Advertisement

ಹೋಟೆಲುಗಳ ಸಂಘದ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ

11:49 AM Feb 25, 2018 | |

ಬೆಂಗಳೂರು: “ಕೇಟರಿಂಗ್‌’ (ಆಹಾರ ಪೂರೈಸುವಿಕೆ) ಮೇಲಿನ ಜಿಎಸ್‌ಟಿ ಕಡಿಮೆ ಮಾಡುವುದು, ಹೋಟೆಲುಗಳಿಗೆ ಪೂರೈಸುವ ಅಡುಗೆ ಅನಿಲಕ್ಕೆ ಸರ್ಕಾರಿ ಸ್ವಾಮ್ಯದ ಅನಿಲ ವಿತರಕ ಸಂಸ್ಥೆಗಳು ಸಬ್ಸಿಡಿ ಸ್ಥಗಿತಗೊಳಿಸಿರುವುದು ಸೇರಿದಂತೆ ಹೋಟೆಲ್‌ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಮತ್ತು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಕೇಂದ್ರ ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ್‌ ಹೇಳಿದರು.

Advertisement

ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಬೃಹತ್‌ ಬೆಂಗಳೂರು ಹೋಟೆಲುಗಳು ಸಂಘದ (ರಿ) 82ನೇ ವಾರ್ಷಿಕ ಸರ್ವ ಸದಸ್ಯರ ಸಭೆ, ಹಿರಿಯ ಹೋಟೆಲ್‌ ಉದ್ಯಮದಾರಿಗೆ ಸನ್ಮಾನ, ಉದ್ಯಮಶ್ರೀ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಕೇಟರಿಂಗ್‌’ಗೆ (ಅಡುಗೆ ಪೂರೈಸುವಿಕೆ) ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು ಹೋಟೆಲ್‌ಗ‌ಳಿಗೆ ವಿಧಿಸಲಾಗಿದ್ದ ಶೇ. 12 ಮತ್ತು 18ರಷ್ಟು ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಸಿರುವಂತೆ ಕೇಟರಿಂಗ್‌ ನಡೆಸುವವರಿಗೂ ಶೇ.5ರಷ್ಟು ಜಿಎಸ್‌ಟಿ ವಿಧಿಸಬೇಕು ಎಂದು ಬೇಡಿಕೆ ಇಟ್ಟಿದ್ದೀರಿ.

ಈ ಸಮಸ್ಯೆ ಇರುವುದು ನನ್ನ ಗಮನಕ್ಕೆ ಈಗಷ್ಟೇ ಬಂದಿದೆ. ಮಾ.5ರಿಂದ ಲೋಕಸಭೆ ಅಧಿವೇಶನ ಆರಂಭವಾಗಲಿದೆ. ಈ ಸಂಬಂಧದ ಮನವಿ ಪತ್ರದೊಂದಿಗೆ ಮಾ. 6ರಂದು ದೆಹಲಿಗೆ ಬನ್ನಿ. ನಿಮ್ಮ ಈ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇನೆ ಎಂದು ಹೋಟೆಲ್‌ ಮಾಲೀಕರ ಸಂಘದ ಪ್ರತಿನಿಧಿಗಳಿಗೆ ಭರವಸೆ ನೀಡಿದರು. 

ಬ್ರಾಂಡ್‌ ಮೌಲ್ಯ ಉಳಿಸಿಕೊಳ್ಳಿ: ಹೋಟೆಲ್‌ ಮಾಲೀಕರು ಕೇವಲ ಉದ್ದಿಮೆದಾರರರಷ್ಟೇ ಅಲ್ಲ. ಅವರು ಬೆಂಗಳೂರು ಮತ್ತು ಕರ್ನಾಟಕ ಸೇರಿದಂತೆ ತಾವು ಹೋಟೆಲ್‌ ನಡೆಸುವ ಪ್ರದೇಶದ “ಬ್ರಾಂಡ್‌’ ಇದ್ದಂತೆ. ಆ ಬ್ರಾಂಡ್‌ ಸೃಷ್ಟಿಸಲು ಹಗಲಿರುಳು ಎನ್ನದೇ ಸಾಕಷ್ಟು ಬೆವರು ಸುರಿಸುತ್ತೀರಿ. ಅದರ ಹಿಂದೆ ಅಪಾರ ಪರಿಶ್ರಮ, ತ್ಯಾಗ ಇರುತ್ತದೆ.

Advertisement

ವ್ಯಾಪಾರಕ್ಕಿಂತ ಹೆಚ್ಚಾಗಿ ಸೇವೆಯ ದೃಷ್ಟಿಯಿಂದ ಕೆಲಸ ಮಾಡುತ್ತಿರುವ ಯಾವುದಾದರೂ ಕ್ಷೇತ್ರ ಇದ್ದರೆ, ಅದು ಹೋಟೆಲ್‌ ಉದ್ಯಮ. ಸಮಸ್ಯೆಗಳಿರಬಹುದು. ಆದರೆ, ಶುಚಿ, ರುಚಿ ಮತ್ತು ಸ್ವಾಧಿಷ್ಟ ಆಹಾರವನ್ನು ನೀಡುವ ಬದ್ಧತೆ ಯಾವತ್ತೂ ಬಿಡಬೇಡಿ. ಆ ಮೂಲಕ ನಿಮ್ಮ ಬ್ರಾಂಡ್‌ ಮೌಲ್ಯ ಕಾಯ್ದುಕೊಳ್ಳಿ ಎಂದು ಅನಂತಕುಮಾರ್‌ ಕಿವಿಮಾತು ಹೇಳಿದರು. 

ಇದಕ್ಕೂ ಮೊದಲ ಮಾತನಾಡಿದ ಕರ್ನಾಟಕ ಪ್ರದೇಶ ಹೋಟೆಲುಗಳು ಮತ್ತು ಉಪಹಾರ ಮಂದಿರಗಳ ಸಂಘದ ಅಧ್ಯಕ್ಷ ಎಂ. ರಾಜೇಂದ್ರ ಹಾಗೂ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಬಿ. ಚಂದ್ರಶೇಖರ್‌ ಹೆಬ್ಟಾರ್‌, ಹೋಟೆಲ್‌ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಳುವುದರ ಜೊತೆಗೆ ಸಂಘಗಳು ನಡೆದು ಬಂದ ಹಾದಿ ಮತ್ತು ಸಮಾಜಕ್ಕೆ ಹೋಟೆಲ್‌ ಉದ್ಯಮದ ಕೊಡುಗೆಯನ್ನು ವಿವರಿಸಿದರು. 

ಇದೇ ವೇಳೆ ಹಿರಿಯ ಹೋಟೆಲ್‌ ಉದ್ದಿಮೆದಾರರಾದ ವೆಂಕಟರಮಣ ಮಯ್ಯ, ರೋಹಿದಾಸ್‌ ಶೆಣೈ, ಬಿ. ರಮಾನಾಥ ಶೆಟ್ಟಿ, ಯು. ಅನಂತಪದ್ಮನಾಭ ಬಲ್ಲಾಳ್‌, ಎಚ್‌. ಆರ್‌. ಕೃಷ್ಣಮೂರ್ತಿ ಅವರಿಗೆ “ಆಥಿತೋದ್ಯಮ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಎನ್‌.ಕೆ.ಪಿ ಅಬ್ದುಲ್ಲಾ ಅಜೀಜ್‌ ಅವರಿಗೆ “ಉದ್ಯಮಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಹೋಟೆಲ್‌ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 

ಕಾರ್ಯಕ್ರಮದಲ್ಲಿ ದೂರದರ್ಶನ ದಕ್ಷಿಣ ವಲಯದ ನಿವೃತ್ತ ಹೆಚ್ಚುವರಿ ಪ್ರಧಾನ ನಿರ್ದೇಶಕ ನಾಡೋಜ ಡಾ. ಮಹೇಶ್‌ ಜೋಷಿ, ಶಿಕ್ಷಣ ತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ, ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಹೊಳ್ಳ ಎಸ್‌ ಹಾಗೂ ಇತರ ಪದಾಧಿಕಾರಿಗಳು ಇದ್ದರು.

ಹೋಟೆಲ್‌ ಉದ್ಯಮಕ್ಕೆ ಪೂರಕ ಪಠ್ಯಕ್ರಮ: “ಹೋಟೆಲ್‌ಗ‌ಳಿಗೆ ವಿತರಿಸುವ ಅಡುಗೆ ಅನಿಲಕ್ಕೆ ಸರ್ಕಾರಿ ಸ್ವಾಮ್ಯದ ಅನಿಲ ವಿತರಕ ಕಂಪೆನಿಗಳು ರಿಯಾಯ್ತಿಯನ್ನು ಹಿಂದಕ್ಕೆ ಪಡೆದಿರುವ ಬಗ್ಗೆಯೂ ಈಗ ನನ್ನ ಗಮನಕ್ಕೆ ತಂದಿದ್ದೀರಿ. ದೆಹಲಿಗೆ ಬಂದಾಗ ಸಂಬಂಧಪಟ್ಟ ಅನಿಲ ವಿತರಕ ಕಂಪೆನಿಗಳ ಜೊತೆಗೆ ಸಭೆ ನಡೆಸಿ ಪರಿಹಾರ ದೊರಕಿಸಿ ಕೊಡುತ್ತೇನೆ. ಹೋಟೆಲ್‌ ಕಾರ್ಮಿಕರ ಕೌಶಲ್ಯ ತರಬೇತಿ ಬಗ್ಗೆಯೂ ಹೇಳಿದ್ದೀರಿ, ಈ ಬಗ್ಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರೊಂದಿಗೆ ಸಭೆ ಏರ್ಪಾಟು ಮಾಡುತ್ತೇನೆ.

ಬೆಂಗಳೂರಿನಲ್ಲಿ ಹೋಟೆಲ್‌ಗ‌ಳ ತ್ಯಾಜ್ಯ ವಿಲೇವಾರಿಗೆ ಇರುವ ತೊಂದರೆ ಬಗೆಹರಿಸುವಂತೆ ಬಿಬಿಎಂಪಿ ಆಯುಕ್ತರಿಗೆ ತಾಕೀತು ಮಾಡುತ್ತೇನೆ. ಹಾಗೇ ಹೋಟೆಲ್‌ ಉದ್ಯಮದ ಬೆಳವಣಿಗೆಗೆ ಪೂರಕವಾಗುವ ಪಠ್ಯಕ್ರಮ ಸಿದ್ಧಪಡಿಸಿಕೊಡಿ ಅದನ್ನು “ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಆಫ್ ಹೋಟೆಲ್‌ ಮ್ಯಾನೇಜ್‌ಮೆಂಟ್‌’ನ ಪಠ್ಯಕ್ರಮದಲ್ಲಿ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಅನಂತಕುಮಾರ್‌ ಆಶ್ವಾಸನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next