Advertisement
ಇಲ್ಲಿನ ಕೇರ್ಗಳ್ಳಿಯಲ್ಲಿ ಮಂಗಳವಾರ ಶ್ರೀ ಹೊಂಬಾಳಮ್ಮ ಮತ್ತು ಶ್ರೀ ಸಿದ್ದರಾಮೇಶ್ವರ ಟ್ರಸ್ಟ್ ವತಿಯಿಂದ ನಡೆದ ಸವಭವನದ ಉದ್ಘಾಟನಾ ಸಮಾರಂಭದಲ್ಲಿ ದೇವೇಗೌಡ ಮಾತನಾಡಿದರು. ಮೈಸೂರು ಜಿಲ್ಲೆಯಲ್ಲಿ ತಾವು ಹಾಗೂ ಸಿದ್ದರಾಮಯ್ಯ ಅವರು ಜನತಾ ಪರಿವಾರವನ್ನು 1983ರಿಂದ ನೆಲದಿಂದ ಒಟ್ಟಿಗೆ ಕಟ್ಟಿದವರು. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಹೋಗಿ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ಅವರು ನೀಡಿದ ಅನ್ನಭಾಗ್ಯ ಯೋಜನೆ ಅತ್ಯಂತ ಮುಖ್ಯವಾದ ಯೋಜನೆ. ಸಿದ್ದರಾಮಯ್ಯ ಅವರ ಮಾತು ಒರಟು ಅಷ್ಟೆ. ಅವರು ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ದೇವೇಗೌಡ ಪ್ರಶಂಸಿಸಿದರು.
Related Articles
Advertisement
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ದಲ್ಲಿ ತಾವು ಹಾಗೂ ದೇವೇಗೌಡ ಪರಸ್ಪರ ಸ್ಪರ್ಧಿಸಿ ದ್ದೇವು. ದೇವೇಗೌಡ ನನ್ನನ್ನೇ ಸೋಲಿಸಿದರು. ಹೀಗಾಗಿ, ನಾವಿಬ್ಬರೂ ಒಂದೇ ವೇದಿಕೆಯಲ್ಲಿ ಬಂದಿರುವುದಕ್ಕೆ ಮಾಧ್ಯಮದವರಿಗೆ ಕುತೂಹಲ ವಿತ್ತು. ಜಿ.ಟಿ.ದೇವೇಗೌಡರಿಗೆ ಕಾಂಗ್ರೆಸ್ ಸೇರಲು ಮನಸ್ಸಿದೆ. ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಪಕ್ಷಕ್ಕೆ ಸ್ವಾಗತವಿದೆ ಎಂದರು.
ಜಿ.ಟಿ.ದೇವೇಗೌಡ ನನ್ನ ರಾಜಕೀಯ ಎದುರಾಳಿ ಹೊರತು ವೈರಿ ಅಲ್ಲ. ನನಗೂ ಜಿ.ಟಿ.ದೇವೇಗೌಡರಿಗೂ ವೈಯಕ್ತಿಕ ದ್ವೇಷವಿಲ್ಲ. ಮುಂದೆ ರಾಜಕೀಯ ಬೆಳವಣಿಗೆ ಏನಾಗುತ್ತದೆಯೋ ಗೊತ್ತಿಲ್ಲ ಎಂದರು. ಈಗಲೇ ನನ್ನನ್ನು ಕಂಡರೆ ಹೊಟ್ಟೆಕಿಚ್ಚು ಪಡುವವರು ಹೆಚ್ಚು. ಇನ್ನು ನೀವೆಲ್ಲಾ ಪ್ರಧಾನಮಂತ್ರಿಯಾಗಲಿ ಎಂದು ಕೂಗಿದರೆ ಹೊಟ್ಟೆಕಿಚ್ಚು ಪಡುವವರು ಹೆಚ್ಚಾಗುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮೇಕೆದಾಟು: ಪಾದಯಾತ್ರೆ ಸಮರ್ಥಿಸಿಕೊಂಡ ಸಿದ್ದು
ಮೈಸೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವುದನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ನಾವು ಸಮಗ್ರ ಯೋಜನಾ ವರದಿ (ಡಿಪಿಆರ್) ಮಾಡುವುದು ತಡವಾಗಿತ್ತು. ಆದರೂ ನಾವು ಡಿಪಿಆರ್ ಮಾಡಿ ಮುಗಿಸಿದ್ದೇವೆ. ಬಿಜೆಪಿ ಸರ್ಕಾರ ಈಗ ಕಾಮಗಾರಿ ಆರಂಭಿಸಲು ತಡ ಮಾಡುತ್ತಿದೆ.
ಏಕೆ ವಿಳಂಬ? ಕೇಂದ್ರದಿಂದ ಅನುಮತಿ ಪಡೆದು ತುರ್ತಾಗಿ ಮೇಕೆದಾಟು ಯೋಜನೆ ಆರಂಭಿಸಬೇಕೆಂದು ಮಂಗಳವಾರ ಇಲ್ಲಿ ಸುದ್ದಿಗಾರರ ಜೊತೆ ಮಾತಾಡುತ್ತಾ ಸಿದ್ದರಾಮಯ್ಯ ಆಗ್ರಹಿಸಿದರು. ನಾವು ಒತ್ತಡ ಹೇರದಿದ್ದರೆ ಬಿಜೆಪಿ ಸರ್ಕಾರ ಕೆಲಸ ಆರಂಭಿಸುವುದಿಲ್ಲ. ಒತ್ತಡ ಹೇರಬೇಕಾದ ಸನ್ನಿವೇಶದಲ್ಲಿ ನಾವಿದ್ದೇವೆ. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕಾಗಿ ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿದೆ ಎಂದರು.
ತುಳಿತಕ್ಕೆ ಒಳಗಾದ ನಾನೂ ಕೂಡ ದಲಿತ ಕಾಂಗ್ರೆಸ್‌ನಿಂದ ದಲಿತರು ಮುಖ್ಯಮಂತ್ರಿಯಾದರೆ ತಮಗೆ ಹೆಚ್ಚು ಖುಷಿ
ಮೈಸೂರು: ತಮ್ಮ ಪಕ್ಷದ ಹೈಕಮಾಂಡ್ ದಲಿತರು ಮುಖ್ಯಮಂತ್ರಿಯಾಗಲಿ ಎಂದು ಹೇಳಿದರೆ ಹೆಚ್ಚು ಖುಷಿಪಡುವ ವ್ಯಕ್ತಿ ನಾನು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ಹಿನಕಲ್‌ನಲ್ಲಿ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮಾತ್ರ ದಲಿತರು ಮುಖ್ಯಮಂತ್ರಿಯಾಗಲು ಸಾಧ್ಯ. ಐದಾರು ರಾಜ್ಯಗಳಲ್ಲಿ ಕಾಂಗ್ರೆಸ್‌ನಿಂದ ದಲಿತರು ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಾಗ ಶಾಸಕರ ಅಭಿಪ್ರಾಯವನ್ನು ಆಲಿಸಲಾಗುತ್ತದೆ. ಹೈಕಮಾಂಡ್ ತೀರ್ಮಾ ನವೇ ಅಂತಿಮ. ಎಲ್ಲರಿಗೂ ಮುಖ್ಯಮಂತ್ರಿ ಯಾಗುವ ಅವಕಾಶ ಸಿಗಬೇಕು ಎಂದರು.
ರಾಜ್ಯದಲ್ಲಿ ತಾವು ಮುಖ್ಯಮಂತ್ರಿಯಾಗಿ ದ್ದಾಗ ಜಾರಿಗೊಳಿಸಿದ ಯೋಜನೆಗಳನ್ನು ಸಿದ್ದರಾಮಯ್ಯ ನೆನಪು ಮಾಡಿಕೊಂಡರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ತಾವು ಜಾರಿಗೊಳಿಸಿದ ಕಾರ್ಯಕ್ರಮಗಳನ್ನು ಮೆಲುಕು ಹಾಕಿದರು. ನಾನು ಕೂಡ ದಲಿತನೇ. ಕೇವಲ ಪರಿಶಿಷ್ಟ ಪಂಗಡದವರು ಮಾತ್ರ ದಲಿತರಲ್ಲ. ತುಳಿತಕ್ಕೊಳಗಾದ ಎಲ್ಲರೂ ದಲಿತರೇ. ನಾನೂ ತುಳಿತಕ್ಕೆ ಒಳಗಾಗಿದ್ದೇನೆ. ನಾನು ಅಂಬೇಡ್ಕರ್ ವಾದಿ. ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಪಾಲಿಸುತ್ತೇನೆ. ಅಧಿಕಾರಕ್ಕಾಗಿ ಸಿದ್ದಾಂತಗಳ ವಿಚಾರದಲ್ಲಿ ರಾಜಿಯಾಗಲಾರೆ ಎಂದರು.
ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಜಗತ್ತಿನಲ್ಲಿ ಅತ್ಯುತ್ತಮ ಸಂವಿಧಾನವನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ್ದಾರೆ. ಮತದಾರರು ಜಾಗೃತರಾಗಬೇಕು ಎಂದರು. ದೇಶದಲ್ಲಿ ಪ್ರಸ್ತುತ ಸನ್ನಿವೇಶದಲ್ಲಿ ಪ್ರಜಾ ಪ್ರಭುತ್ವ ಅಪಾಯದಲ್ಲಿದೆ. ಮುಂಬರುವ ಚುನಾವಣೆಯಲ್ಲಿ ಜನರು ಎಚ್ಚರಿಕೆಯಿಂದ ಮತ ಚಲಾಯಿಸಬೇಕೆಂದು ಉರಿಲಿಂಗಿ ಪೆದ್ದಿಮಠದ ಪೀಠಾಧಿಪತಿ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ಮೈಸೂರಿನ ಮಾಜಿ ಮೇಯರ್ ಪುರು ಷೋತ್ತಮ್ ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳು ಅಧಿಕಾರ ಹಂಚಿಕೆ ವಿಚಾರದಲ್ಲಿ ದಲಿತರನ್ನು ಕಡೆಗಣಿಸುತ್ತಿವೆ. ದಲಿತರೊಬ್ಬರು ಈವರೆಗೂ ರಾಜ್ಯದ ಮುಖ್ಯಮಂತ್ರಿಯಾಗಿಲ್ಲ. ಮುಂಬರುವ ಚುನಾವಣೆಯಲ್ಲಾದರೂ ದಲಿತರೊಬ್ಬರನ್ನು ರಾಜ್ಯದ ಮುಖ್ಯ ಮಂತ್ರಿಯನ್ನಾಗಿ ಮಾಡುತ್ತೇವೆಂದು ಘೋಷಿಸಲಿ ಎಂದು ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿದರು. ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮರೀಗೌಡ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
ವೇದಿಕೆ ಹಂಚಿಕೊಂಡ ಸಿದ್ದು, ದೇವೇಗೌಡ
ಕುಮಾರಸ್ವಾಮಿ ಸರ್ಕಾರದ ಪತನದ ನಂತರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಂಗಳವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸ್ಥಳೀಯ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಈ ಸಮಾರಂಭದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಈ ಕ್ಷೇತ್ರದಲ್ಲಿ ಪರಾಭವಗೊಂಡ ನಂತರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮಾತ್ರ ಆಗ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಜಿ.ಟಿ.ದೇವೇಗೌಡರ ಜೊತೆ ವೇದಿಕೆ ಯಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಇದೇ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಇಬ್ಬರೂ ನಾಯಕರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದರು.