Advertisement

ದಳ ತೊರೆದು ಕಾಂಗ್ರೆಸ್‌ನತ್ತ ಜಿಟಿಡಿ ಪಯಣ

06:31 PM Aug 25, 2021 | Team Udayavani |

ಮೈಸೂರು: ಹಳೇ ಮೈಸೂರು ಭಾಗದ ಜೆಡಿಎಸ್‌ನ ಪ್ರಭಾವಿ ನಾಯಕ ಹಾಗೂ ಸಹಕಾರಿ ಧುರೀಣರಾಗಿ ಗುರುತಿಸಿಕೊಂಡಿರುವ ಶಾಸಕ ಜಿ.ಟಿ. ದೇವೇಗೌಡ ಪಕ್ಷದೊಳಗಿನ ಆಂತರಿಕ ಕಲಹಕ್ಕೆ ಬೇಸತ್ತು ಮೂರು ವರ್ಷಗಳ ಬಳಿಕ ತಮ್ಮ ನಾಯಕರ ವಿರುದ್ಧ ಮೌನ ಮುರಿದು ಪಕ್ಷ ತೊರೆಯುವ ಬಗ್ಗೆ ಪ್ರಕಟಿಸಿದ್ದಾರೆ.

Advertisement

ಈಗಾಗಲೇ ಒಮ್ಮೆ ಪಕ್ಷ ತೊರೆದು ಬಿಜೆಪಿ ಸೇರಿ ಅಂತಂತ್ರರಾಗಿದ್ದ ಜಿಟಿಡಿ ಮತ್ತೆ ಜೆಡಿಎಸ್‌ ಸೇರಿ ಎರಡು ಬಾರಿ ಶಾಸಕರಾಗಿ ಆಯ್ಕೆ ಯಾಗಿದ್ದಲ್ಲದೇ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಈಗ ಪಕ್ಷದೊಳಗಿನ ಒಳ ಬೇಗುದಿಗೆ ನಲುಗಿ ಪಕ್ಷ
ತೊರೆಯಲು ಮುಂದಾಗಿರುವ ಜಿಟಿಡಿ ಎರಡನೇ ಇನ್ನಿಂಗ್ಸ್‌ ಆರಂಭಿಸಿದಂತಾಗಿದೆ.

ಕಳೆದ ವಿಧಾನ ಸಭೆ ಚುನಾವಣೆಯ ಬಳಿಕ ನಿರಂತರವಾಗಿ ಪಕ್ಷದ ನಾಯಕರು ಮೂಲೆಗುಂಪು ಮಾಡಿದ್ದು, ಮೇಲಿಂದ ಮೇಲೆ ಅಪಮಾನ ಮಾಡಿದ್ದರ ಬಗ್ಗೆ ಕಳೆದ ಮೂರು ವರ್ಷಗಳಿಂದ ನಾನು ಮೌನವಾಗಿಯೇ ಸಹಿಸಿಕೊಂಡಿದ್ದೆ. ಈಗ ಸಹಿಸಲಾಗುತ್ತಿಲ್ಲ. ನಾನು ಪಕ್ಷ ತೊರೆದು ಕಾಂಗ್ರೆಸ್‌ ಸೇರುವೆ ಎಂದು ಮಂಗಳವಾರ ತಮ್ಮ ನಿಲುವನ್ನು ತಿಳಿಸಿದ್ದಾರೆ.ಈಮೂಲಕರಾಜಕೀಯಪಡಸಾಲೆಯಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಜಿಟಿಡಿ ಈ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ಘಟನೆಗ ಸಂಬಂಧಿಸಿದಂತೆ ಪೂರ್ಣ ವರದಿ ನೀಡುವಂತೆ ಸೂಚನೆ : ಆರಗ

ಜೆಡಿಎಸ್‌ನ ವರಿಷ್ಠರಾದ ಎಚ್‌.ಡಿ.ಕುಮಾರಸ್ವಾಮಿ, ಸ್ಥಳಿಯ ಶಾಸಕ ಸಾ.ರಾ. ಮಹೇಶ್‌ ಅವರ ಒಡನಾಟದಿಂದ ತೆರೆಯಹಿಂದೆ ಸರಿಯಲ್ಪಟ್ಟಿದ್ದ ಜಿಟಿಡಿ ಅವರು ಶಾಸಕ ಸಾರಾ ಮಹೇಶ್‌ ಮತ್ತು ವರಿಷ್ಠರ ಏಕಪಕ್ಷೀಯ ನಿರ್ಧಾರಗಳಿಂದ ಬೇಸರಗೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಮೈಸೂರು ಮಾಹಾನಗರ ಪಾಲಿಕೆ ಚುನಾವಣೆಯ ಉಸ್ತುವಾರಿ ಹೊತ್ತು ಹೆಚ್ಚು ಸೀಟುಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ಸಫ‌ಲರಾಗಿದ್ದ ಜಿಟಿಡಿ, ಚುನಾವಣೆ ವೇಳೆ ಎಚ್‌.ಡಿ. ರೇವಣ್ಣನವರ ಆಪ್ತರಿಗೆ ನಾಲ್ಕು ಟಿಕೆಟ್‌ ನೀಡಿದ್ದು, ಎಚ್‌ಡಿಕೆ ಕೆಂಗಣ್ಣಿಗೆ ಗುರಿಯಾದರು. ಇತ್ತ ಮೈಸೂರು ಭಾಗದಲ್ಲಿ ಜಿಟಿಡಿಯನ್ನು ಮಣಿಸಿ ತಾವು ಪಕ್ಷವನ್ನು ಹಿಡಿತದಲ್ಲಿಟ್ಟುಕೊಳ್ಳಲು ಅವಣಿಸಿದ ಶಾಸಕ ಸಾರಾ ಮಹೇಶ್‌ ಸಹಜವಾಗಿಯೇ ಕುಮಾರಸ್ವಾಮಿ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡು ಮೈಸೂರು ಭಾಗದಲ್ಲಿ ನಡೆಯುವ ಎಲ್ಲಾ ರಾಜಕೀಯ ನಿರ್ಧಾರಗಳನ್ನು ತಾವೇ ಪ್ರಕಟಿಸಿ ಜಿಟಿಡಿ ಅವರನ್ನು ಮೂಲೆ ಗುಂಪು ಮಾಡುವ ಪ್ರಯತ್ನ ನಡೆಸಿದರು.

Advertisement

ಇದರಿಂದ ಬಹಿರಂಗವಾಗಿ ಮೂರ್‍ನಾಲ್ಕು ಬಾರಿ ಅಸಮಾಧಾನ ಹೊರಹಾಕಿದ್ದ ಅವರು ಪಕ್ಷ ತೊರೆಯುವ ಬಗ್ಗೆ ಸುಳಿವು ನೀಡಿದ್ದರು. ಸೋಮವಾರ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ಹೈಕಮಾಂಡ್‌ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಜಿಟಿಡಿ ಪಕ್ಷ ತೊರೆದರೆ ನಮಗೇನು ನಷ್ಟವಿಲ್ಲ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೆ, ಇತ್ತ ಮೈಸೂರಿನಲ್ಲಿ ಮಂಗಳವಾರ ಜಿಟಿಡಿ ಪಕ್ಷ ತೊರೆದು ಕಾಂಗ್ರೆಸ್‌ ಸೇರುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ವರಿಷ್ಠರ ನಡೆಗೆ ಅಸಮಾಧಾನ: ಆರಂಭದಿಂದ ಜೆಡಿಎಸ್‌ ಪಕ್ಷದ ವರಿಷ್ಠ ಎಚ್‌.ಡಿ. ಕುಮಾರಸ್ವಾಮಿ ತೆಗೆದುಕೊಳ್ಳುವ ಏಕಪಕ್ಷೀಯನಿರ್ಧಾರಗಳು ಜಿಟಿಡಿ ಅಸಮಾಧಾನಕ್ಕೆ ಕಾರಣವಾಗಿತ್ತು. ಪಾಲಿಕೆ ಮೇಯರ್‌ ಆಯ್ಕೆ, ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಮೈಮುಲ್‌ ಚುನಾವಣೆ ಯಲ್ಲಿ ಜಿಟಿಡಿ ಹಾಗೂ ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್‌ ವಿರುದ್ಧ ನೇರವಾಗಿ ಪೈಪೋಟಿ ನಡೆಸುವ ಮೂಲಕ ಪಕ್ಷದಲ್ಲಿ ಇದ್ದರೆ ಇರಿ, ಇಲ್ಲವಾದರೆ ಹೊರ ನಡೆಯಿರಿ ಎಂಬ ಪರೋಕ್ಷ ಸಂದೇಶವನ್ನು ಜಿಟಿಡಿಗೆ ರವಾನಿಸಿದ್ದರು.

ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಈ ನಿರ್ಧಾರವೇ?
ಜೆಡಿಎಸ್‌ನಲ್ಲಿ ಆಗಿಂದಾಗೆ ತುಳಿತಕ್ಕೊಳಗಾಗುತ್ತಿರುವ ಜಿ.ಟಿ.ದೇವೇಗೌಡರು ಇದೇ ಪಕ್ಷದಲ್ಲಿ ಉಳಿದರೆ ಮಗನ ರಾಜಕೀಯ ಭವಷ್ಯ ಮಂಕಾಗಬಹುದು ಎಂಬ ಕಾರಣಕ್ಕಾಗಿ, ಪಕ್ಷ ತೊರೆದು ಕಾಂಗ್ರೆಸ್‌ ಸೇರುವ ನಿರ್ಧಾರ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿಗೆ ಟಿಕೆಟ್‌ ನೀಡುವುದು ಹಾಗೂ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾಕ್ಷೇತ್ರಕ್ಕೆ ಪುತ್ರ ಜಿ.ಡಿ ಹರೀಶ್‌ ಗೌಡ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಈಗಾಗಲೇ ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆಶಿ ಜೊತೆ ಒಪ್ಪಂದ ಆಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಮೂಲಕ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್‌ ಸೇರುವ ಬಗ್ಗೆ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ನಿಂದ ಇಬ್ಬರಿಗೂ ಟಿಕೆಟ್‌ ಕೇಳಿದ್ದೇನೆ
ನನ್ನನ್ನ ಕ್ಷಮಿಸಿ ಅಪ್ಪಾಜಿ, ನಾನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಜೊತೆ ಮಾತನಾಡಿದ್ದೇನೆ. ನಿಮ್ಮ ಆಶೀರ್ವಾದ ಹೀಗೆ ಇರಲಿ. ನನಗೆ ಮತ್ತು ® ‌ನನ್ನ ಮಗ ಇಬ್ಬರಿಗೂ ಟಿಕೆಟ್‌ ಕೇಳಿದ್ದೇನೆ. ಇಬ್ಬರಿಗೂ ಟಿಕೆಟ್‌ ಸಿಗುವ ವಿಶ್ವಾಸ ಇದೆ. ಸಿದ್ದರಾಮಯ್ಯ ಅವರು ನೀನು ಪಕ್ಷಕ್ಕೆ ಬಂದರೆ ನಾನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಮರ್ಧಿಸಲ್ಲ ಎಂದು ಹೇಳಿದ್ದಾರೆ. ಈ ಅವಧಿಯವರೆಗೂ ನಾನು ಜೆಡಿಎಸ್‌ನಲ್ಲಿ ಇರುತ್ತೇನೆ. ಎಚ್‌.ಡಿ. ಕುಮಾರಸ್ವಾಮಿ ಆಡಿರುವ ಮಾತುಗಳನ್ನು ನಾನು ಮರೆಯುಲು ಸಾಧ್ಯವಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಜೆಡಿಎಸ್‌ ಕಾರ್ಯಕರ್ತರಲ್ಲಿ ಗೊಂದಲ
ಜಿಟಿಡಿ ಮತ್ತು ಸಾರಾ ನಡುವಿನ ಮುಸುಕಿನ ಗುದ್ದಾಟದ ಪರಿಣಾಮ ಜಿಲ್ಲೆಯ ಜಿಡಿಎಸ್‌ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಲ್ಲಿ ಕಳೆದ ಮೂರು ವರ್ಷಗಳಿಂದ ಗೊಂದಲ ಏರ್ಪಟ್ಟಿತ್ತು. ಈಗ ಜಿಟಿಡಿ ನಿರ್ಧಾರದಿಂದ ಜಿಲ್ಲೆಯಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದು, ಕಾರ್ಯಕರ್ತರು ಯಾರ ಬಣದಲ್ಲಿ ಗುರುತಿಸಿಕೊಳ್ಳುವುದು ಎಂಬ ಗೊಂದಲಕ್ಕೀಡಾಗಿದ್ದಾರೆ. ಜೊತೆಗೆ ಜೆಡಿಎಸ್‌ ಸಂಘಟನೆಗೆ ಜಿಟಿಡಿ ನಡೆ ಮಾರಕವಾಗಿ
ಪರಿಗಣಿಸಿದೆ. ಒಟ್ಟಾರೆ ಮೈಸೂರು ಭಾಗದಲ್ಲಿ ಪ್ರಾದೇಶಿಕ ಪಕ್ಷವಾಗಿ ಬೇರೂರಿದ್ದ ಜೆಡಿಎಸ್‌ಗೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ.

ಜಿಟಿಡಿ ಹೊರನಡೆದರೆ ಪಕ್ಷಕ್ಕೆ ನಷ್ಟ
ಹಳೇ ಮೈಸೂರು ಭಾಗದಲ್ಲಿ ಶಾಸಕ ಜಿ.ಟಿ. ದೇವೇಗೌಡ ಪ್ರಭಾವಿ ನಾಯಕರಾಗಿದ್ದು ಜಿಲ್ಲೆಯಲ್ಲಿ ತಮ್ಮದೆ ಹಿಡಿತ ಸಾಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ವಿರುದ್ಧವೇ ತೊಡೆತಟ್ಟಿ ಸಿದ್ದರಾಮಯ್ಯಅವರನ್ನು ಮಣಿಸಿದ್ದ ಜಿಟಿಡಿ, ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡು ಪ್ರಭಾವಿ ನಾಯಕರಾಗಿ ಬೆಳೆದಿದ್ದರು. ಈ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುವುದರಿಂದ ಸಹಜವಾಗಿಯೇ ಕಾಂಗ್ರೆಸ್‌ಗೆ ಬಲ ಹೆಚ್ಚಲಿದ್ದು, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ, ತಿ. ನರಸೀಪುರ ಹಾಗೂ ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್‌ ಶಕ್ತಿ ಕುಗ್ಗುವ ಸಾಧ್ಯತೆ ಇದೆ.

 -ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next