Advertisement

ಜಿಎಸ್‌ಟಿ ಹಿಂದೆ ದುಬಾರಿ ಆತಂಕ

03:45 AM Apr 06, 2017 | Team Udayavani |

– ಜುಲೈ 1 ರಿಂದ ಸರಕು, ಸೇವಾ ತೆರಿಗೆ ಜಾರಿ ಸಾಧ್ಯತೆ
– ಜಿಎಸ್‌ಟಿ ಜಾರಿಯಾದಲ್ಲಿ ಕೆಲ ಅಗತ್ಯ ಸೇವೆಗಳು ದುಬಾರಿ ಸಂಭವ
– ಆರಂಭದಲ್ಲಿ ಮಾತ್ರ ಈ ಶಾಕ್‌, ನಂತರದಲ್ಲಿ ಸರಿಹೋಗುವ ನಿರೀಕ್ಷೆ
ನವದೆಹಲಿ:
ಕಳೆದ ಮೂರ್ನಾಲ್ಕು ವರ್ಷಗಳಿಂದ ಚರ್ಚೆಯಲ್ಲೇ ಇರುವ ಜಿಎಸ್‌ಟಿ ಇನ್ನೇನು ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ. ಈಗಾಗಲೇ ಕೇಂದ್ರ ಸರ್ಕಾರ ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮುಗಿಸುವ ಹಂತದಲ್ಲಿದ್ದು, ಜು.1 ರಿಂದಲೇ ದೇಶಾದ್ಯಂತ ಜಾರಿಗೆ ಬರುವ ನಿರೀಕ್ಷೆ ಇದೆ. ಆದರೆ ಜಿಎಸ್‌ಟಿ ಜಾರಿಗೆ ಬಂದಲ್ಲಿ ಜನ ಸಾಮಾನ್ಯರಿಗೆ ಕಷ್ಟವೋ, ಸುಖವೋ ಎಂಬ ಚರ್ಚೆಗಳೂ  ಶುರುವಾಗಿವೆ. ಆರ್ಥಿಕ ತಜ್ಞರ ಪ್ರಕಾರ, ಜಿಎಸ್‌ಟಿಯ ಆರಂಭದ ದಿನಗಳು ಜನಸಾಮಾನ್ಯರ ಪಾಲಿಗೆ ದುಬಾರಿಯಾಗಿಯೇ ಇರಲಿವೆ.

Advertisement

ಆರ್ಥಿಕ ಅಭಿವೃದ್ಧಿಗಾಗಿ ಜಿಎಸ್‌ಟಿಯೊಂದೇ ಪರಿಹಾರ, ಇದರಿಂದ ದೇಶಕ್ಕೊಂದು ತೆರಿಗೆ ಮಾದರಿ ಸಿಗುತ್ತದೆ ಎಂಬುದು ಕೇಂದ್ರ ಸರ್ಕಾರದ ವಾದ. ಹೀಗಾಗಿಯೇ ಪ್ರಾರಂಭದ ದಿನಗಳಲ್ಲಿ ಜಿಎಸ್‌ಟಿಯಿಂದ ನಷ್ಟ ಅನುಭವಿಸುವ ರಾಜ್ಯಗಳಿಗೆ ಅದು ಪರಿಹಾರವನ್ನೂ ಕೊಡಲಿದೆ. ಆದರೆ ಇದೇ ಪರಿಹಾರ ಜನರಿಗೆ ಸಿಗುವ ಸಾಧ್ಯತೆ ತೀರಾ ಕಡಿಮೆ. ಆರಂಭದ ಮೂರ್ನಾಲ್ಕು ವರ್ಷ ಜಿಎಸ್‌ಟಿಯಿಂದಾಗಿ ಜನರ ಜೇಬು ಖಾಲಿಯಾಗುವ ಎಲ್ಲಾ ಲಕ್ಷಣಗಳು ಇವೆ. ಆದರೆ ನಂತರದ ದಿನದಲ್ಲಿ ಇದು ಬದಲಾಗಿ, ಏರಿದ್ದ ಬೆಲೆಗಳು ಇಳಿಯಬಹುದು ಎಂಬ ಲೆಕ್ಕಾಚಾರವೂ ಇದೆ. ಸದ್ಯಕ್ಕೆ ಹೆಚ್ಚಾಗುವುದು ಕೇವಲ ಹಣದುಬ್ಬರ ಆಧರಿತವಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ತುಟ್ಟಿ ಜಿಎಸ್‌ಟಿ
ಕೆಳಗೆ ನೀಡಲಾಗಿರುವ ಸೇವೆಗಳಿಗಾಗಿ ಕಂಪನಿಗಳ ಮೇಲೆ ತೆರಿಗೆ ಬಿದ್ದರೂ ಅವರು ಜನರಿಗೆ ಅದನ್ನು ವರ್ಗಾಯಿಸುವುದರಿಂದ ದರ ಹೆಚ್ಚಬಹುದು. ಹಾಗೆಯೇ ಕೆಲವು ವಸ್ತುಗಳ ಸಬ್ಸಿಡಿ, ವಿನಾಯಿತಿ ಹೋಗುವುದರಿಂದಲೂ ಅವುಗಳ ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆ ಇದೆ.
– ಮೊಬೈಲ್‌ ಬಿಲ್‌ಗ‌ಳು
– ಜೀವ ವಿಮಾ ತೆರಿಗೆಗಳ ಮೇಲಿನ ರಿನೀವಲ್‌ ಪ್ರಿಮಿಯಂ
– ಬ್ಯಾಂಕ್‌ ಮತ್ತು ಹೂಡಿಕೆ ನಿರ್ವಹಣಾ ವೆಚ್ಚ
– ವೈಫೈ, ಡಿಟಿಎಚ್‌, ಟಿಕೆಟ್‌ಗಳ ಆನ್‌ಲೈನ್‌ ಬುಕ್ಕಿಂಗ್‌
– ಮನೆ ಬಾಡಿಗೆ
– ಆರೋಗ್ಯ ಸೇವೆ
– ಶಾಲೆಗಳ ಶುಲ್ಕ
– ಕೋರಿಯರ್‌ ಸೇವೆ
– ಮೆಟ್ರೋ, ರೈಲು ದರ

ಅಗ್ಗದ ಜಿಎಸ್‌ಟಿ
ಮನೋರಂಜನಾ ತೆರಿಗೆಗೆ ಜಿಎಸ್‌ಟಿಯಲ್ಲಿ ವಿನಾಯಿತಿ ನೀಡಲಾಗಿದೆ. ಹಾಗೆಯೇ ಕೆಲವು ಅತ್ಯಾವಶ್ಯಕ ವಸ್ತುಗಳ ಮೇಲಿನ ತೆರಿಗೆಗೂ ರಿಯಾಯಿತಿ ನೀಡಲಾಗಿರುವುದರಿಂದ ಅವುಗಳ ದರದಲ್ಲಿ ಇಳಿಕೆಯಾಗುವ ಸಂಭವವಿದೆ.
– ಸಿನಿಮಾ, ನಾಟಕದ ಟಿಕೆಟ್‌ಗಳು
– ರೆಸ್ಟೋರೆಂಟ್‌ಗಳಲ್ಲಿನ ಊಟ
– ದ್ವಿಚಕ್ರ ವಾಹನಗಳು
– ಕೆಲವು ಸೆಡಾನ್‌ಗಳು
– ಎಸ್‌ಯುವಿಗಳು, ಐಷಾರಾಮಿ ಮತ್ತು ಪ್ರಿಮಿಯಂ ಕಾರುಗಳು

ಫಿಫ್ಟಿ ಫಿಫ್ಟಿ ಜಿಎಸ್‌ಟಿ
ಇನ್ನೂ ಕೆಲವು ವಸ್ತುಗಳ ಬೆಲೆ ಏರುತ್ತದೆಯೋ ಅಥವಾ ಇಳಿಕೆಯಾಗುತ್ತದೆಯೋ ಎಂಬುದು ಇನ್ನೂ ಖಚಿತವಾಗಿಲ್ಲ. ಅದು ರಾಜ್ಯಗಳ ಲೆಕ್ಕಾಚಾರದಲ್ಲಿ ಹೋಗುತ್ತದೆ. ಹೀಗಾಗಿ ಕೆಲವು ಸೇವೆಗಳು ದರ ಏರಿಕೆಯಾಗಬಹುದು ಅಥವಾ ಇಳಿಕೆಯೂ ಆಗಬಹುದು.
– ಟಿವಿಗಳು
– ವಾಷಿಂಗ್‌ ಮೆಷಿನ್‌
– ಸ್ಟೋವ್‌ಗಳು

Advertisement

ಭಾರಿ ತುಟ್ಟಿ ಜಿಎಸ್‌ಟಿ
ಕೆಲವು ವಸ್ತುಗಳ ಮೇಲಂತೂ ಜಿಎಸ್‌ಟಿ ಮೂಲಕ ಸಿಕ್ಕಾಪಟ್ಟೆ ತೆರಿಗೆ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರಲ್ಲಿ ಕೆಲವು ತಂಪು ಪಾನೀಯ, ತಂಬಾಕು ಪದಾರ್ಥಗಳು ಸೇರಿವೆ. ಇವುಗಳ ಮೇಲೆ ಶೇ.40ರ ವರೆಗೆ ತೆರಿಗೆ ಬೀಳಬಹುದು.
– ತಂಪು ಪಾನೀಯಗಳು
– ತಂಬಾಕು
– ಸಿಗರೇಟು

ಇನ್ನು ಎಕ್ಸ್‌ಚೇಂಜ್‌ ಕೂಡ ತುಟ್ಟಿ
ಮೊಬೈಲ್‌ ಫೋನ್‌, ಟಿವಿ, ದ್ವಿಚಕ್ರ ವಾಹನ, ಕಾರು ಸೇರಿದಂತೆ ಹಲವಾರು ವಸ್ತುಗಳು ಎಕ್ಸ್‌ಚೇಂಜ್‌ ಆಧರಿತವಾಗಿ ಮಾರಾಟವಾಗುವಲ್ಲಿ ಪ್ರಸಿದ್ಧಿ ಪಡೆದಿದ್ದವು. ಇನ್ನು ಮುಂದೆ ಈ ಎಕ್ಸ್‌ಚೇಂಜ್‌ ಕೂಡ ದುಬಾರಿಯಾಗುವ ಸಾಧ್ಯತೆ ಇದೆ. ಇದುವರೆಗೆ ಎಕ್ಸ್‌ಚೇಂಜ್‌ ಮಾಡಿಕೊಳ್ಳುವಾಗ ಕೇವಲ ವ್ಯಾಟ್‌ ತೆರಿಗೆ ಕೊಡಬೇಕಿತ್ತು. ಆದರೆ ಇನ್ನು ಮುಂದೆ ವಸ್ತುವನ್ನು ಬದಲಾಯಿಸಿಕೊಂಡಿದ್ದರ ಮೌಲ್ಯದ ಮೇಲೆ ತೆರಿಗೆಯನ್ನೂ ನೀಡಬೇಕಾಗುತ್ತದೆ. ಆಗ ತನ್ನಿಂತಾನೇ ಎಕ್ಸ್‌ಚೇಂಜ್‌ ಮೌಲ್ಯ ಕೂಡ ಹೆಚ್ಚಾಗುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next