ಯಾದಗಿರಿ: ಈಚೆಗೆ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯದ ವೇಳೆ ಸಾರ್ವಜನಿಕರ ಸಮಸ್ಯೆಗಳಿಗೆ ತೀವ್ರಗತಿಯಲ್ಲಿ ಸ್ಪಂದಿಸಿದ್ದು, ಸಮಸ್ಯೆಗಳು ತ್ವರಿತವಾಗಿ ಪರಿಹಾರವಾಗಲಿವೆ ಎಂಬ ಭರವಸೆ ಜನರಲ್ಲಿ ಮೂಡಿಸಿದೆ. ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ವಾಸ್ತವ್ಯ ಹೂಡಿದ್ದ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಸಾರ್ವಜನಿಕರು 150 ಅರ್ಜಿಗಳನ್ನು ಸಲ್ಲಿಸಿದ್ದರು. ಇದರಲ್ಲಿ ಸ್ಥಳದಲ್ಲಿಯೇ 135 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
ಪ್ರಮುಖವಾಗಿ ಸ್ಮಶಾನದ ಸಮಸ್ಯೆಗೆ ಪರಿಹಾರ ಹುಡುಕಿರುವ ಜಿಲ್ಲಾಡಳಿತ 2 ಎಕರೆ ಜಮೀನನ್ನು ಗುರುತಿಸಿದ್ದಲ್ಲೇ ಜಿಲ್ಲಾ ಧಿಕಾರಿಗಳು ಅಭಿವೃದ್ಧಿಗೆ 5 ಲಕ್ಷ ರೂ. ಮಂಜೂರು ಮಾಡಿದ್ದಾರೆ. ವಿವಿಧ ಇಲಾಖೆಗೆ ಸಂಬಂಧಿ ಸಿ ಸಮಸ್ಯೆ ಬಗೆಹರಿಯದ ಅರ್ಜಿಗಳನ್ನು 1 ತಿಂಗಳಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಗುರುಮಠಕಲ್ ತಾಲೂಕಿನ ಮಿನಾಸಪುರದಲ್ಲಿ ಪ್ರಮುಖವಾಗಿ ಮಳೆಗಾಲದಲ್ಲಿ ತೊಂದರೆಯಾಗುತ್ತಿದ್ದು, ರಸ್ತೆಗೆ ಬ್ರಿಡ್ಜ್ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಈಗಾಗಲೇ ತಹಶೀಲ್ದಾರರು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ವಾಸ್ತವ್ಯದ ವೇಳೆ ಪಿಂಚಣಿ ಸೇರಿದಂತೆ ಕಂದಾಯ ದಾಖಲೆ ತಿದ್ದುಪಡಿ ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಹರಿಸಲು ಕ್ರಮವಹಿಸಲಾಗಿದೆ. ಶಹಾಪುರ ತಾಲೂಕಿನ ಶಿರವಾಳದಲ್ಲಿ ರಸ್ತೆ, ಚರಂಡಿ, ನೀರಿನ ಸಮಸ್ಯೆಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದ್ದು, ಪಿಂಚಣಿಗೆ ಸಂಬಂಧಿಸಿದಂತೆ ಸ್ಥಳದಲ್ಲಿಯೇ ಮಂಜೂರಾತಿ ನೀಡಲಾಗಿದೆ. ಯಾದಗಿರಿ ತಾಲೂಕಿನ ಲಿಂಗೇರಿಯಲ್ಲಿ ಪ್ರಮುಖವಾಗಿ ರಸ್ತೆ ನಿರ್ಮಾಣಕ್ಕೆ ಬೇಡಿಕೆಯಿದ್ದು ಪಿಂಚಣಿ, ಪಡಿತರ ಚೀಟಿ, ಪೋಡಿ ಸೇರಿದಂತೆ ಇತರೆ ಕಂದಾಯ ದಾಖಲೆ ತಿದ್ದುಪಡಿಗೆ ಅಗತ್ಯ ಕ್ರಮವಹಿಸಲಾಗಿದೆ.
ಹುಣಸಗಿ ತಾಲೂಕಿನ ಹಗರಟಗಿಯಲ್ಲಿ ವಸತಿ ನಿಲಯ, ಪ್ರೌಢಶಾಲೆ, ಚರಂಡಿ ವ್ಯವಸ್ಥೆ ಹಾಗೂ ಜಮೀನು ಸರ್ವೇಕಾರ್ಯ ತ್ವರಿತಗೊಳಿಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇನ್ನು ವಡಗೇರಾ ತಾಲೂಕಿನ ಬೆಂಡೆಬೆಂಬಳಿಯಲ್ಲಿ ಪ್ರಮುಖವಾಗಿ ಸಾರಿಗೆ ವ್ಯವಸ್ಥೆ ಕುರಿತು ಸಾರ್ವಜನಿಕರಿಂದ ದೂರು ಬಂದಿದ್ದು, ಸಂಬಂಧಿಸಿದ ಇಲಾಖೆಗೆ ತಹಶೀಲ್ದಾರರು ಪತ್ರ ಬರೆದಿದ್ದು, ಪಿಂಚಣಿ ಮಂಜೂರಾತಿ ಆದೇಶ ವಿತರಿಸಲಾಗಿದೆ. ಪಡಿತರ ಚೀಟಿ, ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗಿದ್ದು, ಪಹಣಿ ತಿದ್ದುಪಡಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಗಿದೆ.