ಹೊಸದಿಲ್ಲಿ: ಈಗಾಗಲೇ 100ಕ್ಕೂ ಹೆಚ್ಚು ಸಾಮಗ್ರಿಗಳ ಜಿ.ಎಸ್.ಟಿ. ಕಡಿಮೆ ಮಾಡಿರುವ ಕೇಂದ್ರ ಸರಕಾರ ಈಗ ಇನ್ನಷ್ಟು ಸಾಮಗ್ರಿಗಳ ತೆರಿಗೆ ಇಳಿಸಲು ನಿರ್ಧರಿಸಿದೆ. ಶೇ.28ರ ಬಡ್ಡಿ ದರ ಹೊಂದಿರುವ ಸಿಮೆಂಟ್ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆಯನ್ನು ಇಳಿಕೆ ಮಾಡುವ ಸಾಧ್ಯತೆಯಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‌ಟಿ ಸಮಿತಿ ಕಳೆದ ಒಂದೂವರೆ ವರ್ಷದಲ್ಲಿ 191 ಸಾಮಗ್ರಿಗಳ ತೆರಿಗೆಯನ್ನು ಶೇ.28ರಿಂದ ಇಳಿಕೆ ಮಾಡಿದೆ. ಸದ್ಯ ಕೇವಲ 35 ಸಾಮಗ್ರಿಗಳ ಮೇಲೆ ಶೇ.28 ರಷ್ಟು ತೆರಿಗೆ ಇದೆ. ಕೇವಲ ಐಷಾರಾಮಿ ಸಾಮಗ್ರಿಗಳಿಗೆ ಶೇ.28 ತೆರಿಗೆ ವಿಧಿಸಬೇಕು. ಉಳಿದ ಸಾಮಗ್ರಿಗಳನ್ನು ಈ ಪಟ್ಟಿಯಿಂದ ತೆಗೆದುಹಾಕ ಬೇಕು ಎಂಬುದು ಜಿಎಸ್‌ಟಿ ಸಮಿತಿಯ ಉದ್ದೇಶ. 22ರಂದು ಜಿಎಸ್‌ಟಿ ಸಭೆ ನಡೆಯಲಿದೆ. ಸದ್ಯ ಸಿಮೆಂಟ್, ವಾಹನ ಬಿಡಿಭಾಗಗಳು, ಟೈರ್‌ಗಳು, ವಾಹನ ಸಲ ಕರಣೆಗಳು, ಯಾಚ್‌ಗಳು, ವಿಮಾನಗಳು, ಕೆಲವು ಪಾನೀಯಗಳು, ಬೆಟ್ಟಿಂಗ್ ಹಾಗೂ ತಂಬಾಕು, ಸಿಗರೇಟ್, ಪಾನ್ ಮಸಾಲಾದಂತಹ ಸಾಮಗ್ರಿಗಳಿಗೆ ಶೇ. 28 ರಷ್ಟು ತೆರಿಗೆ ವಿಧಿಸಲಾಗುತ್ತಿದೆ.
ಜಿಎಸ್‌ಟಿ ವಂಚನೆಯಲ್ಲಿ ಕರ್ನಾಟಕ ನಂ.3
ಜಿಎಸ್‌ಟಿ ವಂಚನೆ ಪ್ರಕರಣಗಳು ದಾಖಲಾದ ರಾಜ್ಯಗಳ ವಿವರಗಳನ್ನು ಹಣಕಾಸು ಸಚಿವಾಲಯ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಮೊದಲನೇ ಸ್ಥಾನ ಪಡೆದಿದೆ. ಮಹಾರಾಷ್ಟ್ರದಲ್ಲಿ ಈವರೆಗೆ 3898.72 ಕೋಟಿ ರೂ. ಜಿಎಸ್‌ಟಿ ವಂಚನೆಯನ್ನು ಪತ್ತೆ ಮಾಡಲಾಗಿದ್ದು, 418 ಪ್ರಕರಣಗಳು ವರದಿಯಾಗಿವೆ. ಮೂರನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ, 844.17 ಕೋಟಿ ರೂ. ಜಿಎಸ್‌ಟಿ ವಂಚನೆ ಕೇಸ್ ವರದಿಯಾಗಿದೆ. ಉತ್ತರ ಪ್ರದೇಶದಲ್ಲಿ 998.62 ಕೋಟಿ ರೂ. ಮೌಲ್ಯದ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಒಟ್ಟು 600 ಕೋಟಿ ರೂ. ವಸೂಲಿ ಮಾಡಲಾಗಿದೆ.