ಒಂದು ವರ್ಷದ ಹಿಂದೆ 10 ಎಕರೆ ಜಮೀನಿನಲ್ಲಿ ನೆಟ್ಟ ಸೀಬೆ ಸಸಿಗಳು ಇವತ್ತು, ಫಲ ಕೊಟ್ಟು ಲಕ್ಷ ಲಕ್ಷ ಲಾಭ ತಂದು ಕೊಡುತ್ತಿದೆ. ಸೀಬೆ ನಂಬಿದರೆ ನಸೀಬು ಕೂಡ ಬದಲಾಗುತ್ತದೆ ಅನ್ನೋದಕ್ಕೆ ಇಲ್ಲಿದೆ ಉದಾಹರಣೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಲಿಂಗದಹಳ್ಳಿಯ ರಾಘವೇಂದ್ರ ಅವರ ಕೃಷಿಯ ಕಡೆಗೇ ಈಗ ಎಲ್ಲರ ಚಿತ್ತ ನೆಟ್ಟಿದೆ. ಏಕೆಂದರೆ, ಹೊರವಲಯದಲ್ಲಿರುವ ತಮ್ಮ 10 ಎಕರೆ ಜಮೀನಿನಲ್ಲಿ ಕಳೆದ ಒಂದು ವರ್ಷದ ಹಿಂದೆ ನೆಟ್ಟ ಸೀಬೆ ಸಸಿಗಳು ಇವತ್ತು, ಫಲ ಕೊಟ್ಟು ಲಕ್ಷ ಲಕ್ಷ ಲಾಭ ತಂದು ಕೊಡುತ್ತಿದೆ. ರಾಘು ಹನಿನೀರಾವರಿ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.
ಒಂದು ಎಕರೆಯಲ್ಲಿ 1,000 ಸಸಿಗಳನ್ನು ನಾಟಿ ಮಾಡಲಾಗಿದೆ. ಆಂಧ್ರ ಪ್ರದೇಶದಿಂದ ತಂದಿರುವ ತೈವಾನ್ ಪಿಂಕ ಹೆಸರಿನ ತಳಿ ಇದು. ಒಂದು ಗಿಡದಲ್ಲಿ 30 ಕ್ಕೂ ಹೆಚ್ಚು ಹಣ್ಣುಗಳು ಬಿಡುತ್ತಿವೆ. ಈ ಮಧ್ಯೆ ಮೊದಲ ಕಟಾವು ಆಗಿದೆ. ಆಗ ಒಂದು ಕೆ.ಜಿ ತೂಕಕ್ಕೆ 2 ಹಣ್ಣು ಮಾತ್ರ ಬರುತ್ತವೆ. ಈ ತಳಿ ಉತ್ತಮ ರುಚಿ ಮತ್ತು ಬೃಹತ್ ಗಾತ್ರ ಹೊಂದಿದೆ. ಈಗಾಗಲೇ ಸುಮಾರು ರೂ. 5 ಲಕ್ಷದಷ್ಟು ಬೆಲೆಯ, ಹಣ್ಣುಗಳನ್ನು ಮಾರಾಟ ಮಾಡಲಾಗಿದೆ. ಬೆಳೆದ ಹಣ್ಣಿಗೆ ಈ ಭಾಗದಲ್ಲಿ ಮಾರುಕಟ್ಟೆ ಕೊರತೆ ಇದ್ದು, ಚೆನ್ನೈ ಮತ್ತು ಮಂಗಳೂರು ಮಾರುಕಟ್ಟೆಗೆ ಹಣ್ಣುಗಳನ್ನು ಸಾಗಾಣಿಕೆ ಮಾಡಲಾಗುತ್ತಿದೆ. ಪ್ರತಿ ಕೆ.ಜಿಗೆ 35 ರೂ. ಬೆಲೆ ಸಿಗುತ್ತಿದೆ. ಆದರೆ, ಸ್ಥಳೀಯ ಮಾರುಕಟ್ಟೆಯಲ್ಲೇ ಸೀಬೆ ಹಣ್ಣುಗಳನ್ನು ಮಾರಾಟ ಮಾಡಿದರೆ ರೈತರಿಗೆ ಇನ್ನೂ ಹೆಚ್ಚು ಆದಾಯ ಸಿಗುತ್ತದೆ ಎನ್ನುತ್ತಾರೆ ರೈತ ರಾಘವೇಂದ್ರ.
ಮೊದಲ ಬೆಳೆಯಿಂದ ಸ್ವಲ್ಪ ಫಸಲು ಸಿಗುತ್ತದೆ. ಮುಂದಿನ ವರ್ಷವು ಕಾಯಿ ಮತ್ತು ಹಣ್ಣಿನ ಪ್ರಮಾಣ ಸಹ ಹೆಚ್ಚಾಗುತ್ತದೆ. ಪ್ರತಿ ಗಿಡವನ್ನೂ ಸಂರಕ್ಷಣೆ ಮಾಡಲು ಶ್ರಮ ವಹಿಸುವುದು ಮುಖ್ಯ. ಹೊಲದಲ್ಲಿರುವ 4 ಬೋರ್‌ವೆಲ್‌ನಲ್ಲಿ ಅಂತರ್ಜಲ ಕಡಿಮೆಯಾಗಿ, ಸಸಿಗಳು ಒಣಗುವ ಸ್ಥಿತಿಯಲ್ಲಿದ್ದವು. ಮಳೆ ಕೊರತೆ ಸಮಯದಲ್ಲಿ ಬೆಳೆಯನ್ನೂ ರಕ್ಷಿಸಲು ಟ್ಯಾಂಕರ್ ಮೂಲಕ ನೀರು ಹರಿಸಿದ್ದಾರೆ. ಬೆಳೆ ಮತ್ತು ಕಾಯಿಗೆ ಹುಳ ಹತ್ತದೇ ಇರಲಿ ಎಂದು ಬೇವಿನ ಎಣ್ಣೆ, ಸಗಣಿ , ಬೆಲ್ಲದ ನೀರು, ಮತ್ತು ಕೆಲವು ಬಾರಿ ರಾಸಾಯನಿಕ ಕ್ರೀಮಿ ನಾಶಕವನ್ನೂ ಸಿಂಪರಣೆ ಮಾಡಿದ್ದಾರೆ. ಹೀಗಾಗಿ ಸೀಬೆಕಾಯಿಗಳು ಗಾತ್ರ ದೊಡ್ಡದಾಗಿದ್ದು, ಫಸಲಿನ ಏರಿಕೆ ಕೂಡ ಆಗಿದೆಯಂತೆ. ಆದರೆ ಸಣ್ಣ ಭೂಮಿ ಹೊಂದಿರುವ ರೈತರು ಈ ಬೆಳೆ ಬೆಳೆದರೆ ಲಾಭ ಪಡೆಯುವುದು ಕಷ್ಟಸಾಧ್ಯ. ಏಕೆಂದರೆ, ಬೆಳೆದ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ಬೆಲೆ ಸಿಗಬೇಕೆಂದರೆ ದೂರದ ಪಟ್ಟಣಗಳಿಗೆ ಸಾಗಾಣಿಕೆ ಮಾಡಬೇಕಾಗುತ್ತದೆ. ಇದರಿಂದ ರೈತ ಖರ್ಚು ಮಾಡಿರುವ ಹಣಕ್ಕೆ ಲಾಭ ಬರುವುದಿಲ್ಲ . ಇಂತಹ ಹಣ್ಣಿನ ಫಸಲಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಮಾತ್ರ ಲಾಭ ಪಡೆಯಬಹುದು ಎನ್ನುತ್ತಾರೆ ರಾಘವೇಂದ್ರ.
– ಎನ್.ಶಾಮೀದ್ ತಾವರಗೇರಾ