Advertisement

ಗುಡಿಬಂಡೆ ವರ್ಲಕೊಂಡ ಬೆಟ್ಟಕ್ಕೆ ಗಣಿಆಪತ್ತು? ಅಧಿಕಾರಿಗಳು ಮೌನ: ಸ್ಥಳೀಯರಿಗೆ ಆತಂಕ

02:44 PM Jan 20, 2021 | Team Udayavani |

ಗುಡಿಬಂಡೆ: ಬರಪೀಡಿತ ಪ್ರದೇಶವಾದರೂ ಸರ್ಕಾರದ ಗಮನ ಸೆಳೆದಿರಲಿಲ್ಲ, ಆದರೆ ಕಲ್ಲು ಗಣಿಗಾರಿಕೆಯಿಂದಲೇ ಪ್ರಸಿದ್ಧಿ ಪಡೆದಿರುವ ಬರಪೀಡಿತ ತಾಲೂಕು ಆಪತ್ತಿಗೆ ಸಿಲುಕುವ ಭೀತಿ ಎದುರಿಸುತ್ತಿದೆ. ಗಣಿಗಾರಿಕೆಯಿಂದಾಗಿ ವರ್ಲಕೊಂಡ ಗ್ರಾಮದ ಬಳಿ ಇರುವ ವಿಶಾಲವಾದ ಏಕಶಿಲಾ ಬೆಟ್ಟ ತನ್ನ ನೈಜ ಸ್ಥಿತಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ. ಈ ಮೂಲಕ ಕಲ್ಲುಗಣಿಗಾರಿಕೆಯಿಂದ ತಾಲೂಕನ್ನು ರಕ್ಷಣೆ ಮಾಡಲು ಯಾರು ಮುಂದಾಗುತ್ತಾರೆ ಎಂಬ ದೊಡ್ಡ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

Advertisement

ವಿಸ್ತರಣೆ ಸಾಧ್ಯತೆ: ಜಿಲ್ಲೆಯಲ್ಲೇ ವಿಶಿಷ್ಟವಾಗಿರುವ ತಾಲೂಕಿನ ವರ್ಲಕೊಂಡ ಬೆಟ್ಟ ಮುಂದಿನ ದಿನಗಳಲ್ಲಿ ಇದೇ ಸ್ಥಿತಿಯಲ್ಲಿ ಉಳಿಯುವುದೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಬೆಟ್ಟದ ಸುತ್ತಮುತ್ತಲ ಗ್ರಾಮಸ್ಥರಿಗೆ ಕಾಡುತ್ತಿದೆ. ತಾಲೂಕಿನ ನಾಗೇಲಿ, ವರ್ಲಕೊಂಡ ಬೆಟ್ಟದ ಅಕ್ಕ-ಪಕ್ಕದಲ್ಲಿ ಸೇರಿದಂತೆ ಇತರ ಗ್ರಾಮಗಳಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, ಏಕಶಿಲಾ ಬೆಟ್ಟದ
ಕಡೆಗೂ ವಿಸ್ತರಿಸುವ ಸಾಧ್ಯತೆಯಿದೆ ಎಂದು ವರ‌್ಲಕೊಂಡ ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಸಹಕರಿಸಲಿ:
ಏಕಶಿಲಾ ಬೆಟ್ಟದ ಮೇಲೆ ಕಣ್ಣು: ಕೆಲ ಕಲ್ಲು ಗಣಿಗಾರಿಕೆ ಸಂಸ್ಥೆಯವರು ಗಣಿಗಾರಿಕೆಗೆ ಅನುಮತಿ ನೀಡುವಂತೆ ಕೋರಿ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಇದು ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ಪರಿಣಾಮ ಬೀರುವ
ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅನುಮತಿ ಕೋರಿರುವ ಸಂಸ್ಥೆಗಳಿಗೆ ಗಣಿಗಾರಿಕೆ ಕೈಗೊಳ್ಳಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಬೆಟ್ಟದ ರಕ್ಷಣೆಗೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ
ಸಹಕಾರ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಅನುದಾನ, ಅಧಿಕಾರವಿಲ್ಲದ ತಾಪಂ ರದ್ದತಿಯೇ ಲೇಸು : ಮೂಲಸೌಲಭ್ಯಕ್ಕೆ ಅನುದಾನವೇ ಇಲ್ಲ

ಕಲ್ಲು ಗಣಿಕಾರಿಕೆ ತಡೆಯೋದ್ಯಾರು?: ವರ್ಲಕೊಂಡ ಬೆಟ್ಟ ಬೆಟ್ಟ ಸೇರಿ ತಾಲೂಕಿನಾದ್ಯಂತ ನಿಸರ್ಗ ಸಂಪತ್ತನ್ನು ನಾಶಮಾಡುತ್ತಿದ್ದಾರೆ. ಸರ್ಕಾರದ ಅನುಮತಿಯೇ ಇಲ್ಲದೇ ರಾತ್ರೋರಾತ್ರಿ ಕಲ್ಲುಗಳನ್ನು ಸಾಗಿಸುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.

Advertisement

ನಮ್ಮ ವಿರುದ್ಧವೇ ಪ್ರಕರಣ ದಾಖಲಿಸಿದ್ದರು: ಈ ಹಿಂದೆ ಕೋಲಾರ ಮೂಲದ ಈಶ್ವರಾಚಾರ್‌ ಮತ್ತು ಸಂಬಂಧಿಕರಿಗೆ 35ಎಕರೆಗೆ ಅನುಮತಿ ನೀಡಲಾಗಿತ್ತು. ಆಗ ಅದರ ವಿರುದ್ಧ ಹೋರಾಟಗಳನ್ನು ಮಾಡಿ ಠಾಣೆಯಲ್ಲಿ ನಮ್ಮ ವಿರುದ್ದ ಪ್ರತಿಭಟನೆ ನಡೆಸಿದ್ದೇ ತಪ್ಪು ಎಂಬಂತೆಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರವಾಗಿ ಇಂದಿಗೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದೇವೆ. ನಮ್ಮ ಹೋರಾಟದ ಪ್ರತಿಫ‌ಲವಾಗಿ ಸರ್ಕಾರ ಕಲ್ಲುಗಣಿಗಾರಿಕೆಗೆ ಅನುಮತಿ ನಿರಾಕರಣೆ ಮಾಡಿದೆ. ಏಕ ಶಿಲಾಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆಗೆ ಒಳಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗುತ್ತದೆ ಎಂದು
ಪೊಲಂಪಲ್ಲಿ ತಾಪಂ ಸದಸ್ಯ ಪಿ.ಸಿ.ಮಂಜುನಾಥ್‌ ತಿಳಿಸಿದ್ದಾರೆ.

ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ
ತಾಲೂಕಿನ ಸುತ್ತಮುತ್ತಲೂ ಬೆಟ್ಟಗುಡ್ಡಗಳ ಪ್ರದೇಶ ಆವರಿಸಿಕೊಂಡಿದ್ದು, ಬಂಡೆಗಲ್ಲುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ತಾಲೂಕಿನಾದ್ಯಂತ ಎಗ್ಗಿಲ್ಲದೆ ಕಲ್ಲು ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ತೀಲಕುಂಟಹಳ್ಳಿ, ನಾಗೇಲಿ, ಕೊಂಡರೆಡ್ಡಿಹಳ್ಳಿ ಸುತ್ತಮುತ್ತ ಕಲ್ಲು ಸಂಪತ್ತಿನ ಪ್ರಮಾಣ ಕಡಿಮೆಯಾಗುತ್ತ ಬಂದಂತೆ ಕಲ್ಲು ಗಣಿಗಾರಿಕೆ ಸಂಸ್ಥೆಯವರು ವರ‌್ಲಕೊಂಡ ಬೆಟ್ಟಕ್ಕೆ ಕಣ್ಣು ಹಾಕಿದ್ದಾರೆಂಬ ವದಂತಿ ಹಬ್ಬಿದೆ.

– ಶ್ರೀಕಾಂತ್‌, ಗುಡಿಬಂಡೆ

Advertisement

Udayavani is now on Telegram. Click here to join our channel and stay updated with the latest news.

Next