Advertisement

Govt “ಗ್ಯಾರಂಟಿ’ಯಿಂದ ಬೊಕ್ಕಸ ಖಾಲಿ: ವಿಶೇಶ್ವರ ಹೆಗಡೆ ಕಾಗೇರಿ

06:45 PM Nov 07, 2023 | Team Udayavani |

ನಾಯಕನಹಟ್ಟಿ:ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಿದೆ. ಹೀಗಾಗಿ ಅಭಿವೃದ್ಧಿ ಕೆಲಸಕ್ಕೆ ಹಣವಿಲ್ಲದೇ ಒದ್ದಾಡುತ್ತಿದೆ ಎಂದು ಮಾಜಿ ಸ್ಪೀಕರ್‌ ವಿಶೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

Advertisement

ಮಂಗಳವಾರ ಬಿಜೆಪಿ ಬರ ಅಧ್ಯಯನ ತಂಡ ಪಟ್ಟಣದ ಚಿಕ್ಕಕೆರೆ ವೀಕ್ಷಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಂದ ಹಣವೇ ಇಲ್ಲ. ಹೀಗಾಗಿ ಬೆಳೆ ಮತ್ತು ಬರ ಪರಿಹಾರಕ್ಕೆ ಯಾವುದೇ ಯೋಜನೆ ರೂಪಿಸಿಲ್ಲ. ಚುನಾವಣೆಯಲ್ಲಿ ಕೊಟ್ಟ ಗ್ಯಾರಂಟಿಗಳನ್ನು ಸಹ ಕಾಂಗ್ರೆಸ್‌ ಪೂರ್ಣಗೊಳಿಸಿಲ್ಲ. ಅಧಿಕಾರ ಹಂಚಿಕೆಯಲ್ಲಿ ಕಾಲ ಕಳೆಯುತ್ತಿದೆ. ಬರ ನಿರ್ವಹಣೆ ಬಗ್ಗೆ ಸರ್ಕಾರದಲ್ಲಿ ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ. ಹೀಗಾಗಿ ಬರದ ಕಡೆಗೆ ರಾಜ್ಯ ಸರ್ಕಾರ ಗಮನ ಹರಿಸುವಂತೆ ಮಾಡಲು ಬಿಜೆಪಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದೆ.

ಪ್ರವಾಸ ಆರಂಭವಾಗುತ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದ್ದು, ಜಿಲ್ಲಾ ಪ್ರವಾಸ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸಚಿವರಿಗೆ ಸೂಚಿಸಿದ್ದಾರೆ. ಸರ್ಕಾರದ ಬಳಿ ಗ್ಯಾರಂಟಿಗಳಿಗೆ ಹಣವಿದ್ದರೆ ಬೆಳೆ ಪರಿಹಾರಕ್ಕೆ ಹಣ ನೀಡಲಿ. ಗ್ಯಾರಂಟಿಗೆ ಕೊಟ್ಟ ಮಹತ್ವವನ್ನು ಬೆಳೆ ಪರಿಹಾರಕ್ಕೂ ನೀಡಬೇಕು. ಕಾಟಾಚಾರಕ್ಕೆ ಡಿಸಿಗಳಿಗೆ ಕೆಲವು ಕೋಟಿಗಳನ್ನು ನೀಡಿ ಕೈ ತೊಳೆದುಕೊಂಡಿದೆ ಎಂದರು.

ರಾಜಕೀಯದಲ್ಲೇ ಮುಳುಗಿರುವ ಸರ್ಕಾರ ರಾಜ್ಯದ ಸಮಸ್ಯೆಗಳ ಬಗ್ಗೆ ಗಂಭೀರವಾದ ಚಿಂತನೆ ನಡೆಸುತ್ತಿಲ್ಲ. ಕಾವೇರಿ ವಿಷಯ, ವಿದ್ಯುತ್‌ ಕೊರತೆ, ಬರ ಎದುರಿಸುವ ಪ್ರಯತ್ನ, ಕಾನೂನು ಸುವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆಗಳಿಗೆ ಧನಾತ್ಮಕ ಪರಿಹಾರ ಕಂಡು ಹಿಡಿಯುತ್ತಿಲ್ಲ. ಇದಕ್ಕೆ ಬದಲಾಗಿ ಎಲ್ಲ ಸಮಸ್ಯೆಗಳಿಗೂ ಕೇಂದ್ರದ ಮೇಲೆ ಆರೋಪಗಳನ್ನು ಹೊರಿಸುವ ಕಾರ್ಯದಲ್ಲಿ ತೊಡಗಿದೆ. ಎಲ್ಲ ಸಮಸ್ಯೆಗಳಿಗೆ ಕೇಂದ್ರದ ಅವಲಂಬನೆ ಸರಿಯಲ್ಲ. ರಾಜ್ಯ ಸರ್ಕಾರ ತನ್ನ ಶಕ್ತಿಯ ಆಧಾರದ ಮೇಲೆ ಮುನ್ನಡೆಸುವುದಕ್ಕೆ ಸಾಧ್ಯವಾಗಿಲ್ಲ ಎಂಬುದನ್ನು ಸಮಸ್ಯೆಗಳು ಸೂಚಿಸುತ್ತಿವೆ ಎಂದರು.

ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಮಾಜಿ ಶಾಸಕರಾದ ಜಿ.ಎಚ್‌.ತಿಪ್ಪಾರೆಡ್ಡಿ, ಎಸ್‌.ತಿಪ್ಪೇಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಈ. ರಾಮರೆಡ್ಡಿ, ಮುಖಂಡರಾದ ಎಂ.ವೈ.ಟಿ.ಸ್ವಾಮಿ, ಪಿ.ಶಿವಣ್ಣ, ಪಪಂ ಸದಸ್ಯ ಮಹಾಂತಣ್ಣ, ಪರಮೇಶ್ವರಪ್ಪ, ಶಾರದಮ್ಮ ಇದ್ದರು. ಬರ ಅಧ್ಯಯನ ತಂಡ ಸಮೀಪದ ನಲಗೇತನಹಟ್ಟಿ ಗ್ರಾಮದಲ್ಲಿ ಶೇಂಗಾ, ಸೂರ್ಯಕಾಂತಿ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next