ಕಲಾದಗಿ: ದೇಶದ ಹೆಮ್ಮೆಯ ಸಂಕೇತ ರಾಷ್ಟ್ರಧ್ವಜ ಬಟ್ಟೆ ಮತ್ತು ನೂಲು ತಯಾರಾಗುತ್ತಿರುವುದು ತುಳಸಿಗೇರಿ ಖಾದಿ ಕೇಂದ್ರದಲ್ಲಿ ಎನ್ನುವುದು ಜಿಲ್ಲೆಯ ಹೆಮ್ಮೆಯ ಸಂಗತಿ.
ವೆಂಕಟೇಶ ಮಾಗಡಿ 1981ರಲ್ಲಿ ಆರಂಭಿಸಿದ ತುಳಸಿಗೇರಿಯ ಖಾದಿ ಕೇಂದ್ರದಲ್ಲಿ ದಿನನಿತ್ಯ 50-60 ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. 2002ರಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್)ಪರವಾನಗಿ ದೊರೆತ ನಂತರ ರಾಷ್ಟ್ರಧ್ವಜದ ಬಟ್ಟೆಯನ್ನು ತಯಾರಿಸಲಾಗುತ್ತಿದೆ. ರಾಷ್ಟ್ರಧ್ವಜ ತಯಾರಿಕೆಯಲ್ಲಿ ತುಳಸಿಗೇರಿಯ ಅಂಗವಿಕಲೆ ಕಮಲವ್ವ ಲಕ್ಷ್ಮಣ ಬೂದಿಗೊಪ್ಪ ಹಾಗೂ ತುಳಸವ್ವ ಸೊನ್ನದ ಮಹಿಳೆಯರ ಶ್ರಮ ಅಡಗಿದೆ.
75 ವರ್ಷದ ಸಾವಿತ್ರಿಬಾಯಿ ಗೋಗಿನ ಉತ್ಸಾಹದಲ್ಲಿಯೇ ನೂಲು ತೆಗೆಯುವ ಕೆಲಸ ಮಾಡುತ್ತಿದ್ದು, ಈ ಮಹಿಳೆಯರು ಕಳೆದ 24 ವರ್ಷದಿಂದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಓರ್ವ ಮಹಿಳೆ ನೂಲು ತೆಗೆದರೆ, ಇನ್ನೋರ್ವ ಮಹಿಳೆ ಬಟ್ಟೆ ನೇಯುವ ಕೆಲಸ ಮಾಡುತ್ತಾರೆ.
ರಾಜ್ಯ-ರಾಷ್ಟ್ರ-ವಿದೇಶದಲ್ಲಿ ಹಾರಾಡುವ ರಾಷ್ಟ್ರಧ್ವಜದ ನೂಲು ಮತ್ತು ಬಟ್ಟೆ ತಯಾರಾಗುವುದು ತುಳಸಿಗೇರಿ, ಸಿಮೀಕೇರಿ, ಜಾಲಿಹಾಳ ಖಾದಿ ಕೇಂದ್ರಗಳಲ್ಲಿ ಆದರೆ ಅತೀ ಹೆಚ್ಚು ತಯಾರಾಗುವುದು ತುಳಸಿಗೇರಿ ಖಾದಿ ಕೇಂದ್ರದಲ್ಲಿಯೇ. ಬೆಳಗಾವಿ-ರಾಯಚೂರು ಹೆದ್ದಾರಿ ಪಕ್ಕದಲ್ಲಿರುವ ಈ ಖಾದಿ ಕೇಂದ್ರ ಅಭಿವೃದ್ಧಿಗೆ ಸರಕಾರಗಳು ಅಗತ್ಯ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ಅಗತ್ಯ ಅನುದಾನ ಬಿಡುಗಡೆ ಮಾಡಬೇಕಿದೆ.
ಎಲ್ಲ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸುವ ಸರಕಾರ ರಾಷ್ಟ್ರಧjಜದ ಬಟ್ಟೆ ತಯಾರಿಸುವ ಶ್ರೇಷ್ಠ ಕಾಯಕದಲ್ಲಿ ತೊಡಗಿರುವವರನ್ನು ಗುರುತಿಸಿ ಸನ್ಮಾನಿಸಬೇಕಿದೆ.