Advertisement

ಡಬ್ಬಿಂಗ್‌ ವಿರುದ್ಧ ಗುಡುಗಿದ ಚಿತ್ರರಂಗ

11:58 AM Mar 10, 2017 | |

ಬೆಂಗಳೂರು: ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್‌ ಆಗುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಗುರುವಾರ ಬೃಹತ್‌ ಪ್ರತಿಭಟನೆ ನಡೆಸಿವೆ. ಈ ಮೂಲಕ ಮುಂದಿನ ದಿನಗಳಲ್ಲಿ ಡಬ್ಬಿಂಗ್‌ ವಿರೋಧಿ ಹೋರಾಟ ಮತ್ತಷ್ಟು ತೀವ್ರವಾಗಲಿದೆ ಎಂಬ ಎಚ್ಚರಿಕೆ ನೀಡಿವೆ. 

Advertisement

ಕನ್ನಡ ಚಳವಳಿ ಮುಖಂಡ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕತರು, ಕನ್ನಡ ಚಿತ್ರರಂಗ, ಕಿರುತೆರೆಯ ಕಲಾವಿದರು ಭಾಗವಹಿಸಿ ಹೋರಾಟ ಬೆಂಬಲಿಸಿದರು. ಮೈಸೂರು ಬ್ಯಾಂಕ್‌ ವೃತ್ತದಿಂದ ಫ್ರೀಂಡ ಪಾರ್ಕ್‌ವರೆಗೆ ಸಾಗಿದ ಮೆರವಣಿಗೆಯಲ್ಲಿ ಡಬ್ಬಿಂಗ್‌ ವಿರೋಧಿ ಘೋಷಣೆಗಳು ಮೊಳಗಿದವು. 

ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಡಬ್ಬಿಂಗ್‌ ವಿರೋಧಿ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಕನ್ನಡ ಚಳವಳಿ ಹೋರಾಟಗಾರ ವಾಟಾಳ್‌ ನಾಗರಾಜ್‌, “ಡಬ್ಬಿಂಗ್‌ಗೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಹೋರಾಟ ನಿರಂತರವಾಗಿ ನಡೆಯಲಿದೆ. ಡಬ್ಬಿಂಗ್‌ಗೆ ಶಾಶ್ವತ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಅದಕ್ಕೊಂದು ಕಾಯ್ದೆ ತರುವಂತೆ ಮನವಿ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಯಾವುದೇ ಡಬ್ಬಿಂಗ್‌ ಚಿತ್ರ  ಬಿಡುಗಡೆಯಾದರೂ ಆ ಚಿತ್ರಮಂದಿರಕ್ಕೆ ಬೆಂಕಿ ಇಡಲಾಗತ್ತದೆ,” ಎಂದು ಗುಡುಗಿದರು. 

ಕನ್ನಡ ಚಲಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎಂ.ಎಸ್‌.ರಮೇಶ್‌ ಮಾತನಾಡಿ, “ಇತ್ತೀಚಿನಗೆ ಡಬ್ಬಿಂಗ್‌ ಪರ ಮಾತುಗಳು ಕೇಳಿಬರುತ್ತಿದೆ. ನಾವು ಅದರ ವಿರುದ್ಧ ಮಾತನಾಡಿದರೆ, ಅವರನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತದೆ. ನಮ್ಮ ಸಂಸ್ಕೃತಿಯನ್ನು ಹತ್ತಿಕ್ಕಲು ಬಂದರೆ ನಾವು ಕೂಡಾ ಅವರನ್ನು ಹತ್ತಿಕ್ಕಬೇಕಾಗುತ್ತದೆ,” ಎಂದರು. 

ಮುಂಚೂಣಿ ನಟರು ಗೈರು: ಡಬ್ಬಿಂಗ್‌ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಬಹುತೇಕ ಮುಂಚೂಣಿ ನಟರ ಗೈರು ಎದ್ದು ಕಾಣುತ್ತಿತ್ತು. ದರ್ಶನ್‌, ಪ್ರಜ್ವಲ್‌, ಸೃಜನ್‌ ಲೋಕೇಶ್‌ ಸೇರಿದಂತೆ ಬೆರಳೆಣಿಕೆಯ ಮಂದಿ ಬಿಟ್ಟರೆ ಉಳಿದಂತೆ ಯಾವ ನಾಯಕ ನಟರು ಕೂಡಾ ಪ್ರತಿಭಟನೆಯಲ್ಲಿ ಭಾಗವಹಿಸದೇ ದೂರವೇ ಉಳಿದಿದ್ದರು. ನಾಯಕಿ ನಟಿಯರಂತೂ ಕಾಣಲೇ ಇಲ್ಲ. ಖಳನಟ ರವಿಶಂಕರ್‌, ಮಿತ್ರ, ತಬಲ ನಾಣಿ, ಬುಲೆಟ್‌ ಪ್ರಕಾಶ್‌, ಶಿವಕುಮಾರ್‌, ಗಣೇಶ್‌ ರಾವ್‌, ಲಕ್ಷ್ಮೀ ಹೆಗಡೆ, ಸಾಧು ಕೋಕಿಲ, ದಿನಕರ್‌ ತೂಗುದೀಪ್‌ ಸೇರಿದಂತೆ ಅನೇಕ ನಟ-ನಟಿಯರು ಭಾಗವಹಿಸಿದ್ದರು. 

Advertisement

ಟ್ರಾಫಿಕ್‌ ಜಾಮ್‌: ಮೈಸೂರು ಬ್ಯಾಂಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಕಾರಣ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಗೆವರೆಗೂ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕಾರ್ಪೋರೇಷನ್‌, ರಿಚಂಡ್‌ ಟೌನ್‌, ಕೆ.ಆರ್‌.ಸರ್ಕಲ್‌ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿನ ವಾಹನ ಸವಾರರು ಗಂಟೆಗಟ್ಟಲೇ ಪರದಾಡಬೇಕಾಯಿತು. ಇನ್ನು, ಪ್ರತಿಭಟನೆ ವೇಳೆ ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಕೂಡಾ ಮಾಡಲಾಗಿತ್ತು.

ಡಬ್ಬಿಂಗ್‌ ಹೋರಾಟದ ಜೊತೆಗೆ ನಾನು ಖಂಡಿತಾ ಇರಿನಿ. ಪ್ರತಿ ಭಾಷೆಯ ನಟರ ವಾಯ್ಸ ನಮಗೆ ಗೊತ್ತಿದೆ. ಅವರ ವಾಯ್ಸಗೆ ಬೇರೆಯವರು ಧ್ವನಿ ಕೊಟ್ಟರೆ ಅದನ್ನು ನೋಡೋದು ಕೂಡಾ ಅಸಹ್ಯ. ಇತ್ತೀಚೆಗೆ ನನ್ನದೇ ಒಂದು ಸಿನಿಮಾ ಹಿಂದಿಗೆ ಡಬ್‌ ಆಗಿದ್ದನ್ನು ನೋಡುತ್ತಿದ್ದೆ. 10 ನಿಮಿಷ ನೋಡಲಾಗದೇ ಟಿವಿ ಆಫ್ ಮಾಡಿದೆ.
-ದರ್ಶನ್‌, ನಟ

ನಾನು ಡಬ್ಬಿಂಗ್‌ ವಿರುದ್ಧ ಮಾತನಾಡಿದರೆ ಕೋರ್ಟ್‌ ನೋಟೀಸ್‌ ಕಳುಹಿಸಿ, ನಷ್ಟ ಭರಿಸಿ ಎನ್ನುತ್ತಾರೆ. ಜೈಲಿಗೆ ಕಳುಹಿಸುತ್ತೇನೆ ಎಂಬಂತೆ ಸ್ಟೇಟಸ್‌ ಹಾಕುತ್ತಿದ್ದಾರೆ. ಕನ್ನಡದ ಬಗ್ಗೆ ಮಾತನಾಡಿದ್ದಕ್ಕೆ ಜೈಲಿಗೆ ಹೋದರೂ ನನಗೆ ಬೇಸರವಿಲ್ಲ. ನನಗೆ ಎಲ್ಲಿಂದಲೇ ಬೆದರಿಕೆ ಕರೆಗಳು ಬರುತ್ತದೆ. ನಾವು ಅವೆಲ್ಲವನ್ನು ದಾಟಿಕೊಂಡು ಬಂದು ಇಲ್ಲಿ ನಿಂತಿದ್ದೇವೆ. ತಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಬಿಲ ತೋಡಿಕೊಟ್ಟು ಜೆಸಿಬಿ ನುಗ್ಗಿಸಲು ಕೆಲವರು ತಯಾರಿ ನಡೆಸಿದ್ದಾರೆ. ಆದರೆ, ಬಿಲದ ಪಕ್ಕ ನಿಂತು ಒನಕೆ ಒಬವ್ವನ ತರಹ ಹೊಡೆಯಲು ನಾವು ರೆಡಿ.
-ಜಗ್ಗೇಶ್‌, ನಟ 

ಈಗಾಗಲೇ ನಾವು ಎಚ್ಚರಿಕೆಯ ಗಂಟೆಯನ್ನು ಕೊಟ್ಟಿದ್ದೇವೆ. “ಸತ್ಯದೇವ್‌ ಐಪಿಎಸ್‌’ ಎಂಬ ಸಿನಿಮಾವೊಂದು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾಗಿದೆ. ಏನಾದರೂ ಮತ್ತೆ ಡಬ್ಬಿಂಗ್‌ ಎಂದರೆ ದೊಡ್ಡ ಮಟ್ಟದಲ್ಲಿ ನೋವು ಎದುರಿಸಬೇಕಾಗುತ್ತದೆ.
-ಬುಲೆಟ್‌ ಪ್ರಕಾಶ್‌, ನಟ

ಇದು ಕೇವಲ ಕಲಾವಿದರ ಬದುಕಿನ ಪ್ರಶ್ನೆಯಲ್ಲ, ಕನ್ನಡದ ಪ್ರಶ್ನೆ. ಇದು ಕನ್ನಡಿಗರಿಗೆ ಅವಮಾನ ಮಾಡಿದಂತೆ. ಸ್ವಾಭಿಮಾನ ಇದ್ರೆ ಡಬ್ಬಿಂಗ್‌ ಮಾಡಬಾರದು. 
-ವಿ.ಮನೋಹರ್‌, ಸಂಗೀತ ನಿರ್ದೇಶಕ

ಒಂದು ಸಿನಿಮಾ ಮೇಕಿಂಗ್‌ನಲ್ಲಿ ಡಬ್ಬಿಂಗ್‌ ಅನ್ನೋದು ಒಂದು ಸಣ್ಣ ಕೆಲಸ. ಈಗ ಆ ಸಣ್ಣ ಕೆಲಸದ ಮೂಲಕ ಒಂದು ಸೃಜನಶೀಲ ಕೆಲಸವನ್ನು ಸಾಯಿಸಲು ಹೊರಟಿದ್ದಾರೆ. ಒಬ್ಬ ಡಬ್ಬಿಂಗ್‌ ಆರ್ಟಿಸ್ಟ್‌, ಸ್ಟುಡಿಯೋ ಎಂಜಿನಿಯರ್‌ ಮೂಲಕ ಸಿನಿಮಾ ಮೇಕಿಂಗ್‌ ಎಂಬ ಸುಂದರ ಕೆಲಸವನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. 
-ನಾಗತಿಹಳ್ಳಿ ಚಂದ್ರಶೇಖರ್‌, ಹಿರಿಯ ನಿರ್ದೇಶಕ

ಇದು ಯಾವುದೇ ಭಾಷೆಯ ವಿರುದ್ಧದ ಹೋರಾಟವಲ್ಲ. ನಮ್ಮ ಉಳಿವಿಗಾಗಿ ಮಾಡುವ ಹೋರಾಟ. ಡಬ್ಬಿಂಗ್‌ ವಿರುದ್ಧದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.
-ದೇವರಾಜ್‌, ನಟ

Advertisement

Udayavani is now on Telegram. Click here to join our channel and stay updated with the latest news.

Next