Advertisement

ಡ್ರಾಪ್ ನೆಪದಲ್ಲಿ ಅತಿಥಿ ಸತ್ಕಾರ: ಕೊಲೆ ಯತ್ನ

12:40 AM Nov 05, 2019 | Lakshmi GovindaRaju |

ಬೆಂಗಳೂರು: ಕುಡಿತದ ಅಮಲಿನಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ಮನೆಗೆ ಕರೆದೊಯ್ದು ಅತಿಥಿ ಸತ್ಕಾರ ಮಾಡಿ ನಡುರಾತ್ರಿ ಚಾಕುವಿನಿಂದ ಚುಚ್ಚಿ ಕೊಲ್ಲಲು ಯತ್ನಿಸಿದ್ದ ವಿಲಕ್ಷಣ (ಸೈಕೋ) ಮನಸ್ಥಿತಿ ವ್ಯಕ್ತಿಯನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗುರುರಾಜ ಲೇಔಟ್‌ನ ಸುಹಾಸ್‌ (28) ಬಂಧಿತ.

Advertisement

ಅ.27ರಂದು ಬೆಳಿಗ್ಗೆ ಗುರುರಾಜ ಲೇಔಟ್‌ನ ರಸ್ತೆಬದಿ ರಕ್ತದ ಗುರುತುಗಳಿಂದ ಅಪರಿಚಿತ ವ್ಯಕ್ತಿಯೊಬ್ಬ ಬಿದ್ದಿರುವ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಇನ್ಸ್‌ಪೆಕ್ಟರ್‌ ಮೊಹಮದ್‌ ನೇತೃತ್ವದ ತಂಡ, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿದೆ. ಅಷ್ಟೇ ಅಲ್ಲದೆ, ಆತ ಚಾಕು ಇರಿತಕ್ಕೊಳಗಾದ ಹಿನ್ನೆಲೆ ಕಾರಣವನ್ನು ಪತ್ತೆಹಚ್ಚಿದೆ.

ಜತೆಗೆ, ವಿನಾಕಾರಣ ಕೊಲೆಗೆ ಯತ್ನಿಸಿದ ಆರೋಪಿ ಸುಹಾಸ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. ಅ.26ರಂದು ರಾತ್ರಿ ಆರೋಪಿ ಸುಹಾಸ್‌ನ ಚಾಕು ಇರಿತ, ಸುತ್ತಿಗೆ ಹೊಡೆತ ತಿಂದು ಗಂಭೀರವಾಗಿ ಗಾಯಗೊಂಡಿದ್ದ ರಾಜ (43) ಎಂಬಾತ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ತುಮಕೂರಿನಲ್ಲಿರುವ ಮನೆಗೆ ತಲುಪಿದ್ದಾರೆ.

ಪೇಂಟಿಂಗ್‌ ಕೆಲಸ ಮಾಡುವ ರಾಜ ಅವರು ಅ.26ರಂದು ರಾತ್ರಿ ಸ್ವಲ್ಪ ಪ್ರಮಾಣದ ಮದ್ಯಸೇವಿಸಿ ರಮೇಶ್‌ನಗರದ ರಸ್ತೆಯಲ್ಲಿ ನಿಂತಿದ್ದಾಗ ಸುಹಾಸ್‌ ಕೂಡ ಬೈಕ್‌ನಲ್ಲಿ ಅದೇ ಮಾರ್ಗದಲ್ಲಿ ಬಂದಿದ್ದು ಡ್ರಾಪ್‌ ಕೊಡುವುದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೆ ಬೈಕ್‌ ನಿಲ್ಲಿಸಿದ ಸುಹಾಸ್‌ ಅವರನ್ನು ಕೂರಿಸಿಕೊಂಡಿದ್ದಾರೆ. ಕುಡಿತದ ಅಮಲಿನಲ್ಲಿದ್ದ ರಾಜ ಊಟ ಮಾಡಬೇಕು ಎಂದಿದ್ದಾರೆ.

ಸುಹಾಸ್‌ ಅವರಿಗೆ ಊಟವನ್ನು ಕೊಡಿಸಿದ್ದು ವಿಳಾಸ ಕೇಳಿದ್ದಾನೆ. ಈ ವೇಳೆ ನನಗೆ ಯಾರೂ ಇಲ್ಲ ಎಂದು ರಾಜ ಹೇಳುತ್ತಲೇ, ನಮ್ಮ ಮನೆಯಲ್ಲಿಯೇ ಈ ದಿನ ರಾತ್ರಿ ಉಳಿದುಕೊಳ್ಳಿ ಎಂದು ಗುರುರಾಜ ಲೇಔಟ್‌ನಲ್ಲಿ ಮನೆಗೆ ಕರೆದೊಯ್ದಿದ್ದಾನೆ. ಅವರ ಯೋಗ ಕ್ಷೇಮ ವಿಚಾರಿಸಿ ಮಲಗಲು ಹಾಸಿಗೆ ದಿಂಬು ನೀಡಿದ್ದಾನೆ. ಆತ ಪ್ರತ್ಯೇಕ ಕೊಠಡಿಯಲ್ಲಿ ಮಲಗಿಕೊಂಡಿದ್ದಾರೆ.

Advertisement

ನಡುರಾತ್ರಿ ಒಬ್ಬನೇ ಎದ್ದ ಸುಹಾಸ್‌, ಚಿಕ್ಕ ಚಾಕುವಿನಿಂದ ಕುತ್ತಿಗೆ ಎದೆ, ಕುತ್ತಿಗೆ, ಹೊಟ್ಟೆಗೆ ಹಲವು ಬಾರಿ ಇರಿದಿದ್ದಾನೆ. ಅಷ್ಟೆ ಅಲ್ಲದೆ ಸುತ್ತಿಗೆಯೊಂದರಿಂದ ತಲೆಗೆ ಎರಡು ಮೂರು ಬಾರಿ ಹೊಡೆದಿದ್ದಾನೆ. ರಾಜ ಅವರು ಪ್ರತಿರೋಧ ತೋರಿದರೂ ತಪ್ಪಿಸಿಕೊಳ್ಳಲು ಆಗದೆ ಪ್ರಜ್ಞೆ ತಪ್ಪಿಬಿದ್ದಿದ್ದಾರೆ.

ರಾಜ ಸತ್ತಿದ್ದಾನೆ ಎಂದುಕೊಂಡ ಸುಹಾಸ್‌ ಪುನಃ ಹೋಗಿ ಸ್ವಲ್ಪ ಸಮಯ ಮಲಗಿದ್ದಾನೆ. ಮುಂಜಾನೆ ಎದ್ದ ಸುಹಾಸ್‌, ರಾಜ ಉಸಿರಾಡುತ್ತಿರುವುದನ್ನು ಗಮನಿಸಿ ಮತ್ತೆ ಚಾಕುವಿನಿಂದ ಚುಚ್ಚತೊಡಗಿದ್ದಾನೆ. ತನ್ನನ್ನು ಬಿಟ್ಟುಬಿಡುವಂತೆ ರಾಜ ಅಂಗಲಾಚಿದಾಗ ಯಾರಿಗೂ ಈ ವಿಚಾರ ಹೇಳಬೇಡ ಎಂದು ಹೆದರಿಸಿ ಮನೆಯಿಂದ ಹೊರಗೆ ನೂಕಿದ್ದಾನೆ. ಚಾಕು ಇರಿತಕ್ಕೊಳಗಾಗಿದ್ದ ರಾಜ ಸ್ವಲ್ಪ ದೂರ ನಡೆದುಕೊಂಡು ಹೋಗಿ ರಸ್ತೆಬದಿ ಬಿದ್ದಿದ್ದಾರೆ.

ಬೆಳಕಾದ ಮೇಲೆ ಸಾರ್ವಜನಿಕರು ರಾಜ ಬಿದ್ದಿರುವುದನ್ನು ಗಮನಿಸಿ ಕಂಟ್ರೋಲ್‌ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್‌ಎಎಲ್‌ ಪೊಲೀಸರು ಸ್ಥಳಕ್ಕೆ ತೆರಳಿ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಆತನಿಗೆ ಪ್ರಜ್ಞೆ ಬಂದಿರಲಿಲ್ಲ. ವೈದ್ಯರ ನಿರಂತರ ಚಿಕಿತ್ಸೆಯಿಂದ ಮೂರು ದಿನಗಳ ನಂತರ ಆತ ಮಾತನಾಡಲು ಆರಂಭಿಸಿದ. ಆತನಿಂದ ಹೇಳಿಕೆ ದಾಖಲಿಸಿಕೊಂಡು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದಾಗ “ಸುಹಾಸ್‌’ ಬಗ್ಗೆ ಮಾಹಿತಿ ಪತ್ತೆಹಚ್ಚಿದ್ದಾರೆ.

” ಆರೋಪಿ ಮಾತು ಕೇಳಿ ಪೊಲೀಸರೇ ಸುಸ್ತು!’: ಪರಿಚಯವೇ ಇರದ ವ್ಯಕ್ತಿಯನ್ನು ಕೊಲ್ಲಲು ಯತ್ನಿಸಿದ ಸುಹಾಸ್‌ ನೀಡಿದ ಕಾರಣ ಕೇಳಿ ಪೊಲೀಸರ ಬೆಸ್ತು ಬಿದ್ದಿದ್ದಾರೆ. “ರಾಜ ಅವರಿಗೆ ಊಟ ಕೊಡಿಸಿ ಮನೆಗೆ ಕರೆದೊಯ್ದು ಮಲಗಲು ಅವಕಾಶ ಕೊಟ್ಟಿದ್ದು ನಿಜ ಎಂದ ಸುಹಾಸ್‌, ನಡು ರಾತ್ರಿ ಏಕಾಏಕಿ ಆತನನ್ನು ಕೊಲೆ ಮಾಡಲೇಬೇಕು ಎಂದು ಅನಿಸಿತು. ಅದಕ್ಕಾಗಿ ಚಾಕುವಿನಿಂದ ಇರಿದೆ.

ಸುತ್ತಿಗೆಯಲ್ಲಿ ಹೊಡೆದೆ. ಆದರೆ, ಆತ ಸತ್ತಿರಲಿಲ್ಲ. ಪುನಃ ಕೊಲ್ಲಲು ಮನಸ್ಸಾಗಲಿಲ್ಲ ಅದಕ್ಕೆ ಸುಮ್ಮನಾಗಿಬಿಟ್ಟೆ’ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡುತ್ತಾನೆ ಎಂದು ಹೇಳುತ್ತಾನೆ. ಹಲವು ಮನಸ್ಥಿತಿಯ ಆರೋಪಿಗಳನ್ನು ವೃತ್ತಿ ಜೀವನದಲ್ಲಿ ನೋಡಿದ್ದೇವೆ. ಈ ರೀತಿಯ ಮನಸ್ಥಿತಿ ಹೊಂದಿದ ವ್ಯಕ್ತಿಯನ್ನು ನೋಡಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

“ಚರ್ಚ್‌ನಲ್ಲಿ ಪಾಪ ನಿವೇದನೆ’: ರಾಜ ಅವರು ಬಹುತೇಕ ಸತ್ತುಹೋಗಿದ್ದಾರೆ ಎಂದು ತಿಳಿದುಕೊಂಡಿದ್ದ ಸುಹಾಸ್‌, ಈ ವಿಚಾರವನ್ನು ತನ್ನ ಸಂಬಂಧಿಕರೊಬ್ಬರ ಬಳಿ ಹೇಳಿಕೊಂಡಿದ್ದ ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಡೆಗೆ ಕೋಲಾರದ ಬಂಗಾರಪೇಟೆಗೆ ತೆರಳಿದ್ದ ಆತ ಚರ್ಚ್‌ವೊಂದರಲ್ಲಿ ಪಾಪನಿವೇದನೆಯ ಪ್ರಾರ್ಥನೆ ಮಾಡಿಕೊಂಡಿದ್ದಾನೆ.

ಚಾಕು ಇರಿತಕ್ಕೊಳಗಾಗಿದ್ದ ರಾಜ ಅವರ ಕೊರಳಿನಲ್ಲಿ ಶಿಲುಬೆ ಸರ ಇರುವುದನ್ನು ಗಮನಿಸಿದ್ದ ಆತ ಚರ್ಚ್‌ನಲ್ಲಿ ಪಾಪ ನಿವೇದನೆ ಮಾಡಿಕೊಂಡರೆ ಒಳ್ಳೆಯದು ಎಂದುಕೊಂಡು ಅಲ್ಲಿಗೆ ತೆರಳಿದ್ದೆ ಎನ್ನುತ್ತಾನೆ ಎಂದು ಅಧಿಕಾರಿ ಹೇಳಿದರು. ಅಂಚೆ ಇಲಾಖೆ ಉದ್ಯೋಗಿ ಆಗಿರುವ ಆರೋಪಿ ಸುಹಾಸ್‌ಗೆ ಮದುವೆಯಾಗಿದ್ದು ಕೆಲ ವರ್ಷಗಳ ಹಿಂದೆ ಪತ್ನಿ ಆತನನ್ನು ಬಿಟ್ಟು ಪೋಷಕರ ಜತೆ ನೆಲೆಸಿದ್ದಾರೆ. ಸುಹಾಸ್‌ ಒಬ್ಬನೇ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next