Advertisement

Guarantee ಬಡವರ್ಗವನ್ನು ಆರ್ಥಿಕವಾಗಿ ಸದೃಢಗೊಳಿಸಲು ಪೂರಕ: ಸಚಿವ ಮಧು

05:32 PM Feb 09, 2024 | Vishnudas Patil |

ಸಾಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರ್ಗವನ್ನು ಆರ್ಥಿಕವಾಗಿ ಸದೃಢಗೊಳಿಸಲು ಅತ್ಯಂತ ಪೂರಕವಾದ ಯೋಜನೆಗಳಾಗಿವೆ ಎಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ನಗರಸಭೆ ವತಿಯಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುತ್ತಿರುವ ಅನುದಾನ ತೀರ ಕಡಿಮೆಯಾಗಿದೆ. ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಬಡವರ ಕಲ್ಯಾಣಕ್ಕೆ ಹಾಕಿಕೊಂಡಿರುವ ಯಾವ ಯೋಜನೆಗಳು ಅನುದಾನದ ಲೋಪ ಆಗದಂತೆ ನೋಡಿಕೊಳ್ಳುತ್ತಿದೆ. ಶಿಕ್ಷಣ ಇಲಾಖೆ ಮೂಲಕ ಈಗಾಗಲೇ ವಾರಕ್ಕೆ ಎರಡು ದಿನ ಮೊಟ್ಟೆ ಕೊಡಲಾಗುತ್ತಿದೆ. ಮುಂದಿನ ವಾರ ಹದಿನೈದು ದಿನದೊಳಗೆ ರಾಜ್ಯದ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿಮಾಲ್ಟ್ ಕೊಡಲಾಗುತ್ತಿದೆ. ಕೇಂದ್ರ ಸರ್ಕಾರ ಶೈಕ್ಷಣಿಕವಾಗಿ ಯೋಜನೆ ಜಾರಿಗೆ ತರುತ್ತೇವೆ ಎಂದು ಮೋಸ ಮಾಡುತ್ತಿತ್ತು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಿನ ಐದು ವರ್ಷಗಳೂ ಎಲ್ಲ ಐದು ಗ್ಯಾರಂಟಿಯನ್ನು ಜನರಿಗೆ ನೀಡುತ್ತದೆ. ಯಾವ ಸರ್ಕಾರ ನಿಮ್ಮ ಪರವಾಗಿ ಇರುತ್ತದೆಯೋ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಜನರ ಮೇಲೆ ಇದೆ. ಮುಂದಿನ ದಿನಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದಾಗ ನಮ್ಮ ಸರ್ಕಾರವನ್ನು ಮರೆಯಬೇಡಿ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದೆ. ಸರ್ಕಾರದ ಐದು ಗ್ಯಾರಂಟಿ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೇಸ್ ಪಕ್ಷ ಐದು ಗ್ಯಾರಂಟಿ ಘೋಷಣೆ ಮಾಡಿ, ಪ್ರತಿಮನೆಗೆ ಗ್ಯಾರಂಟಿ ಕಾರ್ಡ್ ನೀಡಿತ್ತು. ಪಕ್ಷ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಐದೂ ಗ್ಯಾರಂಟಿಯನ್ನು ಅನುಷ್ಟಾನಕ್ಕೆ ತರುವ ಮೂಲಕ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ ಎಂದರು.

Advertisement

ಗ್ಯಾರಂಟಿ ಕಾರ್ಡ್ ಬಗ್ಗೆ ವಿರೋಧ ಪಕ್ಷಗಳು ಆರಂಭದಲ್ಲಿ ಟೀಕೆ ಮಾಡಲು ಪ್ರಾರಂಭಿಸಿತ್ತು. ಟೀಕೆ ಮಾಡುವ ವಿಪಕ್ಷದವರಿಗೆ ಫಲಾನುಭವಿಗಳೇ ತಕ್ಕ ಉತ್ತರ ನೀಡುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲ ಜಾತಿಧರ್ಮಗಳಿಗೂ ಸಮಾನವಾಗಿ ಗ್ಯಾರಂಟಿ ಯೋಜನೆ ತಲುಪುತ್ತಿದೆ. ಸರ್ಕಾರ ಗ್ಯಾರಂಟಿ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಸಮಿತಿಯನ್ನು ಸಹ ಮಾಡಲು ಮುಂದಾಗಿದೆ. ಯಾರೂ ಯೋಜನೆಯಿಂದ ವಂಚಿತರಾಗಬಾರದು. ಐದೂ ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ನಡೆಯಬೇಕು ಎಂದರು.

ಐದು ಲಕ್ಷ ಪರಿಹಾರದ ಭರವಸೆ: ಜಿಲ್ಲೆಯಲ್ಲಿ ಶಂಕಿತ ಮಂಗನ ಕಾಯಿಲೆಯಿಂದ ಇಬ್ಬರು ಮೃತಪಟ್ಟಿದ್ದಾರೆ. ಕೆಎಫ್‌ಡಿಯಿಂದ ಮೃತಪಟ್ಟರೆ ಎರಡು ಲಕ್ಷ ರೂ. ಪರಿಹಾರ ಕೊಡಲಾಗುತ್ತಿತ್ತು. ಅದನ್ನು ಐದು ಲಕ್ಷಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದು ಬೇಳೂರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ಪರಮೇಶ್ವರಪ್ಪ, ವೆಂಕಟೇಶ್, ಶ್ರೀಧರ ಮೂರ್ತಿ, ಪರಶುರಾಮಪ್ಪ, ಉಮಾವತಿ, ನಾಗೇಶ್ ಬ್ಯಾಲಾಳ್ ಇನ್ನಿತರರು ಹಾಜರಿದ್ದರು. ಚಂದ್ರಶೇಖರ ನಾಯ್ಕ್ ಸ್ವಾಗತಿಸಿದರು. ಶ್ರಾವ್ಯ ಸಾಗರ್ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next