Advertisement

Congress ಪರಿವರ್ತನೆ ತಂದ ಗ್ಯಾರಂಟಿ: ಮೋದಿಯಿಂದಲೇ ನಮ್ಮ ಯೋಜನೆ ನಕಲು:ಡಿಕೆಶಿ

12:46 AM Nov 21, 2023 | Team Udayavani |

ಬೆಂಗಳೂರು: ಚುನಾವಣ ಪೂರ್ವದಲ್ಲಿ ರಾಜ್ಯದ ಜನತೆಗೆ ನಾವು ವಾಗ್ಧಾನ ಮಾಡಿದ್ದಂತೆ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲೇ 4 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ಇವು ಉಚಿತ ಯೋಜನೆಗಳಲ್ಲ. ಬದ ಲಿಗೆ ರಾಜ್ಯದ ಪ್ರತೀ ಕುಟುಂಬಕ್ಕೆ ಆರ್ಥಿಕ ಚೈತನ್ಯ ನೀಡಿ ಜನರ ಬದುಕಿನಲ್ಲಿ ಪರಿವರ್ತನೆ ತಂದಿರುವ ಯಶಸ್ವಿ ಯೋಜನೆಗಳಾಗಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಪಾದಿಸಿದ್ದಾರೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರಕ್ಕೆ 6 ತಿಂಗಳು ತುಂಬಿದ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ ಎಂದು ಡಿಕೆಶಿ ಹೇಳಿದ್ದಾರೆ. ನಮ್ಮನ್ನು ಟೀಕಿಸುತ್ತಿದ್ದ ಬಿಜೆಪಿಯವರೇ ಈಗ ನಮ್ಮ ಗ್ಯಾರಂಟಿಗಳನ್ನು ನಕಲು ಮಾಡಿದ್ದಾರೆ, ಇವುಗಳ ಯಶಸ್ವಿ ಜಾರಿ ನಿಜಕ್ಕೂ ಐತಿಹಾಸಿಕ ಸಾಧನೆ ಎಂದು ಅವರು ಬಣ್ಣಿಸಿದ್ದಾರೆ. ಸಂದರ್ಶನದಲ್ಲಿ ಸರಕಾರದ ಯೋಜನೆಗಳ ಜತೆಗೆ ಹಲವು ರಾಜಕೀಯ ವಿಷಯಗಳನ್ನು ಅವರು ಮೆಲುಕು ಹಾಕಿದ್ದಾರೆ.

l 6 ತಿಂಗಳಲ್ಲಿ ಗ್ಯಾರಂಟಿಗಳ ಜಾರಿಯ ಸಾಧನೆ ಇದೆ. ಆದರೆ ಸರಕಾರ ದಲ್ಲಿ ಸಂಭ್ರಮ ಕಾಣುತ್ತಿಲ್ಲ ಏಕೆ?
ನಾವು ಸಂಭ್ರಮ ಪಡುವುದಕ್ಕೆ ಇನ್ನೂ ಸಮಯ ಇದೆ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗಳು ರಾಜ್ಯದ ಪ್ರತೀ ಕುಟುಂಬವನ್ನು ತಲುಪಿವೆ. ವಿಶೇಷವಾಗಿ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಿದ್ದೇವೆ. ಈ ಬಾರಿ ಮೈಸೂರು ದಸರಾ ಹಾಗೂ ಹಾಸನಾಂಬೆಯ ದರ್ಶನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಡೆದಿದ್ದಾರೆ. ಇದೆಲ್ಲ ಸಂಭ್ರಮ ಅಲ್ಲವೇ? ರಾಜ್ಯದ ಜನ ಸರಕಾರ ಮತ್ತು ಪಕ್ಷದ ಮೇಲೆ ಅಪಾರ ವಿಶ್ವಾಸವಿಟ್ಟಿದ್ದಾರೆ, ಜನರ ಬದುಕಿಗೆ ಗ್ಯಾರಂಟಿಯಾಗಿ ಸರಕಾರ ನಿಂತಿದೆ ಎಂಬುದನ್ನು ತೋರಿಸಿದ್ದೇವೆ. ನಮ್ಮ ಗ್ಯಾರಂಟಿಗಳು ದೇಶಕ್ಕೆ ಮಾದರಿಯಾಗಿವೆ, ನಮ್ಮನ್ನು ಟೀಕಿಸುತ್ತಿದ್ದ ಬಿಜೆಪಿ ಆಡಳಿತವಿರುವ ರಾಜ್ಯಗಳು ಹಾಗೂ ಪ್ರಧಾನಿಯವರೇ ಹೊಸದಾದ ಏನನ್ನೂ ಹೇಳಲು ಸಾಧ್ಯವಾಗದೆ ನಮ್ಮ ಗ್ಯಾರಂಟಿಗಳನ್ನು ನಕಲು ಮಾಡಿದ್ದಾರೆ. ನಮ್ಮ ಗ್ಯಾರಂಟಿಗಳಿಂದಾಗಿ ದೇಶ ಅಥವಾ ರಾಜ್ಯ ದಿವಾಳಿಯಾಗಿಲ್ಲ. ಬೆಲೆ ಏರಿಕೆಯಿಂದಾಗಿ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ರೈತರ ಆದಾಯ ದ್ವಿಗುಣಗೊಳ್ಳದೆ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸಾಮಾನ್ಯರ ಬದುಕಿನಲ್ಲಿ ಬದಲಾವಣೆ ತರಬೇಕೆಂದು ತೀರ್ಮಾನಿಸಿ ಅವರಿಗೆ ನೆರವಾಗಿದ್ದೇವೆ.

ಗ್ಯಾರಂಟಿಗಳ ಜಾರಿಗೆ ಸೀಮಿತವಾದ ಸರಕಾರ ಇತರ ಅಭಿವೃದ್ಧಿ ಕೆಲಸಗಳನ್ನು ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪವಿದೆಯಲ್ಲ?
ಬಜೆಟ್‌ ಗಾತ್ರ ಕಡಿಮೆಗೊಳಿಸದೆ 5 ಗ್ಯಾರಂಟಿ ಯೋಜನೆಗಳ ಪೈಕಿ ನಾಲ್ಕನ್ನು ಜಾರಿಗೊಳಿಸುವ ತೀರ್ಮಾನವನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಕೈಗೊಂಡೆವು. ಬಿಜೆಪಿಯವರು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು 7 ಕೆ.ಜಿ.ಯಿಂದ 5 ಕೆ.ಜಿ.ಗೆ ಕಡಿತಗೊಳಿಸಿದ್ದರು. ನಾವು ಈಗ 5 ಕೆ.ಜಿ.ಯಿಂದ 10 ಕೆ.ಜಿ.ಗೆ ವಿಸ್ತರಿಸಿ ಸದ್ಯಕ್ಕೆ 5 ಕೆ.ಜಿ. ಅಕ್ಕಿ ಹಾಗೂ ಉಳಿದ 5 ಕೆ.ಜಿ. ಅಕ್ಕಿ ಬದಲಿಗೆ ನಗದು ಕೊಡುತ್ತಿದ್ದೇವೆ. ಮುಂದೆ ಅಕ್ಕಿ ವಿತರಣೆಗೆ ಗಂಭೀರ ಪ್ರಯತ್ನಗಳು ನಡೆದಿವೆ. ಇವುಗಳ ಜತೆಗೆ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಮಂಡಿಸಿದ್ದ ಬಜೆಟ್‌ನಲ್ಲಿದ್ದ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಕೈಬಿಟ್ಟಿಲ್ಲ. ಅವುಗಳ ಜತೆಗೆ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿಗೆ ಹಣ ಕೊಡುತ್ತಿದ್ದೇವೆ. ಸಚಿವರು, ಶಾಸಕರಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬೇಕೆಂಬ ಬೇಡಿಕೆ ಇರುವುದು ನಿಜ. ಗ್ಯಾರಂಟಿ ಯೋಜನೆಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳೋಣವೆಂದು ಹೇಳಿದ್ದೇವೆ. ರಾಜ್ಯದ 216 ತಾಲೂಕುಗಳಲ್ಲಿ ಬರವಿದ್ದರೂ ಕೇಂದ್ರ ಸರಕಾರದಿಂದ ಹಣ ಬಿಡುಗಡೆಗೆ ಕಾಯದೆ ರಾಜ್ಯ ಸರಕಾರದಿಂದಲೇ ಹಣ ಬಿಡುಗಡೆ ಮಾಡಿದ್ದೇವೆ.

ಬರ ಪರಿಹಾರದ ವಿಚಾರದಲ್ಲಿ ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಅನಿಸುತ್ತಿಲ್ಲವೇ?
ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳ ಸೃಜನೆಯನ್ನು 100ರಿಂದ 150 ದಿನಗಳಿಗೆ ಹೆಚ್ಚಿಸಬೇಕೆಂದು ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಬರ ಪರಿಹಾರವನ್ನು ಕೂಡ ಬಿಡುಗಡೆ ಮಾಡಿಲ್ಲ. ಭದ್ರಾ ನೀರಾವರಿ ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ.ಗಳನ್ನು ಘೋಷಿಸಿದ್ದರೂ ಇದುವರೆಗೂ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಎತ್ತಿನ ಹೊಳೆ ಸಂಪೂರ್ಣ ಕುಡಿ ಯುವ ನೀರಿನ ಯೋಜನೆಯಾಗಿದ್ದು, 9 ಸಾವಿರ ಕೋಟಿ ರೂ.ಗಳನ್ನು ನೀಡಬೇಕೆಂದು ಕೇಳಿದ್ದಕ್ಕೆ ಸಾಧ್ಯವೇ ಇಲ್ಲವೆಂದು ತಿರಸ್ಕರಿ ಸಿದ್ದಾರೆ. ಪಂಚ ರಾಜ್ಯಗಳ ಚುನಾವಣೆ ಮುಗಿದ ಬಳಿಕ ನಾನೇ ಪ್ರಧಾನಿ ಅವರನ್ನು ಖುದ್ದಾಗಿ ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಸಮಯ ಕೋರುವೆ.

Advertisement

ಮೇಕೆದಾಟು ಯೋಜನೆ ಜಾರಿಯಾಗುವ ಸಾಧ್ಯತೆಗಳಿವೆಯೇ?
ಖಂಡಿತವಾಗಿಯೂ ನನಗೆ ಈ ವಿಷಯದಲ್ಲಿ ಸಂಪೂರ್ಣ ವಿಶ್ವಾಸವಿದೆ. ಕಾವೇರಿ ನದಿ ನೀರು ವಿವಾದದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಸಲಹೆ ನಮಗೆ ನೆರವಾಗುತ್ತದೆ. ಒಂದು ರೀತಿ ಈ ವಿಷಯ “ರೀ ಒಪನ್‌’ ಆದಂತೆ ಅಗಿದೆ. ಉಭಯ ರಾಜ್ಯಗಳು ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ಚರ್ಚಿಸುವಂತೆ ಸುಪ್ರೀಂ ಕೋರ್ಟ್‌ ಹೇಳಿರುವುದೇ ಒಂದು ರೀತಿಯ ವಿಜಯ. ಹೀಗಾಗಿ ನಮಗೆ ಕೋರ್ಟ್‌ನಿಂದ ನ್ಯಾಯ ಸಿಗುವ ವಿಶ್ವಾಸವಿದೆ. ಈ ಮಧ್ಯೆ ಯೋಜನೆ ಜಾರಿಗೆ ಅಗತ್ಯವಿರುವ ಅರಣ್ಯ ಹಾಗೂ ಕಂದಾಯ ಇಲಾಖೆಗಳ ಭೂಮಿ ಗುರುತಿಸುವುದರ ಸಹಿತ ಎಲ್ಲ ಸಿದ್ಧತೆಗಳು ನಡೆದಿವೆ.

ಅಧಿಕಾರ ಹಂಚಿಕೆ ಸೂತ್ರ ಏನಾದರೂ ಆಗಿದೆಯೇ?
ಕಾಂಗ್ರೆಸ್‌ ಹೈಕಮಾಂಡ್‌ ಯಾವತ್ತೂ ನನ್ನನ್ನು ಬಿಟ್ಟುಕೊಟ್ಟಿಲ್ಲ. ನಾನು ಯಾವ ಅಧಿಕಾರವನ್ನೂ ಕೇಳಿಲ್ಲ. ನಾನಿದ್ದೇನೆ, ಹೈಕಮಾಂಡ್‌ ಇದೆ, ಶಾಸಕಾಂಗ ಪಕ್ಷದ ನಾಯಕರು ಇದ್ದಾರೆ. ರಾಜ್ಯದ ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಶಕ್ತಿ ಕೊಟ್ಟಿದ್ದಾರೆ, ಅದಕ್ಕೆ ತೃಪ್ತಿ ಇದೆ. ಅದನ್ನು ಉಳಿಸಿಕೊಂಡು ಹೋಗುವುದೇ ನಮ್ಮ ಆದ್ಯತೆ. ನಾನು ಯಾವುದಕ್ಕೂ ಪೈಪೋಟಿ ಮಾಡುತ್ತಿಲ್ಲ. ಮುಖ್ಯಮಂತ್ರಿ, ಸಚಿವರು, ಶಾಸಕರ ಕೈ ಬಲಪಡಿಸುವುದೇ ನನ್ನ ಆದ್ಯತೆ. 5 ವರ್ಷ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ರಾಜ್ಯದ ಜನತೆಗೆ ನೀಡಿರುವ ವಾಗ್ಧಾನ ಈಡೇರಿಸುವ ಸಂಕಲ್ಪ ಮಾಡಿದ್ದೇವೆ.

ಹಿಂದಿನ ಬಿಜೆಪಿ ಸರಕಾರದ ವಿರುದ್ಧ ನೀವು ಬಳಸಿದ ಅಸ್ತ್ರಗಳನ್ನೇ ಈಗ ಬಿಜೆಪಿಯವರು ನಿಮ್ಮ ಸರಕಾರದ ವಿರುದ್ಧ ಬಳಸುತ್ತಿದ್ದಾರೆ ಅನಿಸುತ್ತಿಲ್ಲವೇ?
ಬಿಜೆಪಿಯನ್ನು ಜನ ಸೋಲಿಸಿ ಶಿಕ್ಷೆ ಕೊಟ್ಟಿದ್ದಾರೆ, ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜನರ ಅಭಿಪ್ರಾಯವನ್ನು ಸ್ವೀಕಾರ ಮಾಡುತ್ತಿಲ್ಲ. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಅವರಲ್ಲಿ ಏನೇನೋ ಲೆಕ್ಕಾಚಾರಗಳಿದ್ದವು, ಯಾವುದೂ ಆಗಲಿಲ್ಲ. ಅವರಿಗೆ ಕಾಂಗ್ರೆಸ್‌ ಅಧಿಕಾರದಲ್ಲಿರುವುದನ್ನು ತಡೆದುಕೊಳ್ಳಲು ಆಗುತ್ತಿಲ್ಲ.

ವಿಪಕ್ಷ ನಾಯಕರಾಗಿ ನೇಮಕಗೊಂಡಿರುವ ಆರ್‌. ಅಶೋಕ್‌ ಅವರು ಸರಕಾರವನ್ನು ಕಿತ್ತು ಹಾಕುವುದಾಗಿ ಘೋಷಣೆ ಮಾಡಿದ್ದಾರಲ್ಲಾ?
ಆರು ತಿಂಗಳ ಬಳಿಕ ಅಶೋಕ್‌ ವಿಪಕ್ಷ ನಾಯಕರಾಗಿ ನೇಮಕಗೊಂಡಿದ್ದಾರೆ, ನಮಗೂ ಖುಷಿ ಆಗಿದೆ. ಅವರು ಹಿರಿಯ ನಾಯಕರು, ಅನುಭವಿ. ಸರಕಾರ ತಪ್ಪು ಮಾಡಿದ್ದಲ್ಲಿ ತಿದ್ದುವ ಇಲ್ಲವೇ ಆಡಳಿತದಲ್ಲಿ ನೀತಿ ನಿರ್ಧಾರಗಳು ಸರಿ ಇಲ್ಲದೆ ಇದ್ದಾಗ ಬುದ್ಧಿಮಾತು ಹೇಳುವ ಕೆಲಸ ಮಾಡುತ್ತಾರೆಂದು ನಿರೀಕ್ಷಿಸಿದ್ದೆವು. ಆದರೆ ನೇಮಕ ಅಗುತ್ತಿದ್ದಂತೆ ಸರಕಾರ ಕಿತ್ತು ಹಾಕುತ್ತೇನೆಂದು ಹೇಳಿದ್ದಾರೆ. ಅದೇನು ಕಡ್ಲೆಕಾಯಿಯೇ ಅಥವಾ ಹುರುಳಿ ಕಾಯಿಯೇ?

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಅಶೋಕ್‌ ಜಾತಿ ಸಮೀಕರಣವನ್ನು ಹೇಗೆ ಎದುರಿಸುವಿರಿ?
ಇಲ್ಲಿ ಜಾತಿಗಿಂತ ನೀತಿ ಮುಖ್ಯ. ಹುಟ್ಟಿದ ಎಲ್ಲ ಗಂಡು ಕರುಗಳು ಬಸವ ಆಗುವುದಿಲ್ಲ. ಅವರಿಗೆ ದಲಿತರು, ಅಲ್ಪಸಂಖ್ಯಾಕರು, ಹಿಂದುಳಿದ ವರ್ಗಗಳ ಮೇಲೆ ನಂಬಿಕೆಯೇ ಇಲ್ಲ. ಹಿಂದುಳಿದ ವರ್ಗಗಳಿಗೆ ಸೇರಿದ ಯಾರನ್ನಾದರೂ ಶಾಸಕಾಂಗ ಪಕ್ಷದ ನಾಯಕನನ್ನು ಮಾಡಿದ್ದಾರಾ? ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದರು. ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ನಾಯಕತ್ವದಲ್ಲಿ ಜನ ನಂಬಿಕೆ ಇಡಬೇಕು. ದೇವೇಗೌಡರು, ಎಸ್‌.ಎಂ. ಕೃಷ್ಣ, ಸಿದ್ದರಾಮಯ್ಯ ಅವರ ನಾಯಕತ್ವವನ್ನು ನಂಬಿ ಜನ ಮತ ಹಾಕಿದರು. ನಾವೆಲ್ಲ ಸಾಮೂಹಿಕ ನಾಯಕತ್ವದಡಿ ಹೋರಾಡಿದ್ದರಿಂದ ಪ್ರತಿಫ‌ಲ ದೊರೆಯಿತು. ವಿಜಯೇಂದ್ರ ಹಾಗೂ ಅಶೋಕ್‌ ಅವರ ನಾಯಕತ್ವವನ್ನು ರಾಜ್ಯದ ಜನ ಒಪ್ಪುವುದಿಲ್ಲ.

-ಎಂ.ಎನ್‌. ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next