Advertisement

ಹೆಣ್ಣು ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣದ ಭರವಸೆ

11:52 AM Sep 01, 2017 | Team Udayavani |

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಮತ್ತು ಖಾಸಗಿ ರಂಗದ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರಿಗೆ ಒಂದನೇ ತರಗತಿಯಿಂದ ಉನ್ನತ ಶಿಕ್ಷಣದ ವರೆಗೆ ಉಚಿತ ಶಿಕ್ಷಣ ಒದಗಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಸಮಿತಿಯನ್ನೂ ರಚನೆ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. 

Advertisement

ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್‌ ಕಾಲೇಜಿನ ಪ್ರಸನ್ನ ಕುಮಾರ ಬ್ಲಾಕ್‌ನಲ್ಲಿ ನಿರ್ಮಿಸಿರುವ ವಾಣಿಜ್ಯ ವಿಭಾಗದ ನೂತನ ಕಟ್ಟಡದ ಉದ್ಘಾಟನೆಯನ್ನು ಬುಧವಾರ ನೆರವೇರಿಸಿ ಮಾತನಾಡಿದ ಅವರು, “ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿನಿಯರಿಗೆ (ಹುಡುಗಿಯರಿಗೆ) ಉಚಿತ ಶಿಕ್ಷಣ ಒದಗಿಸುವ ಉದ್ದೇಶದಿಂದ ಶುಲ್ಕ ರದ್ದು ಮಾಡುವ ಬಗ್ಗೆ ಸಮಿತಿ ರಚನೆ ಮಾಡಿದ್ದೇವೆ. ಇದರಿಂದ ಸರ್ಕಾರಕ್ಕೆ ಆಗಬಹುದಾದ ಆರ್ಥಿಕ ಹೊರೆಯ ಬಗ್ಗೆ ಸಮಿತಿ ವರದಿ ನೀಡಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ,’ ಎಂದು ಹೇಳಿದರು.

“300 ಕೋಟಿ ವೆಚ್ಚದಲ್ಲಿ ಎಲ್ಲಾ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಈ ವರ್ಷ ಲ್ಯಾಪ್‌ಟಾಪ್‌ಗ್ಳನ್ನು ಉಚಿತವಾಗಿ ನೀಡಲಾಗುತ್ತದೆ. ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ. ನವೆಂಬರ್‌ 15ರೊಳಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲಿದ್ದೇವೆ. 2018-19ನೇ ಸಾಲಿನಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ,’ ಎಂದರು.

ಬೆಂಗಳೂರು ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ನ ಕಟ್ಟಡ ಕಾಮಗಾರಿ 15 ದಿನದೊಳಗೆ ಆರಂಭಿಸಲಿದ್ದೇವೆ. ಈಗಾಗಲೇ 50 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕೌಶಲಾಭಿವೃದ್ಧಿ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಕಾರ್ಮಿಕ ಇಲಾಖೆಯಿಂದ ಸ್ವಲ್ಪ ಮಟ್ಟಿನ ತೊಡಕಾಗುತ್ತಿದ್ದು, ಆದಷ್ಟು ಬೇಗ ಅದನ್ನು ಪರಿಹರಿಸಲಿದ್ದೇವೆ. ರಾಜ್ಯದ 93 ಪದವಿ ಕಾಲೇಜಿನಲ್ಲಿ ಸ್ವಂತ ಕಟ್ಟಡ ಇಲ್ಲ ಹಾಗೂ 350ಕ್ಕೂ ಅಧಿಕ ಕಾಲೇಜಿನಲ್ಲಿ ಪ್ರಾಂಶುಪಾಲರೇ ಇಲ್ಲ. ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಬೇಕಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು.

ಬೆಂವಿವಿ ಹಂಗಾಮಿ ಕುಲಪತಿ ಡಾ.ಎಚ್‌.ಎನ್‌.ರಮೇಶ್‌, ಕುಲಸಚಿವ ಡಾ.ಬಿ.ಕೆ.ರವಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಎಂ.ಮುನಿರಾಜು, ಸಿಂಡಿಕೇಟ್‌ ಸದಸ್ಯ ವಿಜಯ ಕುಮಾರ್‌ ಸಿಂಹ, ಉನ್ನತ ಶಿಕ್ಷಣ ಪರಿಷತ್‌ನ ಪ್ರೊ.ಕೋರಿ  ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Advertisement

ಪ್ರವೇಶಾತಿ ಹೆಚ್ಚಬೇಕು: ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಶೇ.98ರಷ್ಟು ದಾಖಲಾತಿ ಇದೆ. ಪ್ರೌಢ ಶಿಕ್ಷಣ, ಪದವಿ ಪೂರ್ವ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಇನ್ನೂ ಕಡಿಮೆ ಇದೆ. ಶಿಕ್ಷಣಕ್ಕೆ ಮೀಸಲಿಟ್ಟಿರುವ 30 ಸಾವಿರ ಕೋಟಿ ಬಜೆಟ್‌ನಲ್ಲಿ ಶೇ.90ರಷ್ಟು ಶಿಕ್ಷಕ, ಪ್ರಾಧ್ಯಾಪಕರ ವೇತನಕ್ಕೆ ಖರ್ಚಾಗುತ್ತದೆ. ಯುಜಿಸಿಯಿಂದ ವೇತನ ನೀಡಲಾಗುತ್ತಿಲ್ಲ. ಒಂದೆರೆಡು ಕೋಟಿ ರೂ. ನೀಡಿ ಕೈತೊಳೆದುಕೊಳ್ಳುತ್ತಿವೆ. ರಾಜ್ಯ ಸರ್ಕಾರವೇ  ಉಪನ್ಯಾಸಕರ ವೇತನ ಭರಿಸುತ್ತಿದೆ. ಉನ್ನತ ಶಿಕ್ಷಣದಲ್ಲಿ ಪ್ರವೇಶಾತಿ ಹೆಚ್ಚಬೇಕು ಎಂದು ಸಚಿವ ರಾಯರೆಡ್ಡಿ ಹೇಳಿದರು.

ಬೆಂವಿವಿ ಕುಲಪತಿ ನೇಮಕ ಪ್ರಕ್ರಿಯೆಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಲಿದ್ದೇವೆ. ನಿಯಮಾನುಸಾರವಾಗಿ, ಕಾನೂನು ಪ್ರಕಾರ ಯಾರಿಗೆ ಈ ವಿಷಯ ತಿಳಿಸಬೇಕೋ ಅದನ್ನು ಸ್ಪಷ್ಟವಾಗಿ ತಿಳಿಸಿ, ಆಡಳಿತಾತ್ಮಕ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಯನ್ನೇ ಕುಲಪತಿ ಮಾಡಲಿದ್ದೇವೆ.
-ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next