Advertisement

GST ತೆರಿಗೆ ಆದಾಯ 11 ಸಾವಿರ ಕೋಟಿ ರೂ. ಇಳಿಕೆ

06:00 AM Dec 16, 2017 | Team Udayavani |

ಬೆಂಗಳೂರು: ಜಿಎಸ್‌ಟಿ ಜಾರಿಯಾಗಿ ಐದೂವರೆ ತಿಂಗಳು ಕಳೆದಿದ್ದು, ಜುಲೈಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ರಾಷ್ಟ್ರವ್ಯಾಪಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ 11,000 ಕೋಟಿ ರೂ. ಇಳಿಕೆಯಾಗಿದೆ. ತೆರಿಗೆ ಪಾವತಿಸಿದವರ ಸಂಖ್ಯೆಯೂ ನಾಲ್ಕು ಲಕ್ಷ ಕ್ಷೀಣಿಸಿರುವುದು ಕಂಡುಬಂದಿದೆ.

Advertisement

ಆಯ್ದ ಸರಕು ಸೇವೆಗಳ ತೆರಿಗೆ ಪ್ರಮಾಣ ಇಳಿಕೆ ಇತರೆ ಕಾರಣಕ್ಕೆ ತೆರಿಗೆ ಆದಾಯದಲ್ಲಿ ಏರಿಳಿಕೆಯಾಗಿದೆ ಎಂದಿರುವ ಕೇಂದ್ರ ತೆರಿಗೆ ಇಲಾಖೆಯು ಜಿಎಸ್‌ಟಿಯಡಿ ತೆರಿಗೆ ಪಾವತಿಸಬೇಕಾದವರನ್ನು ಗುರುತಿಸಿ ಪಾವತಿಸುವಂತೆ ಸೂಚನೆ ನೀಡುವ ಕಾರ್ಯವನ್ನು ಚುರುಕುಗೊಳಿಸಿದೆ. ನಂತರವೂ ಸ್ಪಂದಿಸದಿದ್ದರೆ ನಿಯಮಾನುಸಾರ ಕ್ರಮ ಜರುಗಿಸಲು ಮುಂದಾಗಿದೆ.

“ಒಂದು ದೇಶ ಒಂದು ತೆರಿಗೆ’ ಪರಿಕಲ್ಪನೆಯಡಿ ಜಿಎಸ್‌ಟಿ ಜಾರಿಯಾಗಿ ಬರೋಬ್ಬರಿ ಐದೂವರೆ ತಿಂಗಳು ಕಳೆದಿದ್ದು, ಲಕ್ಷಾಂತರ ವ್ಯಾಪಾರ- ವಹಿವಾಟುದಾರರು ಜಿಎಸ್‌ಟಿ ವ್ಯವಸ್ಥೆಯಲ್ಲೇ ವ್ಯವಹಾರ ನಡೆಸುತ್ತಿದ್ದಾರೆ. ತಿಂಗಳು ಕಳೆದಂತೆ ಜಿಎಸ್‌ಟಿಯಡಿ ವ್ಯವಹಾರ ನಡೆಸುವಲ್ಲಿನ ತೊಡಕುಗಳು ಕಡಿಮೆಯಾಗುತ್ತಿದ್ದು, ಗೊಂದಲಗಳು ತಕ್ಕ ಮಟ್ಟಿಗೆ ಕಡಿಮೆಯಾಗುತ್ತಿದೆ. ಈ ನಡುವೆ ತೆರಿಗೆ ಪಾವತಿಸುವವರ ಸಂಖ್ಯೆ ಹಾಗೂ ತೆರಿಗೆ ಆದಾಯವೂ ಕ್ಷೀಣಿಸಿರುವುದು ಅಂಕಿಅಂಶಗಳಿಂದ ಕಂಡುಬಂದಿದೆ.

ಜಿಎಸ್‌ಟಿಯಡಿ ದೇಶಾದ್ಯಂತ ಈವರೆಗೆ 95.9 ಲಕ್ಷ ವ್ಯಾಪಾರ- ವಹಿವಾಟುದಾರರು ನೋಂದಾಯಿಸಿಕೊಂಡಿದ್ದಾರೆ. ಅದರಂತೆ ಪ್ರತಿ ತಿಂಗಳ ವಹಿವಾಟಿನ ವಿವರವನ್ನು ಮುಂದಿನ ತಿಂಗಳ 20ರೊಳಗೆ ಸಲ್ಲಿಸಬೇಕು. ವಹಿವಾಟಿನ ವಿವರದ ಜತೆಗೆ ತೆರಿಗೆ ವ್ಯಾಪ್ತಿಗೆ ಒಳಪಡುವವರು ನಿಗದಿತ ತೆರಿಗೆಯನ್ನು ಇದೇ ದಿನದೊಳಗೆ ಪಾತಿಸಬೇಕು. ಅದರಂತೆ ಜುಲೈ ತಿಂಗಳ ವಹಿವಾಟಿನ ವಿವರ “ಜಿಎಸ್‌ಟಿ ಆರ್‌3ಬಿ’ ಅಡಿ ಸಲ್ಲಿಸಲು ಹಾಗೂ ತೆರಿಗೆ ಪಾವತಿಗೆ  ಆ.20 ಕಡೆಯ ದಿನವಾಗಿತ್ತು.

ಆರಂಭದಲ್ಲೇ ಉತ್ತಮ ತೆರಿಗೆ ಸಂಗ್ರಹ:
ಜುಲೈ ತಿಂಗಳಲ್ಲಿ ಜಿಎಸ್‌ಟಿಯಡಿ 60 ಲಕ್ಷಕ್ಕೂ ಹೆಚ್ಚು ಮಂದಿ ತೆರಿಗೆ ಪಾವತಿಸಿದ್ದು, ಒಟ್ಟು 94,063 ಕೋಟಿ ರೂ. ಸಂಗ್ರಹವಾಗಿತ್ತು. ಸಾಕಷ್ಟು ಸವಾಲು, ಇತಿಮಿತಿಗಳ ನಡುವೆ ಜಾರಿಯಾದ ಹೊಸ ತೆರಿಗೆ ಪದ್ಧತಿಯಡಿ ಮೂರನೇ ಎರಡರಷ್ಟು ತೆರಿಗೆದಾರರು ಭಾರಿ ಮೊತ್ತದ ತೆರಿಗೆ ಪಾವತಿಸಿದ್ದು, ಕೇಂದ್ರ ಹಾಗೂ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಲ್ಲಿ ಸಂತಸ ಮೂಡಿಸಿತ್ತು.

Advertisement

ನಂತರ ನಿರಂತರ ಇಳಿಕೆ:
ಆದರೆ ನಂತರದ ತಿಂಗಳಲ್ಲಿ ತೆರಿಗೆ ಆದಾಯ ನಿರಂತರವಾಗಿ ಏರಿಳಿತ ಕಂಡಿದೆ. ಆಗಸ್ಟ್‌ ತಿಂಗಳ ವಹಿವಾಟಿಗೆ ಸಂಬಂಧಪಟ್ಟ 59 ಲಕ್ಷ ವ್ಯಾಪಾರ- ವಹಿವಾಟುದಾರರು, ಸಂಸ್ಥೆಗಳಿಂದ 90,669 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಸೆಪ್ಟೆಂಬರ್‌ ವಹಿವಾಟು ಕುರಿತಂತೆ 59.44 ಲಕ್ಷ ಮಂದಿ 92,150 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಅಕ್ಟೋಬರ್‌ ವಹಿವಾಟಿನ ಸಂಬಂಧ ನ.27ರವರೆಗೆ 56 ಲಕ್ಷ ಮಂದಿ ತೆರಿಗೆ ಪಾವತಿಸಿದ್ದು, 83,346 ಕೋಟಿ ರೂ. ಸಂಗ್ರಹವಾಗಿದೆ.

ಸಂಭವನೀಯ ಕಾರಣ
ಜಿಎಸ್‌ಟಿಯಡಿ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ ಎಂಬ ಆತಂಕ, ನಿರೀಕ್ಷೆಯಿಂದಾಗಿ ಮೇ, ಜೂನ್‌ನಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಇನ್ನೊಂದೆಡೆ ಜಿಎಸ್‌ಟಿ ಜಾರಿಗೂ ಮುನ್ನ ತಯಾರಾದ ಉತ್ಪನ್ನಗಳ ತ್ವರಿತ ಮಾರಾಟಕ್ಕೆ ಭಾರಿ ರಿಯಾಯ್ತಿ ಘೋಷಿಸಿದ್ದು ಕೂಡ ವಹಿವಾಟು ಏರಿಕೆಗೆ ಕಾರಣವಾಗಿತ್ತು. ಈ ವಹಿವಾಟಿನ ಸಂಬಂಧ ಜುಲೈನಲ್ಲಿ ತೆರಿಗೆ ಪಾವತಿಸಿದ್ದರಿಂದ ದೊಡ್ಡ ಮೊತ್ತದ ಆದಾಯ ಸಂಗ್ರಹವಾಗಿತ್ತು ಎಂದು ಕೇಂದ್ರ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಹಿಂದೆ ಅಬಕಾರಿ ಸುಂಕ ಶೇ.12.5 ಹಾಗೂ ವ್ಯಾಟ್‌ನಡಿ ಶೇ.14.5ರಷ್ಟು ತೆರಿಗೆಯಿದ್ದು, ಅದನ್ನು ಒಗ್ಗೂಡಿಸಿದಾಗ ಆಯ್ದ ಸರಕುಗಳ ತೆರಿಗೆ ಶೇ.28ಕ್ಕೆ ಏರಿಕೆಯಾಗಿದ್ದರಿಂದ ಹೆಚ್ಚಿನ ಆದಾಯ ಸಂಗ್ರಹವಾಗಿತ್ತು. ಆದರೆ ನಂತರ ಆಯ್ದ ಸರಕುಗಳ ತೆರಿಗೆ ಶೇ.28ರಿಂದ ಶೇ.18ಕ್ಕೆ ಹಾಗೂ ಶೇ.18ರಷ್ಟಿದ್ದ ತೆರಿಗೆಯನ್ನು ಶೇ.12ಕ್ಕೆ ಇಳಿಕೆಯಗಿªರಿಂದ ತೆರಿಗೆ ಆದಾಯವೂ ಇಳಿಕೆಯಾಗಿರಬಹುದು. ರಾಜಿ ತೆರಿಗೆ ವ್ಯವಸ್ಥೆಯಲ್ಲಿರುವವರು ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿಸಲಿದ್ದಾರೆ. ರಾಜಿ ತೆರಿಗೆ ಮಿತಿಯನ್ನು ವಾರ್ಷಿಕ 75 ಲಕ್ಷ ರೂ.ನಿಂದ ಒಂದು ಕೋಟಿ ರೂ.ಗೆ ಏರಿಕೆಯಾಗಿದರೂ ಕಾರಣವಾಗಿರಬಹುದು ಎಂದು ಸಮಜಾಯಿಷಿ ನೀಡಿವೆ.

ಅಕ್ಟೋಬರ್‌ವರೆಗೆ ತೆರಿಗೆ ವಿಳಂಬ ಪಾವತಿಗೆ ದಂಡ ವಿಧಿಸುವುದನ್ನು ರದ್ದುಪಡಿಸಿದ್ದರಿಂದ ತೆರಿಗೆ ಪಾವತಿ ವಿಳಂಬವಾಗಿರುವ ಸಾಧ್ಯತೆ ಇರುತ್ತದೆ. ಜಿಎಸ್‌ಟಿ ಜಾರಿಯಾದ ಸಂದರ್ಭದಲ್ಲಿ ಮಾಹಿತಿ ಕೊರತೆ, ಸಮಸ್ಯೆಗೆ ಸಿಲುಕುವ ಆತಂಕದಿಂದ ಸಣ್ಣ ಪುಟ್ಟ ವಹಿವಾಟುದಾರರು ನೋಂದಣಿ ಮಾಡಿಕೊಂಡಿದ್ದರು. 20 ಲಕ್ಷ ರೂ. ಮಿತಿಯೊಳಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿಯಡಿ ತೆರಿಗೆ ವಿನಾಯ್ತಿಯಿದೆ. ಆದರೆ ಆ ಮಿತಿಯೊಳಗಿರುವವರು ಜಿಎಸ್‌ಟಿಯಿಂದ ಹೊರ ಹೋಗಲು ಅವಕಾಶವಿರಲಿಲ್ಲ. ಇದೀಗ ಅವಕಾಶವಿರುವುದರಿಂದ ನೋಂದಣಿದಾರರ ಸಂಖ್ಯೆ ಕಡಿಮೆಯಾಗಿರಬಹುದು ಎಂದು ಹೇಳಿವೆ.

ತೆರಿಗೆ ಪಾವತಿಸಲು ಸೂಚನೆ
ತಿಂಗಳು ಕಳೆದಂತೆ ತೆರಿಗೆ ಪಾವತಿದಾರರು ಹಾಗೂ ತೆರಿಗೆ ಆದಾಯ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ತೆರಿಗೆದಾರರನ್ನು ಗುರುತಿಸಿ ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗುತ್ತಿದೆ. ಹೊಸ ತೆರಿಗೆ ವ್ಯವಸ್ಥೆಯಾಗಿರುವುದರಿಂದ ಏಕಾಏಕಿ ಕ್ರಮ ಜರುಗಿಸುವ ಬದಲಿಗೆ ಮನವರಿಕೆ ಮಾಡಿಕೊಟ್ಟು ತೆರಿಗೆ ಪಾವತಿಸಲು ಉತ್ತೇಜಿಸಲಾಗುತ್ತಿದೆ. ಆರು ಇಲ್ಲವೇ ಎಂಟು ತಿಂಗಳ ಬಳಿಕ ನೋಟಿಸ್‌ ನೀಡುವ ಚಿಂತನೆಯಿದ್ದು, ತೆರಿಗೆ ಪಾವತಿಸದಿದ್ದರೆ ನೋಂದಣಿ ರದ್ದತಿ, ದಂಡ ಪ್ರಯೋಗಕ್ಕೂ ಕಾನೂನಿನಲ್ಲಿ ಅವಕಾಶವಿದೆ ಎಂದು ಕೇಂದ್ರ ತೆರಿಗೆ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಎಸ್‌ಟಿಯಡಿ ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರು ಪ್ರತಿ ತಿಂಗಳ ವಹಿವಾಟಿನ ವಿವರ ಸಲ್ಲಿಸಬೇಕು. ತೆರಿಗೆ ವ್ಯಾಪ್ತಿಗೆ ಒಳಪಡುವವರು ತೆರಿಗೆ ಪಾವತಿಸಬೇಕು. ದೇಶಾದ್ಯಂತ ಹೊಸ ತೆರಿಗೆ ಪದ್ಧತಿ ಜಾರಿಯಾಗಿರುವುದರಿಂದ ವ್ಯಾಪಾರ, ವ್ಯವಹಾರಸ್ಥರು ಸಕಾಲದಲ್ಲಿ ವಿವರ, ತೆರಿಗೆ ಪಾವತಿಸುವಲ್ಲಿ ತುಸು ವ್ಯತ್ಯಯವಾಗಿರಬಹುದು. ತೆರಿಗೆ ಪಾವತಿಸಬೇಕಾದವರು ಕಾಲಮಿತಿಯೊಳಗೆ ತೆರಿಗೆ ಪಾವತಿಸುವಂತೆ ಮನವರಿಕೆ ಮಾಡಲಾಗುತ್ತಿದ್ದು, ಅಗತ್ಯ ಸಹಕಾರ, ಮಾಹಿತಿ ನೀಡಲಾಗುತ್ತಿದೆ.
-ಜಿ. ನಾರಾಯಣಸ್ವಾಮಿ, ಆಯುಕ್ತರು, ಕೇಂದ್ರ ತೆರಿಗೆ ಇಲಾಖೆ

ತಿಂಗಳು    ಸಂಗ್ರಹವಾದ ತೆರಿಗೆ    ಪಾವತಿಸಿದವರ ಸಂಖ್ಯೆ
ಜುಲೈ    94,063 ಕೋಟಿ ರೂ.    60 ಲಕ್ಷ
ಆಗಸ್ಟ್‌    90669 ಕೋಟಿ ರೂ.    59.25 ಲಕ್ಷ
ಸೆಪ್ಟೆಂಬರ್‌    92150 ಕೋಟಿ ರೂ.    59.44 ಲಕ್ಷ
ಅಕ್ಟೋಬರ್‌ (ನ.27ರವರೆಗೆ)    83,346 ಕೋಟಿ ರೂ.    56 ಲಕ್ಷ

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next