ಬೆಂಗಳೂರು: ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರಾಜು ಗುರುವಾರ ಕ್ಷೇತ್ರದ ವಿವಿಧೆಡೆ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದರು. ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಗುರುವಾರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜತೆಗೂಡಿ ರೋಡ್ ಶೋ ನಡೆಸಿದ ನಡೆಸಿದ ಅವರು, ಮತ್ತೂಮ್ಮೆ ಆಶೀರ್ವಾದ ಮಾಡುವಂತೆ ಕೋರಿದರು.
ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಮತ್ತೂಮ್ಮೆ ಆವಕಾಶ ನೀಡಿದರೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಆವರು, ಮತದಾರರು ಉತ್ತಮವಾಗಿ ಸ್ಪಂದಿಸುತ್ತಿದ್ದು ಮತ್ತೂಮ್ಮೆ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಇತರೆ ಪಕ್ಷಗಳಿಂದ ಹಲವಾರು ಮುಖಂಡರು ಬಿಜೆಪಿ ಸೇರಿದ್ದಾರೆ. ಇದು ಪಕ್ಷಕ್ಕೆ ಶಕ್ತಿ ತಂದಿದೆ ಎಂದು ಹೇಳಿದರು. ಹತ್ತು ವರ್ಷಗಳಿಂದ ಶಾಸಕನಾಗಿ ಆರೋಗ್ಯ ತಪಾಸಣೆ ಶಿಬಿರ, ಹಿರಿಯ ನಾಗರಿಕರಿಗೆ ಉಚಿತ ಕನ್ನಡಕ ವಿತರಣೆ ಸೇರಿದಂತೆ ಹಲವಾರು ಶಿಬಿರಗಳನ್ನು ಮಾಡಿದ್ದು, ಕ್ಷೇತ್ರದಲ್ಲಿದ್ದ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ, ಎಲ್ಲ ಧರ್ಮದವರು ನೆಮ್ಮದಿಯಿಂದ ಜೀವನ ನಡೆಸುವ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ. ಜನರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸಿದ್ದೇನೆ ಎಂದು ಹೇಳಿದರು. ಕ್ಷೇತ್ರದ ವ್ಯಾಪ್ತಿಗೆ ಬರುವ ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಕುಂಟೆ, ಟಿ.ದಾಸರಹಳ್ಳಿ, ಚೊಕ್ಕಸಂದ್ರ, ಪೀಣ್ಯ ಕೈಗಾರಿಕೆ ಪ್ರದೇಶ, ರಾಜಗೋಪಾಲ ನಗರ,ಹೆಗ್ಗನಹಳ್ಳಿ ವಾರ್ಡ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮುನಿರಾಜು ಪರ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.