Advertisement
ಗುರು ಹುಟ್ಟಿ ಬೆಳೆದ ಮನೆಯಲ್ಲಿ ಕುಟುಂಬ ಸದಸ್ಯರು ದೀಪ ಹಚ್ಚಿಟ್ಟಿದ್ದರು. ಗುರು ಇಲ್ಲದ ಮನೆ ದೇವರಿಲ್ಲದ ಗುಡಿಯಂತಿತ್ತು. ಕುಟುಂಬದವರು ಪದೇಪದೆ ಗುರುವನ್ನು ನೆನೆದು ಕಣ್ಣೀರಿಡುತ್ತಿದ್ದರು. ಹೊಸ ಮನೆ ಎದುರು ಕುಳಿತು ತಂದೆ ಹೊನ್ನಯ್ಯ ಗೋಳಾಡುತ್ತಿದ್ದರು. ಮೂರ್‍ನಾಲ್ಕು ದಿನಗಳಿಂದ ವಿಶ್ರಾಂತಿ ಇಲ್ಲದೆ ಕುಟುಂಬದವರು ಹಾಗೂ ಊರಿನ ಜನರು ಬಳಲಿದ್ದರು. ಕಾಲೋನಿಯ ಬೀದಿಗಳಲ್ಲಿ ನೀರವ ಮೌನ ಆವರಿಸಿತ್ತು. ಗುರು ನಿವಾಸದ ಬಳಿ ಮುಂಜಾಗ್ರತೆಯಾಗಿ ಒಂದು ಆಂಬ್ಯುಲೆನ್ಸ್‌ನು° ನಿಯೋಜನೆ ಮಾಡಲಾಗಿತ್ತು.
Related Articles
Advertisement
ಗೆಳೆಯರ ಕಷ್ಟ-ಸುಖಗಳಿಗೆ ಸ್ಪಂದಿಸುವ ಮನೋಭಾವ ಗುರುವಿನಲ್ಲಿತ್ತು. ಆತ್ಮೀಯ ಒಡನಾಡಿಯಾಗಿ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ ಗುರುವಿನ ಬಗ್ಗೆ ಸ್ನೇಹಿತರಲ್ಲೂ ಅಪಾರವಾದ ಒಲವಿತ್ತು. ಗೆಳೆಯ ದೇಶಕ್ಕೋಸ್ಕರ ಹೋರಾಡುತ್ತಿದ್ದನೆಂಬ ಅಭಿಮಾನ, ಹೆಮ್ಮೆ ಅವರಲ್ಲೂ ಇತ್ತು. ಒಬ್ಬ ಒಳ್ಳೆಯ ಸ್ನೇಹಜೀವಿಯನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದು ಹೇಳುತ್ತಲೇ ಗೆಳಯ ಪ್ರಸನ್ನ ಕಣ್ಣೀರಿಡುತ್ತಿದ್ದರು.
ತಂದೆ, ಪತ್ನಿ ಅಸ್ವಸ್ಥ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದುಷ್ಕೃತ್ಯಕ್ಕೆ ಬಲಿಯಾದ ಸುದ್ದಿ ತಿಳಿದ ಕ್ಷಣದಿಂದ ಅಂತ್ಯಸಂಸ್ಕಾರದವರೆಗೂ ಅತ್ತೂ ಅತ್ತೂ ಸುಸ್ತಾಗಿದ್ದ ತಂದೆ ಹೆಚ್.ಹೊನ್ನಯ್ಯ, ಪತ್ನಿ ಕಲಾವತಿ ಅವರನ್ನು ಕೆ.ಎಂ.ದೊಡ್ಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇವರನ್ನು ತಪಾಸಣೆಗೊಳಪಡಿಸಿದ ವೈದ್ಯರು ನಿರ್ಜಲೀಕರಣದ ಪರಿಣಾಮ ಇಬ್ಬರೂ ಅಸ್ವಸ್ಥರಾಗಿದ್ದಾರೆ ಎಂದು ತಿಳಿಸಿ ಗುಕೋಸ್ ನೀಡಿ ಮನೆಗೆ ಕಳುಹಿಸಿದರು.
ಎಲ್ಲರ ಆರೋಗ್ಯ ಸುಧಾರಿಸಿದೆ. ಸರಿಯಾಗಿ ತಿಂಡಿ-ಆಹಾರ ಸೇವಿಸಿರಲಿಲ್ಲ. ಮೂರು ದಿನದಿಂದ ಅತ್ತು ಅತ್ತು ಸುಸ್ತಾಗಿದ್ದರು. ಗುರು ಅಗಲಿಕೆಯಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದರು. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸಮಯಕ್ಕೆ ಸರಿಯಾಗಿ ಊಟ ಮಾಡುವಂತೆ ಸಲಹೆ ನೀಡಿದ್ದೇವೆ ಎಂದು ಕೆ.ಎಂ.ದೊಡ್ಡಿ ಸಾರ್ವಜನಿಕ ಆಸ್ಪತ್ರೆ ವೈದ್ಯ ರವೀಶ್ ತಿಳಿಸಿದರು. ಭಾನುವಾರ ಸಿಆರ್‌ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಬಿ.ಟಿ. ಪ್ರದೀಪ್ ಅವರು ಹೆಚ್.ಗುರು ವೀರಮರಣವನ್ನಪ್ಪಿದ್ದಕ್ಕೆ ಭಾರತೀಯ ಸೈನ್ಯದಿಂದ ಸಂತಾಪ ಸೂಚಕ ಪತ್ರವನ್ನು ಕುಟುಂಬದವರಿಗೆ ನೀಡಿ ಸಾಂತ್ವನ ಹೇಳಿದರು.
ಸಮಾಧಿ ಸ್ಥಳದಲ್ಲಿ ಪೂಜೆ, ನಮನ: ಗುರುವಿನ ಅಂತ್ಯಸಂಸ್ಕಾರ ನಡೆಸಲಾದ ಮೆಳ್ಳಹಳ್ಳಿಯ ಸಮಾಧಿ ಸ್ಥಳಕ್ಕೆ ಸ್ಥಳೀಯರು ಮಾತ್ರವಲ್ಲದೆ ಹೊರ ಜಿಲ್ಲೆಯ ಜನರು ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಿ ನಮನ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂದಿತು. ಮದ್ದೂರು-ಮಳವಳ್ಳಿ ರಸ್ತೆಯಲ್ಲಿ ತೆರಳುವವರು ರಸ್ತೆ ಪಕ್ಕ ವಾಹನ ನಿಲ್ಲಿಸಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅಗಲಿದ ವೀರಯೋಧನಿಗೆ ಹೂಗುತ್ಛವಿಟ್ಟು ಶ್ರದ್ಧಾಜಲಿ ಅರ್ಪಿಸಿ ತೆರಳುತ್ತಿದ್ದರು. ಅದೊಂದು ಪ್ರೇಕ್ಷಣೀಯ ಸ್ಥಳವಾಗಿ ಜನರನ್ನು ಆಕರ್ಷಿಸುತ್ತಿದ್ದುದು ಕಂಡುಬಂದಿತು.
ನೆರವಿನ ಮಹಾಪೂರ: ವೀರಯೋಧ ಹೆಚ್.ಗುರು ಕುಟುಂಬಕ್ಕೆ ವಿವಿಧೆಡೆಯಿಂದ ನೆರವು ಹರಿದುಬರುವುದು ನಿಂತಿಲ್ಲ. ಭಾನುವಾರ ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಯೋಧನ ಕುಟುಂಬಕ್ಕೆ 1 ಲಕ್ಷ ರೂ., ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಬಾಬು ಪತ್ತರ್ 78,401 ಸಾವಿರ ರೂ., ಶಿವಮೊಗ್ಗದ ಅಂಧ ಸಂಗೀತ ಶಿಕ್ಷಕ ಮಂಜುನಾಥ್ 2,500 ರೂ.ಗಳನ್ನು ನೀಡಿದರು.
ನಾನು ಸತ್ತೋದ್ರೆ ಏನ್ಮಾಡ್ತೀರಾ?: ನಾನು ಬದುಕಿದ್ದಾಗಲೇ ಹೀಗೆ ಮಾಡ್ತೀರಾ.. ಇನ್ನು ನಾನು ಸತ್ತೋದ್ರೆ ಏನ್ಮಾಡ್ತೀರಾ..? ಹೀಗಂತ ಒಮ್ಮೆ ಹುತಾತ್ಮ ಯೋಧ ಗುರು ತನ್ನ ಸಹೋದರರನ್ನು ಪ್ರಶ್ನಿಸಿದ್ದನಂತೆ. ಅಣ್ಣ ಗುರುವಿನ ಜೊತೆ ಕಡೆಯ ಸನ್ನಿವೇಶ ನೆನೆದು ಸಹೋದರ ಆನಂದ್ ಭಾವುಕರಾದರು. ನಾನು ಮತ್ತು ಮಧು ಇಬ್ಬರೂ ಪರಸ್ಪರ ಜಗಳವಾಡಿಕೊಂಡಿದ್ದೆವು. ಆ ವೇಳೆ ನನ್ನ ತಲೆಗೆ ಏಟಾಗಿತ್ತು. ರಜೆಗೆಂದು ಮನೆಗೆ ಬಂದಿದ್ದ ಗುರು ನಮ್ಮ ಜಗಳವನ್ನು ನೋಡಿದ. ಏಟು ಬಿದ್ದಿದ್ದ ನನ್ನನ್ನು ತೊಡೆಯ ಮೇಲೆ ಮಲಗಿಸಿಕೊಂಡು ನಾನು ಬದುಕಿರುವಾಗಲೇ ಹೀಗೆ ಮಾಡ್ತೀರಾ.. ಇನ್ನು ನಾನು ಹೊರಟೋದ್ರೆ ಏನ್ಮಾಡ್ತೀರಾ..? ನಿನ್ನನ್ನು ಒಂದು ಒಳ್ಳೆಯ ದಾರಿ ಸೇರುವ ಹಾಗೆ ಮಾಡ್ತೀನಿ ಅಂತ ಹೇಳಿದ್ದನ್ನು ನೆನೆದು ಆನಂದ್ ಗೋಳಾಡಿದರು.
ಸೇನೆ ಸೇರಲು ಹುರಿದುಂಬಿಸುತ್ತಿದ್ದ: ದೇಶ ಕಾಯುವುದು ಒಂದು ಪುಣ್ಯದ ಕೆಲಸ. ದೇಶ ಸೇವೆಗೆ ನಮ್ಮ ಜೀವನವನ್ನು ಮುಡಿಪಾಗಿಡಬೇಕು. ಆಗ ನಮ್ಮ ಬದುಕು ಸಾರ್ಥಕವಾಗುತ್ತದೆ. ಅದಕ್ಕಾಗಿ ಸೈನ್ಯ ಸೇರುವಂತೆ ಗುಡಿಗೆರೆ ಕಾಲೋನಿಯ ಜನರನ್ನು ಹುರಿದುಂಬಿಸುತ್ತಿದ್ದನು. ಗುರು ಬಂದಾಗಲೆಲ್ಲಾ ಅಲ್ಲಿನ ಅನುಭವಗಳ ಕುರಿತು ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿದ್ದನು. ಕಷ್ಟದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಅದನ್ನೆಂದೂ ಅವನು ತೋರಿಸಿಕೊಂಡಿರಲಿಲ್ಲ.
ಅದೊಂದು ವಿಶಿಷ್ಟ ಅನುಭವ. ಅದನ್ನು ಪಡೆಯಬೇಕೆಂದರೆ ನೀವೂ ಕೂಡ ಸೈನ್ಯ ಸೇರಿ. ಬೆಳಗಿನ ವೇಳೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೇಹವನ್ನು ಹುರಿಗೊಳಿಸಿಕೊಂಡು ಮಾನಸಿಕ ಸ್ಥೈರ್ಯವನ್ನು ತಂದುಕೊಳ್ಳಿ. ಸೇನಾ ನೇಮಕಾತಿ ರ್ಯಾಲಿ ನಡೆಯುವಾಗ ಭಾಗವಹಿಸಿ ನನ್ನೊಂದಿಗೆ ದೇಶ ಸೇವೆಗೆ ಬರುವಂತೆ ಗೆಳೆಯರನ್ನು ಪ್ರೇರೇಪಿಸುತ್ತಿದ್ದನು ಎಂದು ಗುರು ಸ್ನೇಹಿತ ಚಂದನ್ ಉದಯವಾಣಿ ಜೊತೆ ಅನಿಸಿಕೆ ಹಂಚಿಕೊಂಡನು.
ನನ್ನ ಮೊಮ್ಮಕ್ಕಳನ್ನೂ ಸೇನೆಗೆ ಸೇರಿಸ್ತೀನಿ – ಹೊನ್ನಯ್ಯ: ನನ್ನ ಮೊಮ್ಮಕ್ಕಳನ್ನು ಸೇನೆಗೆ ಸೇರಿಸ್ತೇನೆ. ಅಷ್ಟೇ ಅಲ್ಲ, ಭಾರತ ದೇಶದ ಪ್ರತಿ ಮನೆಯಿಂದಲೂ ಒಬ್ಬರು ಸೇನೆ ಸೇರಬೇಕು ಎಂದು ಹುತಾತ್ಮ ಯೋಧ ಗುರು ತಂದೆ ಹೊನ್ನಯ್ಯ ಹೇಳಿದರು. ಗುರು ನನ್ನ ಮಗ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಆಗುತ್ತಿದೆ. ನನ್ನ ಮೊಮ್ಮಕ್ಕಳನ್ನು ಸೇನೆಗೆ ಸೇರಿಸಿಯೇ ತೀರುತ್ತೇನೆ. ನನ್ನ ಮಗ ಸೇರಿದಂತೆ ದೇಶ ಕಾಯುವ ಯೋಧರಿಗೆ ಬಾಂಬ್ ಹಾಕಿದವರ ಮನೆ ಸರ್ವನಾಶವಾಗಬೇಕು. ಅಲ್ಲಿಯವರೆಗೂ ನನಗೆ ಸಮಾಧಾನವಿಲ್ಲ ಎಂದು ಹೇಳಿದರು.
ನಾನೂ ಸೈನ್ಯ ಸೇರುವೆ – ಕಲಾವತಿ: ನನ್ನ ಗಂಡ ಇನ್ನೂ ಹತ್ತು ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕು ಅಂದುಕೊಂಡಿದ್ರು. ಆದರೆ, ಅವರಿಂದ ಸಾಧ್ಯವಾಗಲಿಲ್ಲ. ನಾನು ಸೈನ್ಯ ಸೇರಿ ಅವರ ಆಸೆಯನ್ನು ಪೂರೈಸಬೇಕೆಂದು ಅನಿಸುತ್ತಿದೆ. ಅದಕ್ಕೆ ನಾನೂ ಸೈನ್ಯ ಸೇರಬೇಕೆಂದಿರುವೆ ಎಂದು ವೀರಯೋಧ ಗುರು ಪತ್ನಿ ಕಲಾವತಿ ಹೇಳಿದರು. ಇನ್ನು ಹತ್ತು ವರ್ಷ ಯಾರು ಏನೇ ಹೇಳಿದರೂ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತೇನೆ
ಎಂದು ಪತಿ ಹೇಳುತ್ತಿದ್ದುದನ್ನು ನೆನೆದು ಭಾವುಕರಾದ ಕಲಾವತಿ, ಯೋಧರ ಸಾವನ್ನು ಸಂಭ್ರಮಿಸುವವರ ಮನಸ್ಥಿತಿ ಸರಿಯಿಲ್ಲ. ಅಂತಹವರು ತಾವು ಮಾಡ್ತಿರೋದು ಎಷ್ಟು ಸರಿ ಎಂದು ಅವರ ಮನಃಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಲಿ ಎಂದರು. ಪದವಿ ಮುಗಿಸಿದ್ದ ನನ್ನನ್ನು ಮದುವೆಯಾದ ನಂತರವೂ° ಗಂಡನೇ ಇಷ್ಟ ಪಟ್ಟು ಓದಿಸಲು ಸೇರಿಸಿದ್ರು. ನೀನು ಎಲ್ಲಿಯವರೆಗೆ ಓದುತ್ತೀಯಾ ಓದು. ನಾನು ಓದಿಸುತ್ತೇನೆ ಎನ್ನುತ್ತಿದ್ದರು. ನನ್ನ ಆಸೆ ಎಲ್ಲವೂ ಅವರೇ ಆಗಿದ್ದರು ಎಂದು ನೆನೆದು ಕಣ್ಣೀರಿಟ್ಟರು.
ಉಗ್ರರ ವಿರುದ್ಧ ಆತ್ಮಾಹುತಿ ಬಾಂಬ್ ದಾಳಿ ಸಿದ್ಧ – ಚೇತನ್: ನಮ್ಮ ಯೋಧರನ್ನು ಆತ್ಮಾಹುತಿ ದಾಳಿ ನಡೆಸಿ ಕೊಂದ ಮಾದರಿಯಲ್ಲೇ ನಾನೂ ಆತ್ಮಾಹುತಿ ದಾಳಿ ನಡೆಸಿ ಉಗ್ರರನ್ನು ಕೊಲ್ಲಲು ಸಿದ್ಧನಿದ್ದೇನೆ ಎಂದು ಯುವಕನೊಬ್ಬ ತನ್ನ ಹೇಳಿಕೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾನೆ.
ಯೋಧರ ಸಾವಿನಿಂದ ನನ್ನ ರಕ್ತ ಕುದಿಯುತ್ತಿದೆ. ಪ್ರತೀಕಾರದ ಸೇಡಿಗೆ ಮನಸ್ಸು ಹಾತೊರೆಯುತ್ತಿದೆ. ದೇಶದ ಪರವಾಗಿ ಆತ್ಮಾಹುತಿ ಬಾಂಬ್ ದಾಳಿಗೆ ಸಿದ್ದನಿದ್ದೇನೆ. ಆ ನಿಟ್ಟಿನಲ್ಲಿ ನನ್ನನ್ನು ಉಪಯೋಗಿಸಿಕೊಳ್ಳುವವರು ಸಂಪರ್ಕಿಸಬಹುದು ಎಂದು ವಿಡಿಯೋ ಮಾಡಿರುವ ಯುವಕ ನಗರದ ಗುತ್ತಲು ರಸ್ತೆಯ ಬಸವನಗುಡಿ ನಿವಾಸಿ ಜಿ.ಚೇತನ್.
ದಿನಸಿ ಅಂಗಡಿ ವ್ಯಾಪಾರಿಯಾಗಿರುವ ಚೇತನ್ ಈ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಯೋಧರ ತ್ಯಾಗ, ಬಲಿದಾನ ವ್ಯರ್ಥವಾಗಬಾರದು. ಪ್ರತೀಕಾರಕ್ಕಾಗಿ ಎಲ್ಲರೂ ಕಾತರರಾಗಿದ್ದಾರೆ. ಯಾರ ಮುಲಾಜಿಗೂ ಒಳಗಾಗದೆ ಉಗ್ರರು ಹಾಗೂ ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದ್ದಾನೆ.
* ಮಂಡ್ಯ ಮಂಜುನಾಥ್