Advertisement

ಬುಟ್ಟಿ  ಹೆಣೆಯುವ ಕುಟುಂಬಕ್ಕೆ ಸೂರಿನ ಭರವಸೆ 

04:18 PM Dec 07, 2017 | |

ಇಡ್ಕಿದು: ಬುಟ್ಟಿ ಹೆಣೆಯುವ ಕುಟುಂಬಕ್ಕೆ ಬೇಕು ಸೂರು, ಸೌಲಭ್ಯ ಎಂಬ ಶಿರೋನಾಮೆಯಲ್ಲಿ ಬುಧವಾರ ಉದಯವಾಣಿ ಸುದಿನ ಪತ್ರಿಕೆಯಲ್ಲಿ ಪ್ರಕಟವಾದ ಅಳಕೆಮಜಲು ಕೊರಗ ಕುಟುಂಬದ ವರದಿಗೆ ತತ್‌ಕ್ಷಣ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ, ಗ್ರಾ.ಪಂ. ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಮಧ್ಯಾಹ್ನ ಗುರುವಪ್ಪ ಅವರ ಕುಟುಂಬ ವಾಸಿಸುವ ಜೋಪಡಿ ಮನೆಗೆ ಭೇಟಿ ನೀಡಿ ಕುಟುಂಬದ ಸ್ಥಿತಿ ಗತಿಗಳ ಮಾಹಿತಿ ಪಡೆದರು.

Advertisement

ಬಂಟ್ವಾಳ ತಾ| ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ ಕುಮಾರ್‌, ಇಡ್ಕಿದು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಗೋಕುಲ್‌ದಾಸ್‌ ಭಕ್ತ, ಇಡ್ಕಿದು ಗ್ರಾಮ ಲೆಕ್ಕಿಗ ಮಂಜುನಾಥ್‌, ಗ್ರಾ.ಪಂ. ಉಪಾಧ್ಯಕ್ಷ ಸುಧೀರ್‌ ಕುಮಾರ್‌ ಶೆಟ್ಟಿ, ಸದಸ್ಯರಾದ ಜಯರಾಮ ಕಾರ್ಯಡಿ, ಅಳಕೆ ಮಜಲು ಶಾಲಾ ಎಸ್‌ ಡಿಎಂಸಿ ಅಧ್ಯಕ್ಷೆ ವನಿತಾ ಧರಣ್‌, ಕೊರಗ ಸಮುದಾಯದ ಮನೆ ಭೇಟಿ ನೀಡಿ ಗುರುವಪ್ಪ ಮತ್ತು ಪತ್ನಿ ಗುರುವಮ್ಮ ಅವರಿಂದ ಮಾಹಿತಿ ಸಂಗ್ರಹಿಸಿದರು.

ಸ್ಥಳ ದಾನ ಪಡೆಯಲು ಮಾತುಕತೆ
ಮನೆ ಇರುವ ಜಾಗದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಸ್ಥಳದ ಹಕ್ಕುದಾರರಾದ ಅಕ್ಕು ಎಂಬವರು ಗುರುವಪ್ಪರ ಸಂಬಂಧಿಕರಾಗಿದ್ದು ಅವರಲ್ಲಿ ಮಾತುಕತೆ ನಡೆಸಿ, ಈಗ ಇರುವ ಜೋಪಡಿ ಮನೆಯ ಸ್ಥಳವನ್ನು ದಾನವಾಗಿ ಕೇಳಿ ಪಡೆಯುವುದು ಅಥವಾ ಮುಂದೆ ಗ್ರಾ.ಪಂ. ನೀಡುವ ನಿವೇಶನದಲ್ಲಿ ಇವರ ಹೆಸರು ಸೇರ್ಪಡೆಗೊಳಿಸುವುದಾಗಿ ತಿಳಿಸಿದರು. ಡಿ. 11ರಂದು ಗ್ರಾ.ಪಂ.ಗೆ ಸಂಬಂಧ ಪಟ್ಟ ಜನರನ್ನು ಆಹ್ವಾನಿಸಿ ಈ ಬಗ್ಗೆ ತೀರ್ಮಾನಿಸುದಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಳಿಸಿದರು.

ಮನೆ ಕಟ್ಟಲು ನಿವೇಶನದ ವ್ಯವಸ್ಥೆ ಆದ ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಕೊರಗರ ಅಭಿವೃದ್ಧಿ ಅನುದಾನದಿಂದ 2 ಲಕ್ಷ ರೂ., ಮನೆ ನಿರ್ಮಿಸಲು ಸಹಾಯಧನ ಒದಗಿಸುವುದಾಗಿ ಇಲಾಖೆಯ ಅಧಿಕಾರಿ ಮೋಹನ್‌ ಕುಮಾರ್‌ ತಿಳಿಸಿದರು.

ಅಳಕೆ ಮಜಲು ಸ.ಹಿ.ಪ್ರಾ.ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ವನಿತಾ ಧರಣ್‌ ಮಾತನಾಡಿ, ಇಲ್ಲಿನ ಮಕ್ಕಳಿಗೆ ಶಾಲೆಯಿಂದ ಸಿಗುವ ಸವಲತ್ತು ಮತ್ತು ಆಹಾರ ಈಗಾಗಲೇ ದೊರಕುತಿದೆ ಮುಂದೆ ಇವರಿಗೆ ಪಡಿತರ, ಆಧಾರ್‌, ಮೊದಲಾದ ದಾಖಲೆ ಪತ್ರ ಮಾಡಿಸಲು ಮಾಹಿತಿ ನೀಡುವುದಾಗಿ ಭರವಸೆ ನೀಡಿದರು. ಮನೆಯವರ ಸಮ್ಮುಖದಿಂದಲೇ ಬಂಟ್ವಾಳ ತಹಶೀಲ್ದಾರ್‌ ಅವರನ್ನು ಸಂಪರ್ಕಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಕುಟುಂಬ ಸ್ಥಿತಿಗತಿಗಳ ಮಾಹಿತಿ ನೀಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next