ಗುಡಿಬಂಡೆ: ತಾಲೂಕಿನ ವಿವಿಧ ಕಡೆಗಳಿಗೆ ಮತ್ತು ಪಟ್ಟಣಕ್ಕೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಸಾರಿಗೆ ಬಸ್‌ಗಳು ಬಾರದೆ ಇರುವುದರಿಂದ ಬರುವ ಬಸ್‌ಗಳಲ್ಲೇ ಜನಸಂದಣಿ ಹೆಚ್ಚಾಗುತ್ತಿರುವುದರಿಂದ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬಾಗಿಲಲ್ಲೇ ನಿಂತು ಪ್ರಯಾಣಿಸುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಗುಡಿಬಂಡೆ ಪಟ್ಟಣದಿಂದ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗೌರೀಬಿದನೂರು ಕಡೆಗಳಿಗೆ ವಿದ್ಯಾಬ್ಯಾಸಕ್ಕಾಗಿ ಹೋಗಿ ಬರುತ್ತಿದ್ದು, ಗುಡಿಬಂಡೆ ಪಟ್ಟಣಕ್ಕೆ ಸಾರಿಗೆ ಸಂಪರ್ಕ ತೀರ ವಿರಳವಾಗಿರುವುದರಿಂದ, ಸಾರಿ ಸೌಲಭ್ಯ ಇರುವ ಕಡೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ದಾಖಲಾಗಿದ್ದು, ಪ್ರತಿ ದಿನ ಬೆಳಿಗ್ಗೆ 5 ಗಂಟಗೆಯಿಂದ ಕೇವಲ 8 ಗಂಟೆಯ ಒಳಗಡೆ ನೂರಾರು ಸಂಖ್ಯೆಯಲ್ಲಿ ಪಟ್ಟಣದಿಂದಲ್ಲೇ ಬಸ್‌ಗಾಗಿ ವಿದ್ಯಾರ್ಥಿಗಳು ಕಾದು ಬಸ್‌ನಲ್ಲಿ ಸೀಟ ಸಿಗಲಿ, ಬಿಡಲಿ ನಿಂತು ಕೊಂಡೇ ಬಸ್‌ನಲ್ಲಿ ಪ್ರಯಾಣ ಮಾಡುತ್ತಾರೆ.
ಸಾರಿಗೆ ಬಸ್‌ಗಳು ಸಮಯಕ್ಕೆ ಬಾರದೇ ಇರುವುದರಿಂದ ವಿದ್ಯಾರ್ಥಿಗಳು ಅಟೋ, ಮಿನಿ ಬಸ್‌ಗಳ ಆಧಾರ ಮಾಡಿಕೊಳ್ಳುತ್ತಿದ್ದು, ಇತ್ತೀಚೆಗೆ ಅವುಗಳು ಅಪಘಾತವಾಗಿ ವಿದ್ಯಾರ್ಥಿಗಳು ಮೃತ ಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಇದು ಮರೆಮಾಚುವ ಮುನ್ನವೇ ಗುಡಿಬಂಡೆಯಿಂದ ಚಿಕ್ಕಬಳ್ಳಾಪುರ ತೆರಳುವ ಕೆ.ಎ.೪೦.ಎಫ್.೧೫೭೨ ರ ಬಸ್‌ಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ತೆರಳು ಬಾಗಿಲಲ್ಲೆ ನಿಂತಿ ಪ್ರಯಾಣಿಸುತ್ತಿರುವುದನ್ನು ಪೋಷಕರೊಬ್ಬರು ವಿಡಿಯೋ ಚಿತ್ತಿಕರಿಸಿ ಸಾಮಾಜಿಕ ಜಾಲ ತಾಣಕ್ಕೆ ಹರಿಬಿಟ್ಟಿದ್ದಾರೆ.
ಬಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇರುವುದರಿಂದ ವಿದ್ಯಾರ್ಥಿಗಳು ಬಾಗಿಲಲ್ಲೆ ನಿಂತು ಪ್ರಯಾಣಿಸುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರು ಅವರ ಪ್ರಾಣಕ್ಕೆ ಕಂಟಕವಾಗುವ ಸಂಬಂವ ಹೆಚ್ಚಾಗಿದ್ದರು, ಆ ಬಸ್‌ನ ಚಾಲಕ ಅದನ್ನು ಗಮನಕ್ಕೆ ಸಹ ತೆಗೆದುಕೊಳ್ಳದೇ ವೇಗವಾಗಿ ಬಸ್ ಅನ್ನು ಚಲಾಯಿಸಿದ್ದು, ನಿರ್ವಾಹಕ ವಿದ್ಯಾರ್ಥಿಗಳನ್ನು ಒಳಕ್ಕೆ ಕರೆಸಿಕೊಳ್ಳುವಂತಹ ಕೆಲಸಕ್ಕೂ ಸಹ ಮುಂದಾಗದೇ ಇರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ರಾಜ್ಯ ಸರ್ಕಾರದ ಉಚಿತ ಬಸ್ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್ ಅವಲಂಭಿಸಿರುವುದರಿಂದ ಅಲ್ಲೋ ಇಲ್ಲೋ ಸಿಗುತ್ತಿದ್ದ ಸೀಟ್‌ಗಳು ಸಹ ಸಿಗದಾಗಿದ್ದು, ಎಲ್ಲಾ ಭಾಗದಲ್ಲೂ ಬಸ್‌ಗಳ ಡಿಮ್ಯಾಂಡ್ ಜಾಸ್ತಿಯಾಗಿರುವುದರಿಂದ ಗುಡಿಬಂಡೆ ಮಾರ್ಗದ ಬಸ್‌ಗಳನ್ನು ಕಡಿತ ಮಾಡಿ, ಬೇರೆಡೆಗೆ ಬಸ್‌ಗಳನ್ನು ಕಳುಹಿಸುತ್ತಿದ್ದಾರೆ.
ಯಾತ್ರೆಗಳಿಗೆ ಬಸ್: ಶಬರಿಮಲೆ, ಓಂ ಶಕ್ತಿ ದೇವಸ್ಥಾನಗಳಿಗೆ ಬಸ್‌ಗಳನ್ನು ಬಾಡಿಗೆಗೆ ಪಡೆಯುತ್ತಿರುವುದರಿಂದ ಈ ಭಾಗದ ಹಾಗೂ ಗ್ರಾಮೀಣ ಭಾಗದ ಬಸ್‌ಗಳನ್ನು ನಿಲ್ಲಿಸಿ ಯಾತ್ರೆಗಳಿಗೆ ಕಳುಹಿಸುತ್ತಿರುವುದರಿಂದ ಬಸ್‌ಗಳ ಡಿಮ್ಯಾಂಡ್ ಜಾಸ್ತಿಯಾಗಿದೆ.
-ನವೀನ್ ಕುಮಾರ್.ಎನ್