Advertisement
ಭಾರೀ ಮಹತ್ವಾಕಾಂಕ್ಷೆಯಿಂದ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ ಪದ್ಧತಿಯಿಂದ ಜನರಿಗಾಗುತ್ತಿರುವ ತೊಂದರೆಗಳು ಕಡೆಗೂ ಸರಕಾರಕ್ಕೆ ಗಮನಕ್ಕೆ ಬಂದಿರುವುದು ಒಳ್ಳೆಯ ಬೆಳವಣಿಗೆ. ಗುವಾಹಟಿಯಲ್ಲಿ ಇಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ 177 ನಿತ್ಯೋಪಯೋಗಿ ವಸ್ತುಗಳನ್ನು ಶೇ.18 ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಕೇಂದ್ರ ಸರಕಾರ ಹೊಸ ತೆರಿಗೆ ಪದ್ಧತಿ ಜಾರಿಗೊಂಡ ನಾಲ್ಕು ತಿಂಗಳ ಬಳಿಕ ಜನರಿಗೆ ದೊಡ್ಡದೊಂದು ಕೊಡುಗೆಯನ್ನು ನೀಡಿದೆ.
Related Articles
Advertisement
ಕ್ರಮೇಣ ಜಿಎಸ್‌ಟಿ ಗರಿಷ್ಠ ವ್ಯಾಪ್ತಿಯನ್ನೇ ಶೇ. 18ಕ್ಕಿಳಿಸುವ ಯೋಜನೆ ಇದ್ದು ಇದಕ್ಕೆ ಕೊಂಚ ಸಮಯ ಹಿಡಿಯಬಹುದು. ಸಿಮೆಂಟ್, ಪೈಂಟ್‌ನಂತಹ ಎಲ್ಲರಿಗೂ ಅಗತ್ಯವಾಗಿರುವ ವಸ್ತುಗಳನ್ನು ಶೇ.28 ಸ್ತರದ ವ್ಯಾಪ್ತಿಯಿಂದ ತುರ್ತಾಗಿ ಹೊರಗೆ ತರುವ ಅಗತ್ಯವಿದೆ. ದೇಶದ ಜಿಡಿಪಿಗೆ ಬಲುದೊಡ್ಡ ಕೊಡುಗೆ ನೀಡುತ್ತಿರುವ ರಿಯಲ್ ಎಸ್ಟೇಟ್ ಉದ್ಯಮದ ಮುಖ್ಯ ವಸ್ತುಗಳೇ ಸಿಮೆಂಟ್ ಮತ್ತು ಪೈಂಟ್. ಇವುಗಳಿಗೆ ಗರಿಷ್ಠ ತೆರಿಗೆ ವಿಧಿಸಿದರೆ ಸಹಜವಾಗಿಯೇ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಪರಿಣಾಮವಾಗುತ್ತದೆ.
ಹೀಗಾಗಿ ಮುಂಬರುವ ದಿನಗಳಲ್ಲಿ ಆರ್ಥಿಕತೆಯ ಚಾಲನಾ ಶಕ್ತಿಯಾಗಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಳ್ಳಬೇಕು. ಅಂತೆಯೇ ವಾಶಿಂಗ್ ಮೆಶಿನ್, ಏರ್ ಕಂಡೀಶನರ್ ಐಷಾರಾಮಿ ವಸ್ತುಗಳು ಎನ್ನುವ ತರ್ಕವೂ ಸರಿಯಲ್ಲ. ಎಲ್ಲ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರ ಮನೆಗಳಲ್ಲಿ ವಾಶಿಂಗ್ ಮೆಶಿನ್ ಇರುತ್ತದೆ. ಮುಂಬಯಿ, ದಿಲ್ಲಿಯಂತಹ ಮಹಾನಗರಗಳಿಗೆ ಬೇಸಿಗೆಯಲ್ಲಿ ಏರ್ ಕಂಡೀಶನರ್ ಅನಿವಾರ್ಯ ಎಂಬ ಪರಿಸ್ಥಿತಿಯಿದೆ.
ಈ ವಸ್ತುಗಳ ತೆರಿಗೆ ಇಳಿಕೆಯಾಗುವುದು ಕೂಡ ಅಪೇಕ್ಷಣೀಯ. ಅದೇ ರೀತಿ ಔಷಧಗಳಿಗೆ ಆದಷ್ಟು ಕಡಿಮೆ ತೆರಿಗೆ ವಿಧಿಸುವ ಕುರಿತು ಚಿಂತನೆ ನಡೆಸಬೇಕು. ಬಹುತೇಕ ಔಷಧಿಗಳು ಪ್ರಸ್ತುತ ಶೇ.12 ಸ್ತರದಲ್ಲಿದ್ದು, ಈ ಪೈಕಿ ಹಲವು ಅಗತ್ಯ ಔಷಧಿಗಳನ್ನು ಶೇ.5 ಸ್ತರಕ್ಕೆ ತರಲು ಸಾಧ್ಯವಿದೆ. ಜಿಎಸ್‌ಟಿ ಕೆಟ್ಟ ತೆರಿಗೆ ಪದ್ಧತಿ ಅಲ್ಲ ಎನ್ನುವುದು ಅದು ಜಾರಿಯಾದ ಮೊದಲ ತ್ತೈಮಾಸಿಕದಲ್ಲೇ ಸಾಬೀತಾಗಿದೆ. ತೆರಿಗೆ ಸಂಗ್ರಹ ಗಮನೀಯ ಪ್ರಮಾಣದಲ್ಲಿ ಹೆಚ್ಚಾಗಿರುವುದಲ್ಲದೆ, ತೆರಿಗೆ ಪಾವತಿಸುವವರ ಸಂಖ್ಯೆಯೂ ಹೆಚ್ಚಿದೆ.
ಈಗಾಗಲೇ 160 ದೇಶಗಳಲ್ಲಿ ಜಿಎಸ್‌ಟಿ ಯಶಸ್ವಿಯಾಗಿದ್ದು, ಭಾರತದಲ್ಲಿ ಸೋಲುತ್ತದೆ ಎನ್ನಲು ಕಾರಣಗಳಿಲ್ಲ. ಯಾವುದೇ ಹೊಸತನಕ್ಕೆ ಹೊಂದಿಕೊಳ್ಳಲು ತುಸು ಸಮಯ ಬೇಕಾಗುತ್ತದೆ. ಪ್ರಸ್ತುತ ಸರಕಾರ ಏಕಾಏಕಿ 177 ವಸ್ತುಗಳ ತೆರಿಗೆ ಇಳಿಸಿದ ನಿರ್ಧಾರದ ಹಿಂದೆ ರಾಜಕೀಯ ಕಾರಣಗಳು ಮತ್ತು ವಿಪಕ್ಷಗಳ ಒತ್ತಡ ಇದೆ ಎನ್ನುವುದು ನಿಜವಾಗಿದ್ದರೂ ಇಂದಲ್ಲ ನಾಳೆಯಾದರೂ ಸರಕಾರ ಈ ನಿರ್ಧಾರ ಕೈಗೊಳ್ಳಲೇ ಬೇಕಾಗಿತ್ತು.