ ಜಿಲ್ಲೆಯಲ್ಲಿ 2021ರಿಂದ ಈಚೆಗೆ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ತುರ್ತು ಆರೋಗ್ಯ ಕಾರಣ ಹೊರತುಪಡಿಸಿ ಬೇರೆ ಯಾವುದೇ ಕಾರ್ಡ್‌ಗಳು ವಿತರಣೆ ಆಗುತ್ತಿಲ್ಲ. ಈಗಾಗಲೇ ಅನುಮೋದನೆ ನೀಡಿದ ಅರ್ಜಿಗಳಿಗೂ ಕಾರ್ಡ್‌ ಬರುತ್ತಿಲ್ಲ. ಹೊಸದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅನರ್ಹ ಬಿಪಿಎಲ್‌ ಕಾರ್ಡ್‌ ಮಾತ್ರ ಎಪಿಎಲ್‌ ಆಗುತ್ತಿದೆ. ಕುಟುಂಬದಿಂದ ಬೇರ್ಪಟ್ಟ ಕಾರ್ಡ್‌ಗಳಿಗೆ ಹೊಸ ಎಪಿಎಲ್‌ ಕಾರ್ಡ್‌ ಕೂಡ ಸಿಗುತ್ತಿಲ್ಲ. ಹೀಗಾಗಿ ಕುಟುಂಬದಿಂದ ಬೇರ್ಪಟ್ಟು ಎಪಿಎಲ್‌ ಕಾರ್ಡ್‌ ಕೂಡ ಮಾಡಿಸಿಕೊಳ್ಳಲಾಗದೆ ಅನೇಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಸರಕಾರದ ನಿರ್ದೇಶನದಂತೆ ಆದಾಯ ತೆರಿಗೆದಾರರು ಹಾಗೂ ಸರಕಾರಿ ನೌಕರರ ಕಾರ್ಡ್‌ಗಳ ಪರಿಶೀಲನೆ ಮಾತ್ರ ಆಗುತ್ತಿದೆ. ಉಳಿದಂತೆ ಯಾವುದೇ ಕಾರ್ಡ್‌ ಪರಿಶೀಲನೆ ಸದ್ಯ ನಡೆಯುತ್ತಿಲ್ಲ.
-ರವೀಂದ್ರ, ಆಹಾರ ಇಲಾಖೆ ಉಪ ನಿರ್ದೇಶಕರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next