Advertisement
ನಗರದಲ್ಲಿ ಶನಿವಾರ ನಡೆದ ಜಿಎಸ್‌ಟಿಎನ್ ಸಚಿವರ ತಂಡದ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಜಿಎಸ್‌ಟಿ ಜಾರಿಯಾಗಿ ಎರಡು ವರ್ಷ ಕಳೆಯುತ್ತಿದ್ದು, ತೆರಿಗೆ ಸಂಗ್ರಹ ಆಶಾದಾಯಕವಾಗಿದೆ. ಜಿಎಸ್‌ಟಿ ಜಾರಿಯಾದ 2017ರ ಜುಲೈನಿಂದ 2019ರ ಮಾರ್ಚ್‌ವರೆಗಿನ 21 ತಿಂಗಳಲ್ಲಿ ಮಾಸಿಕ ಸರಾಸರಿ ಜಿಎಸ್‌ಟಿ 91,334 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿಳಿಸಿದರು.
Related Articles
Advertisement
ತೆರಿಗೆ ವಂಚಕರು ಪಾರಾಗಲು ಸಾಧ್ಯವಿಲ್ಲ: ಜಿಎಸ್‌ಟಿ ತೆರಿಗೆ ವಂಚಕರು ಪಾರಾಗಲು ಸಾಧ್ಯವೇ ಇಲ್ಲ. ಅಕ್ರಮ ವಿಧಾನಗಳ ಮೂಲಕ ತೆರಿಗೆ ವಂಚಿಸುವವರನ್ನು ತಂತ್ರಜ್ಞಾನದ ನೆರವಿನಿಂದ ಕುಳಿತಲ್ಲೇ ಪತ್ತೆ ಹಚ್ಚಿ ವಂಚಿಸಿದ ತೆರಿಗೆ ಮೊತ್ತವನ್ನು ವಸೂಲು ಮಾಡಲಾಗುವುದು ಎಂದು ಮೋದಿ ಎಚ್ಚರಿಕೆ ನೀಡಿದರು.
ನಕಲಿ ಬಿಲ್‌ಗಳನ್ನು ಸೃಷ್ಟಿಸಿ ವಾಸ್ತವದಲ್ಲಿ ಸರಕು ಖರೀದಿಸದೆ, ಮಾರಾಟ ಮಾಡದೆ ಹುಟ್ಟುವಳಿ ತೆರಿಗೆ (ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್) ಪಡೆದು ವಂಚಿಸುವುದು ಹೆಚ್ಚಾಗಿದೆ. ಅಲ್ಲದೇ ಮೂರ್‍ನಾಲ್ಕು ಹೆಸರಿನಲ್ಲಿ ಕಂಪನಿ ನೋಂದಾಯಿಸಿ ಸರಕು, ಉತ್ಪನ್ನವನ್ನು ಖರೀದಿಸದೆ ಒಬ್ಬರಿಂದೊಬ್ಬರು ಖರೀದಿಸಿ ಮಾರಾಟ ಮಾಡಿದಂತೆ ದಾಖಲೆ ಸೃಷ್ಟಿಸಿ “ಸಕ್ಯುಲೇಟಿಂಗ್ ಟ್ರೇಡಿಂಗ್’ನಡಿ ವಂಚಿಸುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಬಿಹಾರದಲ್ಲಿ ಒಂದೇ ಪ್ರಕರಣದಲ್ಲಿ 226 ಕೋಟಿ ರೂ.ವಂಚಿಸಿರುವುದು ಬಯಲಾಗಿದೆ ಎಂದು ಹೇಳಿದರು.
ವ್ಯಾಪಾರ- ವಹಿವಾಟುದಾರರ ಪೈಕಿ ಕೆಲವರು ಎಷ್ಟೇ ಬುದ್ಧಿವಂತಿಕೆ ಉಪಯೋಗಿಸಿ ವಂಚಿಸಿದರೂ ಮೂರ್‍ನಾಲ್ಕು ವರ್ಷವಾದರೂ ಅಕ್ರಮವನ್ನು ಪತ್ತೆ ಹಚ್ಚಿಯೇ ತೀರಲಾಗುವುದು. ಅಕ್ರಮ ಪತ್ತೆಗಾಗಿ ಕಂಪನಿ, ವಹಿವಾಟು ನಡೆಸುವ ಸ್ಥಳಕ್ಕೆ ಭೇಟಿ ನೀಡಬೇಕೆಂದೇನೂ ಇಲ್ಲ. ಕುಳಿತಲ್ಲೇ ಮಾಹಿತಿ ಪಡೆದು ಅಕ್ರಮಗಳನ್ನು ಬಯಲಿಗೆಳೆಯುವ ವ್ಯವಸ್ಥೆ ಇದೆ. ಹಾಗಾಗಿ, ತೆರಿಗೆ ವಂಚಿಸಿದರೆ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು.
* ಜಿಎಸ್‌ಟಿ ಸಂಗ್ರಹ ಆಶಾದಾಯಕವಾಗಿದ್ದು, ವ್ಯಾಪಾರ- ವಹಿವಾಟುದಾರರು ಇನ್ನಷ್ಟು ಸರಳವಾಗಿ ರಿಟರ್ನ್ಸ್ ಸಲ್ಲಿಸಲು ಅನುಕೂಲವಾಗುವಂತೆ ಅಕ್ಟೋಬರ್‌ನಿಂದ ಹೊಸ ವ್ಯವಸ್ಥೆ ತರಲು ಸಿದ್ಧತೆ ನಡೆಸಿದೆ. ವ್ಯಾಪಾರ-ಗ್ರಾಹಕ ವ್ಯವಹಾರವನ್ನಷ್ಟೇ ನಡೆಸುವ ವಹಿವಾಟುದಾರರಿಗೆ “ಸಹಜ್’, ವ್ಯಾಪಾರ-ವ್ಯಾಪಾರ ವ್ಯವಹಾರದಲ್ಲಿ ನಿರತರಾದವರಿಗೆ “ನಾರ್ಮಲ್’, ವ್ಯಾಪಾರ-ವ್ಯಾಪಾರ ಹಾಗೂ ವ್ಯಾಪಾರ-ಗ್ರಾಹಕ ವ್ಯವಹಾರದಲ್ಲಿ ತೊಡಗಿಸಿಕೊಂಡವರಿಗೆ “ಸುಗಮ್’ನಡಿ ಒಂದೊಂದೇ ರಿಟರ್ನ್ಸ್ ಸಲ್ಲಿಕೆ ವ್ಯವಸ್ಥೆ ತರಲು ಪ್ರಯತ್ನ ನಡೆದಿದೆ. ಇದರಿಂದ ವಹಿವಾಟುದಾರರು ಮಾಸಿಕವಾರು 3ಬಿ, ಆರ್-1 ವಿವರ ಸಲ್ಲಿಕೆ ಬದಲಿಗೆ ಒಂದು ರಿಟರ್ನ್ಸ್ ಸಲ್ಲಿಸಿದರೆ ಸಾಕು.
* ಐದು ಕೋಟಿ ರೂ.ಮಿತಿಯೊಳಗೆ ವಹಿವಾಟು ನಡೆಸುವವರಿಗೆ 2020ರ ಜನವರಿ ಹಾಗೂ ಐದು ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವವರಿಗೆ ಮುಂದಿನ ಅಕ್ಟೋಬರ್‌ನಿಂದಲೇ ಈ ವ್ಯವಸ್ಥೆ ಜಾರಿಯಾಗಲಿದೆ. ಸರಳವಾಗಿ ರಿಟರ್ನ್ಸ್ ವಿವರ ದಾಖಲಿಸುವ ಮಾದರಿ ಜು.1ರಂದು ಬಿಡುಗಡೆಯಾಗಲಿದೆ.
* ರಫ್ತುದಾರರು ತಮ್ಮ ಬಾಕಿ ಮರು ಪಾವತಿಯನ್ನು ಸಕಾಲದಲ್ಲಿ ಪಡೆಯಲಾಗದೆ ತೊಂದರೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಜಿಎಸ್‌ಟಿಯಿಂದ ಬಾಕಿ ಮರುಪಾವತಿ ಪ್ರಕ್ರಿಯೆ ನಡೆಯುತ್ತಿತ್ತು. ಈ ಬಗ್ಗೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಿಂದ ಆಕ್ಷೇಪ ಕೇಳಿ ಬಂದಿತ್ತು. ಹಾಗಾಗಿ, ಕೇಂದ್ರ ಜಿಎಸ್‌ಟಿ ಒಂದೇ ಮೂಲದಿಂದಲೇ ಬಾಕಿ ಮರುಪಾವತಿ ವ್ಯವಸ್ಥೆಯನ್ನು ಮುಂದಿನ ಸೆಪ್ಟೆಂಬರ್‌ನಿಂದ ಜಾರಿ ಮಾಡಲಾಗುವುದು.
* ಜಿಎಸ್‌ಟಿ ಜಾರಿ ಬಳಿಕ ತೆರಿಗೆ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದಿರುವುದನ್ನು ನಿಯಂತ್ರಿಸಲು ರೂಪಿಸಲಾದ ಲಾಭಕೋರತನ ನಿಯಂತ್ರಣ ಪ್ರಾಧಿಕಾರಕ್ಕೆ (ಆ್ಯಂಟಿ ಪ್ರಾಫಿಟಿಯರಿಂಗ್ ಅಥಾರಿಟಿ) ಹೆಚ್ಚು ಒತ್ತು ನೀಡಲಾಗಿದೆ. ನಿಯಮ ಉಲ್ಲಂಘನೆಗೆ 25,000 ರೂ.ದಂಡ ವಿಧಿಸಲು ಅವಕಾಶವಿದ್ದು, 30 ದಿನದೊಳಗೆ ಪಾವತಿಸದಿದ್ದರೆ ಶೇ.10ರಷ್ಟು ದಂಡ ವಿಧಿಸಲು ನಿರ್ಧರಿಸಲಾಗಿದೆ. ಈಗಾಗಲೇ ಆ್ಯಂಟಿ ಪ್ರಾಫಿಟಿಯಿರಿಂಗ್ ಪ್ರಾಧಿಕಾರದಡಿ 606 ಕೋಟಿ ರೂ.ದಂಡ ವಿಧಿಸಿದ್ದು, 224 ಕೋಟಿ ರೂ.ವಸೂಲಿ ಮಾಡಲಾಗಿದೆ.
* ಅಕ್ರಮ ಸರಕು ಸಾಗಣೆ ನಿಯಂತ್ರಣಕ್ಕೆ “ಇ- ಇನ್‌ವಾಯ್ಸಿಂಗ್’ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. 50 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವ ವ್ಯಾಪಾರ-ವ್ಯಾಪಾರ ವ್ಯವಹಾರದಲ್ಲಿ “ಎಲೆಕ್ಟ್ರಾನಿಕ್ ಇನ್‌ವಾಯ್ಸಿಂಗ್’ ವ್ಯವಸ್ಥೆ ತರಲಿದ್ದು, ಇದರಲ್ಲಿ ವಹಿವಾಟುದಾರರು “ರಿಟರ್ನ್ಸ್’ ಸಲ್ಲಿಸುವ ಪ್ರಮೇಯವೇ ಇರುವುದಿಲ್ಲ.
* “ಇ- ವೇ ಬಿಲ್’ ವ್ಯವಸ್ಥೆ ತಂದರೂ ಸರಕು ಸಾಗಣೆಯಾಗುವ ಅಂತರದ ಬಗ್ಗೆ ಸ್ಪಷ್ಟತೆ ಇಲ್ಲದೆ ಗೊಂದಲವಿದೆ. ಕೆಲವೆಡೆ “ಇ-ವೇ ಬಿಲ್’ಗೆ ಸಮೂದಿಸಿರುವ ವಾಹನಗಳ ನೋಂದಣಿ ಪರಿಶೀಲಿಸಿದರೆ ಸ್ಕೂಟರ್, ದ್ವಿಚಕ್ರ ವಾಹನಗಳಿರುವುದು ಕಂಡು ಬಂದಿದೆ. ಆ ಹಿನ್ನೆಲೆಯಲ್ಲಿ ವಾಹನಗಳಿಗೂ “ಆರ್‌ಎಫ್ಐಡಿ’ ಟ್ಯಾಗ್ ಅಳವಡಿಕೆಗೆ ನಿರ್ದಿಷ್ಟ ಕಾಲಾವಕಾಶ ನೀಡಿ, ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ. ಹಾಗೆಯೇ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಂತ್ರಣದಲ್ಲಿರುವ 450 ಟೋಲ್‌ಗೇಟ್‌ಗಳಲ್ಲಿ ಆರ್‌ಎಫ್ಐಡಿ ಟ್ಯಾಗ್ ಸ್ಕ್ಯಾನಿಂಗ್ ಮೂಲಕ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ತರಲು ಪ್ರಯತ್ನ ನಡೆದಿದೆ.