Advertisement

ಅತಿಥಿ ಉಪನ್ಯಾಸಕರಿಗೊಲಿಯದ “ಅತಿಥಿದೇವೋಭವ’

12:28 AM Oct 15, 2020 | mahesh |

ಬೆಳ್ತಂಗಡಿ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೆರವಿಗೆ ಧಾವಿಸಿದ್ದ ಖಾಯಂ ಉಪನ್ಯಾಸಕರು ತಮ್ಮ ಒಂದು ದಿನದ ವೇತನ ನೀಡಲು ಮುಂದಾಗಿ ಮೂರು ತಿಂಗಳು ಕಳೆದರೂ ಫಲಪ್ರದವಾಗಿಲ್ಲ. ಇತ್ತ ಶೈಕ್ಷಣಿಕ ವರ್ಷವೂ ಆರಂಭಗೊಳ್ಳದೆ 3,000ಕ್ಕೂ ಅಧಿಕ ಉಪನ್ಯಾಸಕರು ಬೀದಿಗೆ ಬೀಳುವಂತಾಗಿದೆ.

Advertisement

ಶೈಕ್ಷಣಿಕ ಚಟುವಟಿಕೆ ಆರಂಭವಾ ದಲ್ಲಿಂದ 10 ತಿಂಗಳು ತನಕ ಮಾತ್ರ ಅತಿಥಿ ಉಪನ್ಯಾಸಕರಿಗೆ ಸರಕಾರದಿಂದ ಮಾಸಿಕ 9,000 ರೂ. ವೇತನ ಸಿಗುತ್ತಿದ್ದು. ಮಾರ್ಚ್‌ ಬಳಿಕ ಕೊರೊನಾದಿಂದಾಗಿ ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಂಡಿವೆ. ಶ್ರಮಿಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್‌ ನೀಡಿ ಆತ್ಮಸ್ಥೈರ್ಯ ತುಂಬಿದ ಸರಕಾರವು ಅತಿಥಿ ಉಪನ್ಯಾಸಕರನ್ನು ಮರೆತುಬಿಟ್ಟಿದೆ.

6 ತಿಂಗಳಿನಿಂದ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರ ನೆರವಿಗೆ ಮುಂದಾದ ಖಾಯಂ ಉಪನ್ಯಾಸಕರು ಜುಲೈಯಲ್ಲಿ “ಅತಿಥಿ ದೇವೋ ಭವ’ ಧ್ಯೇಯವಾಕ್ಯದೊಂದಿಗೆ ತಮ್ಮ ಒಂದು ದಿನದ ವೇತನ ನೀಡುವುದಾಗಿ ಘೋಷಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅತಿಥಿ ಉಪನ್ಯಾಸಕನಿಗೆ ಇದರ ಪ್ರಯೋಜನ ಸಿಕ್ಕಿಲ್ಲ. ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಇತ್ತೀಚೆಗೆ ಸರಕಾರದ ವಿರುದ್ಧ ಧರಣಿ ಕೂತ ಬಳಿಕ ಸರಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರಿಗೆ ಮಾತ್ರ ಮಾರ್ಚ್‌ ನಿಂದ ವೇತನ ಬಿಡುಗಡೆಯಾಗಿತ್ತು.

ರಾಜ್ಯದಲ್ಲಿ 1,250 ಸರಕಾರಿ ಪ.ಪೂ. ಕಾಲೇಜು, 739 ಅನುದಾನಿತ ಪ.ಪೂ. ಕಾಲೇಜುಗಳಿವೆ. 17 ಸಾವಿರ ಖಾಯಂ ಉಪನ್ಯಾಸಕರಿದ್ದಾರೆ. ತಮ್ಮ ಒಂದು ದಿನದ ವೇತನವನ್ನು ಸ್ವ ಇಚ್ಛೆಯಿಂದ ಎಚ್‌ಆರ್‌ಎಂಎಸ್‌ ವ್ಯವಸ್ಥೆಯಲ್ಲೇ ಕಡಿತಗೊಳಿಸಿ ಪಿಯು ಇಲಾಖೆ ನಿರ್ದೇಶಕರ ಮೂಲಕ ಹಂಚಲು ನಿರ್ಧರಿಸಿದ್ದರು. ಒಟ್ಟು 3 ಕೋ.ರೂ. ಸಂಗ್ರಹ ನಿರೀಕ್ಷೆಯೂ ಇಡಲಾಗಿತ್ತು. ಆದರೆ ಪದವಿ ಅತಿಥಿ ಉಪನ್ಯಾಸಕರಿಗೆ ಮಾತ್ರ ಅತಿಥಿದೇವೋಭವ ಫಲಪ್ರದವಾಯಿತೇ ಹೊರತು ಪ.ಪೂ. ಉಪನ್ಯಾಸಕರಿಗಲ್ಲ.

ರಾಜ್ಯದ ಪದವಿಪೂರ್ವ ವಿಭಾಗದಲ್ಲಿ 3,000 ಹುದ್ದೆಗಳು ಖಾಲಿಯಿವೆ. 2015ರಲ್ಲಿ ಕರ್ನಾಟಕ ಶಿಕ್ಷಣ ಪ್ರಾಧಿಕಾರ ಸಿಇಟಿ ನೇಮಕಾತಿಗೆ ಆದೇಶ ಹೊರಡಿಸಿತ್ತು. 2015ರಲ್ಲಿ ತೇರ್ಗಡೆಯಾದ 1,163 ಮಂದಿಗೆ ಸ್ಥಳ ನಿಯುಕ್ತಿ ಆಗಿದೆ. ಉಳಿದ 1,837 ಹುದ್ದೆಗೆ ಅತಿಥಿ ಉಪನ್ಯಾಸಕರನ್ನೇ ನೇಮಿಸಬೇಕಾಗಿದೆ. ಪ್ರಸಕ್ತ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯೂ ನಡೆಯದೆ, ಖಾಯಂ ಉಪನ್ಯಾಸಕರ ಹುದ್ದೆಯೂ ಭರ್ತಿಯಾಗದೆ ಶೈಕ್ಷಣಿಕ ವರ್ಷ ಅತಂತ್ರವಾಗಲಿದೆ.

Advertisement

ಶೈಕ್ಷಣಿಕ ವರ್ಷ ಆರಂಭವಾಗದೆ ಯಾವುದೇ ಪ್ರಕ್ರಿಯೆ ಸಾಧ್ಯವಾಗುತ್ತಿಲ್ಲ. ವಿಷಯವಾರು ಉಪನ್ಯಾಸಕರ ಕೊರತೆಯ ಪಟ್ಟಿಯನ್ನು ಡಿಡಿಪಿಒಗಳಿಂದ ಸಂಗ್ರಹಿಸಲಾಗುತ್ತಿದೆ. ಶೈಕ್ಷಣಿಕ ವರ್ಷ ಆರಂಭಗೊಂಡರೆ ನೇಮಕಾತಿ ನಡೆಯಲಿದೆ.
– ಸೀತಾರಾಮ ರೆಡ್ಡಿ, ಜಂಟಿ ನಿರ್ದೇಶಕರು ಪ.ಪೂ. ಆಡಳಿತ, ಬೆಂಗಳೂರು

ಖಾಯಂ ಉಪನ್ಯಾಸಕರ ಒಂದು ದಿನದ ವೇತನವನ್ನು ಪಾರದರ್ಶಕ ಮತ್ತು ವೈಜ್ಞಾನಿಕವಾಗಿ ಎಚ್‌ಆರ್‌ಎಂಎಸ್‌ನಲ್ಲಿ ಕ್ರೋಡೀಕರಿಸಿ ಪ.ಪೂ. ಶಿಕ್ಷಣ ಇಲಾಖೆ ನಿರ್ದೇಶಕರ ಮೂಲಕ ವಿತರಿಸುವಂತೆ ಈಗಾಗಲೇ ಶಿಕ್ಷಣ ಸಚಿವರು ಮತ್ತು ನಿರ್ದೇಶಕರಲ್ಲಿ ಮನವಿ ಮಾಡಿಕೊಂಡಿದ್ದೇವೆ. ಸರಕಾರದ ಮಟ್ಟದಲ್ಲಿ ಪ್ರಕ್ರಿಯೆ ನಡೆಯಬೇಕಾಗಿದೆ..
– ನಿಂಗೇಗೌಡ ಎ.ಎಚ್‌., ಅಧ್ಯಕ್ಷರು, ಕರ್ನಾಟಕ ರಾಜ್ಯ ಪ.ಪೂ. ಕಾಲೇಜು ಉಪನ್ಯಾಸಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next