ಗ್ವಾಟೆಮಾಲಾ: ಇಲ್ಲಿನ ಫ್ಯೂಗೋ ಜ್ವಾಲಾಮುಖಿ ಭಾನುವಾರ ದಿಢೀರನೇ ಬೆಂಕಿ ಉಗುಳಲು ಆರಂಭಿಸಿದ್ದು, ಭೀಕರ ಅಗ್ನಿಯ ಜ್ವಾಲೆಗೆ 70 ಮಂದಿ ಬಲಿಯಾಗಿದ್ದಾರೆ ಎಂದು ಗ್ವಾಟೆಮಾಲಾದ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ಜ್ವಾಲಮುಖಿಯ ಭೀಕರೆ ಎಷ್ಟಿತ್ತು ಎಂದರೆ ನೋಡ, ನೋಡುತ್ತಿದ್ದಂತೆಯೇ ಹಲವು ಕುಟುಂಬದ ಸದಸ್ಯರು ಬಿಸಿ ಬೂದಿ ಹಾಗೂ ಮಣ್ಣಿನೊಳಗೆ ಸಮಾಧಿಯಾಗಿ ಹೋಗಿದ್ದಾರೆ!
ಮತ್ತೊಂದೆಡೆ ಬೂದಿ ಹಾಗೂ ಮಣ್ಣು ಸಮುದ್ರದ ಅಲೆಗಳಂತೆ ಗ್ರಾಮಗಳನ್ನು ಮುಳುಗಿಸಿ ಬಿಟ್ಟಿದೆ..ಈ ಹಿನ್ನೆಲೆಯಲ್ಲಿ ಫ್ಯೂಗೋ ಜ್ವಾಲಾಮುಖಿಗೆ ತುತ್ತಾಗಿ ನಾಪತ್ತೆಯಾಗಿರುವ ಜನರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದು, ಇವರಿಗೆ ಸೈನಿಕರು ಕೂಡಾ ಸಾಥ್ ನೀಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಭೀಕರ ಹಾಗೂ ಭಯಾನಕ ಜ್ವಾಲಾಮುಖಿಯಿಂದಾಗಿ ಸಾವಿರಾರು ಜನರು ತಾತ್ಕಾಲಿಕ ಶೆಡ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಫ್ಯೂಗೋ ಜ್ವಾಲಾಮುಖಿಯ ಬೂದಿ ಅಂದಾಜು 10 ಕಿಲೋ ಮೀಟರ್ ವರೆಗೆ ಹರಡಿದೆ ಎಂದು ವರದಿ ವಿವರಿಸಿದೆ.
ಜ್ವಾಲಾಮುಖಿಯಿಂದಾಗಿ ದಟ್ಟ ಹೊಗೆ ಆವರಿಸಿದ್ದು, ಬೆಟ್ಟ ಗುಡ್ಡಗಳು, ಮರ-ಗಿಡಗಳು ಕಪ್ಪುಹಣ್ಣಕ್ಕೆ ತಿರುಗಿವೆ. ನೂರಕ್ಕೂ ಹೆಚ್ಚು ಮಂದಿಗೆ ಸುಟ್ಟಗಾಯಗಳಾಗಿವೆ.