ಬೆಂಗಳೂರು: ಬಡವರ ಗ್ಯಾರಂಟಿ ಮತ್ತು ಶ್ರೀಮಂತರ ಸಾಲಮನ್ನಾ ಇವೆರಡೂ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಬುಧವಾರ ಮೇಲ್ಮನೆ ಸಾಕ್ಷಿಯಾಯಿತು.
“ಶಕ್ತಿ” ಯೋಜನೆ ಬಗ್ಗೆ ಬಿಜೆಪಿಯ ಭಾರತಿ ಶೆಟ್ಟಿ ಮಾತನಾಡುವ ವೇಳೆ ನೀಡಿದ “ಪುಕ್ಸಟ್ಟೆ ಸ್ಕೀಂ” ಎಂಬ ಹೇಳಿಕೆಯು ವಾಗ್ವಾದದ ಕಿಡಿಹೊತ್ತಿಸಿತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, “ಹೊಟ್ಟೆ ತುಂಬಿದವರು ಹಸಿದ ಹೊಟ್ಟೆಗಳ ಬಗ್ಗೆ ಹೀಗೆ ಅಸಡ್ಡೆಯಿಂದ ಮಾತನಾಡುವುದು ಹೊಸದಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದಿದೆ’ ಎಂದು ಹೇಳಿದರು.
ಆಗ ಭಾರತಿ ಶೆಟ್ಟಿ, “ಹಸಿದವರು, ಬಡವರ ಬಗ್ಗೆ ನಾನು ಹೇಳುತ್ತಿಲ್ಲ” ಎಂದು ಸಮಜಾಯಿಷಿ ನೀಡಲು ಮುಂದಾದರು. ತಿರುಗೇಟು ನೀಡಿದ ಸಚಿವರು, “ಶ್ರೀಮಂತರಿಗೆ ಲಕ್ಷ ಕೋಟಿ ಸಾಲಗಳನ್ನು ಕೊಟ್ಟಿದ್ದೀರಿ. ಅದು ಬಿಟ್ಟಿ ಅಲ್ಲವೇ? ಶ್ರೀಮಂತರ ಸಾವಿರಾರು ಕೋಟಿ ರೂ. ಸಾಲಮನ್ನಾ ಮಾಡುತ್ತೀರಲ್ಲಾ ಅದು ಪುಕ್ಸಟ್ಟೆ ಅಲ್ಲವೇ? ಶ್ರೀಮಂತರ ಮೇಲಿನ ಆದಾಯ ತೆರಿಗೆ ಪ್ರಮಾಣವನ್ನು ಶೇ. 22ಕ್ಕೆ ಇಳಿಸುತ್ತೀರಲ್ಲಾ. ಆ ವರ್ಗದ ಮೇಲೆ ಯಾಕೆ ಅಷ್ಟೊಂದು ಮಮಕಾರ? ಬಡವರ ಬಗ್ಗೆ ಯಾಕೀ ಅಸಡ್ಡೆ’ ಎಂದು ತರಾಟೆಗೆ ತೆಗೆದುಕೊಂಡರು.
ಇದರಿಂದ ಕೆರಳಿದ ಬಿಜೆಪಿಯ ಭಾರತಿ ಶೆಟ್ಟಿ, ನವೀನ್ ಕುಮಾರ್, ರವಿಕುಮಾರ್, “ಶ್ರೀಮಂತರಿಗೆ ಸಾಲ ಕೊಟ್ಟಿದ್ದು ಯಾರು? ಅದನ್ನು ಮನ್ನಾ ಮಾಡಿದ್ದು ಯಾರು? ಸಾಲ ಪಡೆದವರನ್ನು ಓಡಿಹೋಗಲು ಬಿಟ್ಟವರು ಯಾರು ಎಂದು ಪ್ರಶ್ನೆಗಳ ಸುರಿಮಳೆಗರೆದರು.
ಆಗ ಸಚಿವರು, “ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದರೆ, ಆಡಳಿತ ಪಕ್ಷ ಉತ್ತರವನ್ನೇ ಕೊಡುವುದಿಲ್ಲ ಏನು ಮಾಡುವುದು?’ ಎಂದು ಕೇಳಿದರು. ಈ ವೇಳೆ ರವಿಕುಮಾರ್ ಮಾತನಾಡಿ, “ಯಾವ ಶ್ರೀಮಂತರ ಸಾಲಮನ್ನಾ ಮಾಡಲಾಗಿದೆ? ಯಾರಿಗೆ ಎಷ್ಟು ಸಾಲ ಕೊಟ್ಟಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ವೇತಪತ್ರ ಹೊರಡಿಸಲಿ’ ಎಂದು ಸವಾಲು ಹಾಕಿದರು. ಮಧ್ಯಪ್ರವೇಶಿಸಿದ ಸಭಾಪತಿಗಳು, “ಈ ವಿಚಾರ ಸಂಸತ್ತಿನಲ್ಲಿ ಚರ್ಚೆ ಆಗಬೇಕಿದ್ದು, ಚರ್ಚೆಯನ್ನು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸೀಮಿತಗೊಳಿಸಿ’ ಎಂದು ವಾಗ್ವಾದಕ್ಕೆ ತೆರೆ ಎಳೆದರು.