ಮಂಗಳೂರು: ಜಿಎಸ್‌ಟಿಗೆ ಏಕ ರಾಷ್ಟ್ರ, ಏಕ ತೆರಿಗೆ ಎಂಬುದಾಗಿ ಬಿಜೆಪಿ ಸರಕಾರ ವ್ಯಾಖ್ಯಾನಿಸುತ್ತಿರುವುದು ಸರಿಯಲ್ಲ . ಇದು ಏಕ ತೆರಿಗೆಯಲ್ಲ . ಏಕ ರೂಪದ ತೆರಿಗೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ. ರವಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜಿಎಸ್‌ಟಿಯಲ್ಲಿ ಕೇವಲ ಪರೋಕ್ಷ ತೆರಿಗೆಗಳು ಮಾತ್ರ ಒಳಗೊಳ್ಳುತ್ತವೆ. ಆದಾಯ ತೆರಿಗೆ ಸೇರಿದಂತೆ ನೇರ ತೆರಿಗೆಗಳು ಇದರ ವ್ಯಾಪ್ತಿಗೆ ಬರುವುದಿಲ್ಲ. ಪೆಟ್ರೋಲಿಯಂ, ಮದ್ಯವನ್ನು ಇದರಿಂದ ಹೊರಗಿಡಲಾಗಿದೆ. ಆದ್ದರಿಂದ ಇದನ್ನು ಏಕ ತೆರಿಗೆ ಎಂದು ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದರು.
ಬಿಜೆಪಿಯ ರಾಜಕೀಯ ಗಿಮಿಕ್
ಜಿಎಸ್‌ಟಿ ಎಂಬುದು ಒಂದು ತೆರಿಗೆ ನೀತಿ. ಇದರ ಜಾರಿಗೆ ಮಧ್ಯರಾತ್ರಿ ಸಂಸತ್‌ನಲ್ಲಿ ಕಾರ್ಯಕ್ರಮ ಆಯೋಜಿಸುವ ಆವಶ್ಯಕತೆ ಇತ್ತೇ ಎಂಬುದು ನನ್ನ ಪ್ರಶ್ನೆಯಾಗಿದೆ. ಇದು ಬಿಜೆಪಿಯ ರಾಜಕೀಯ ಗಿಮಿಕ್ ಎಂದ ಅವರು ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಅನೇಕ ಐತಿ ಹಾಸಿಕ ಜನಪರ ಕಾರ್ಯಕ್ರಮಗಳು ಜಾರಿಯಾಗಿವೆ. ವಿಶ್ವದಲ್ಲೇ ಪ್ರಥಮವಾದ ಮಾಹಿತಿ ಹಕ್ಕು ಕಾಯ್ದೆ, ಆಹಾರ ಭದ್ರತೆ ಕಾಯ್ದೆ, ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆ, ಉದ್ಯೋಗ ಖಾತರಿ ಯೋಜನೆ, 1991ರಲ್ಲಿ ಡಾ| ಮನಮೋಹನ್ ಸಿಂಗ್ ಅವರು ಜಾರಿಗೆ ತಂದ ಆರ್ಥಿಕ ಸುಧಾರಣೆ ಕಾಯ್ದೆ ಸೇರಿದಂತೆ ಹಲವಾರು ಐತಿಹಾಸಿಕ ಕಾಯ್ದೆಗಳನ್ನು ಜಾರಿ ಮಾಡಲಾಗಿತ್ತು. ಆದರೆ ಎಂದೂ ಮಧ್ಯರಾತ್ರಿಯಲ್ಲಿ ಸಂಸತ್‌ನಲ್ಲಿ ಕಾರ್ಯಕ್ರಮ ಆಯೋಜಿಸಿ ಪ್ರಚಾರ ಗಿಟ್ಟಿಸಿ ಇದರ ಲಾಭ ಪಡೆಯುವ ಕೆಲಸವನ್ನು ಯುಪಿಎ ಸರಕಾರ ಮಾಡಲಿಲ್ಲ ಎಂದು ಸಚಿವ ಖಾದರ್ ಹೇಳಿದರು. ಬಿಜೆಪಿ ತನ್ನ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಯಾವುದೇ ಜನಪರ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಕೇವಲ ಮಾತಿನ ಮೂಲಕ ಗಿಮಿಕ್ ಮಾಡಿ ಭ್ರಮೆಯನ್ನು ಸೃಷ್ಟಿಸುವ ಕಾರ್ಯ ಮಾಡುತ್ತಾ ಬಂದಿದೆ ಎಂದರು.
ಜಿಎಸ್‌ಟಿ ಒಂದು ಪ್ರಗತಿಪರ ತೆರಿಗೆ ವ್ಯವಸ್ಥೆ ಎಂಬುದನ್ನು ನಾನು ಒಪ್ಪುತ್ತೇನೆ. ಇದೇ ಕಾರಣದಿಂದ ಕಾಂಗ್ರೆಸ್ ಸರಕಾರ ಇದರ ಜಾರಿಗೆ ಸಂಪೂರ್ಣ ಸಹಕಾರ ನೀಡಿದೆ. ಆದರೆ ಹಿಂದೆ ಯುಪಿಎ ಸರ ಕಾರದ ಅಧಿಕಾರಾವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರು ಜಿಎಸ್‌ಟಿ ಕಾಯ್ದೆಯನ್ನು ಜಾರಿಗೆ ತರಲು ಕಾರ್ಯೋನ್ಮುಖರಾದಾಗ ಬಿಜೆಪಿ ಇದನ್ನು ವಿರೋಧಿಸಿತ್ತು ಎಂದವರು ಹೇಳಿದರು. ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಜಿ.ಪಂ. ಮಾಜಿ ಸದಸ್ಯ ಮೆಲ್ವಿನ್ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.