ಹುಣಸೂರು: ನೂತನವಾಗಿ ನಿರ್ಮಿಸಿರುವ ಜಿಟಿಟಿಸಿ ಕೇಂದ್ರ ಉದ್ಘಾಟನಾ ಸಮಾರಂಭವನ್ನು ಶಾಸಕ ಎಚ್.ಪಿ.ಮಂಜುನಾಥ್ ಅವರು ಬಹಿಷ್ಕರಿಸಿ ಹೊರ ನಡೆದ ಘಟನೆ ಗುರುವಾರ ನಡೆದಿದೆ.
ಸಮಾರಂಭ ಮಧ್ಯಾಹ್ನ 3 ಗಂಟೆಗೆ ಆಯೋಜನೆಯಾಗಿತ್ತು, ನಿಗದಿತ ಸಮಯಕ್ಕೆ ಬಂದ ಶಾಸಕ ಮಂಜುನಾಥ್ 4.15 ರವರೆಗೆ ಕಾದರೂ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ್ ಬಂದಿರಲಿಲ್ಲ.
ಹುಣಸೂರಿನ ಮಹಿಳಾ ಕಾಲೇಜಿನಲ್ಲಿ 5 ಕೋಟಿ ವೆಚ್ಚದ ಕಟ್ಟಡದ ಉದ್ಘಾಟನೆ ಸರಳವಾಗಿ ನಡೆಸಲು ತೀರ್ಮಾನಿಸಲಾಗಿತ್ತು.ಆದರೆ ಪೊಲೀಸರು ಜಿಟಿಟಿಸಿ ಸಚಿವರನ್ನು ಕರೆತರದೆ ಹೆದ್ದಾರಿಯಲ್ಲಿ ಹುಡಾ ಅದ್ಯಕ್ಷ ಗಣೇಶ ಕುಮಾರಸ್ವಾಮಿಯವರಿಂದ ಅಭಿನಂದನೆ ಸ್ವೀಕರಿಸಲು ಅನುವು ಮಾಡಿಕೊಟ್ಟು ಹೆದ್ದಾರಿಯಿಂದ ನೇರವಾಗಿ ಜಿಟಿಟಿಸಿ ಕೇಂದ್ರಕ್ಕೆ ಕರೆತರದೆ ಮಹಿಳಾ ಕಾಲೇಜಿಗೆ ಕರೆದೊಯ್ದರು.
ತಡವಾದ ಕಾರಣ ಶಾಸಕ ಎಚ್.ಪಿಮಂಜುನಾಥ್ ರವರು ಆಯೋಜಕರನ್ನು ಸಂಪರ್ಕಿಸಿ, ಏನಪ್ಪ ಇದು ಶಾಸಕರಿಗೆ ಅಗೌರವ ಮಾಡುತ್ತಿದ್ದೀರಾ. ಸಚಿವರ ಬಿಳಿಕೆರೆ ಕಾರ್ಯಕ್ರಮಕ್ಕೂ ಆಹ್ವಾನಿಸಿಲ್ಲ. ಇದು ಅಗೌರವ ತರುವಂತದ್ದು ಎಂದು ಕೋಪಗೊಂಡು ಬೊಕ್ಕೆಯನ್ನು ಎಸೆದು ಕಾರು ಹತ್ತಿ ಹೊರನಡೆದರು.ಇವರೊಂದಿಗೆ ನಗರಸಭೆ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ ಹೊರನಡೆದರು.
ಸಚಿವ ಅಶ್ವತ್ಥ ನಾರಾಯಣ್ ಅವರು ಮಹಿಳಾ ಕಾಲೇಜಿನ ಬಳಿ ಇದ್ದ ಬೋರ್ಡ್ ಕಂಡು ಪೊಲೀಸರ ಬಳಿ ಮಾಹಿತಿ ಪಡೆದು ಕಾರಿನಿಂದಿಳಿಯದೆ ನೇರವಾಗಿ ಬಂದು ಜಿಟಿಡಿಸಿ ಕೇಂದ್ರವನ್ನು ಉದ್ಘಾಟಿಸಿದರು. ಅಲ್ಲಿ ನಡೆದ ಸಭೆಯಲ್ಲಿ ಪೊಲೀಸರಿಂದ ಆದ ಎಡವಟ್ಟಿನ ಬಗ್ಗೆ ಬೇಸರ ವ್ಯಕ್ತಪಡಿಸಿದರು.