ಬೆಂಗಳೂರು: ಜಿಎಸ್‌ಟಿ ಕುರಿತು ಅಗತ್ಯ ಮಾರ್ಗದರ್ಶನ ಪಡೆಯಲು ಹಾಗೂ ಗೊಂದಲ ನಿವಾರಣೆಗಾಗಿ ವಾಣಿಜ್ಯ ತೆರಿಗೆ ಇಲಾಖೆಯು ಎಫ್ಕೆಸಿಸಿಐ ಸಹಯೋಗದಲ್ಲಿ ಜಿಎಸ್‌ಟಿ ಸಹಾಯ ಕೇಂದ್ರ ಆರಂಭಿಸಿದೆ. ನ.10ರವರೆಗೆ ಸಹಾಯ ಕೇಂದ್ರ ಕಾರ್ಯ ನಿರ್ವಹಿಸಲಿದ್ದು, ಡೀಲರ್‌ಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ನೂತನ ಜಿಎಸ್‌ಟಿಯಡಿ ವ್ಯವಹಾರ ಸಂಬಂಧ ಡೀಲರ್‌ಗಳಿಗೆ ಅಗತ್ಯ ಮಾರ್ಗದರ್ಶನ ನೀಡಲು ವಾಣಿಜ್ಯ ತೆರಿಗೆ ಇಲಾಖೆ ಸಹಯೋಗದಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದ್ದು, ಶುಕ್ರವಾರದವರೆಗೆ ಕಾರ್ಯ ನಿರ್ವಹಿಸಲಿದೆ. ವಾಣಿಜ್ಯ ತೆರಿಗೆ ಇಲಾಖೆಯ ನಾಲ್ಕು ಮಂದಿ ಅಧಿಕಾರಿಗಳು ಸೇರಿದಂತೆ ಎಫ್ಕೆಸಿಸಿಐನ ಇಬ್ಬರು ತಜ್ಞರು ನೆರವು ನೀಡಲಿದ್ದಾರೆ ಎಂದು ಜಿಎಸ್‌ಟಿ ರಾಜ್ಯ ಸಮಿತಿ ಸದಸ್ಯರಾದ ಬಿ.ಟಿ.ಮನೋಹರ್ ತಿಳಿಸಿದ್ದಾರೆ.
ಜಿಎಸ್‌ಟಿಆರ್- 2 ಸಲ್ಲಿಸುವಲ್ಲಿ ಸಮಸ್ಯೆ ಅನುಭವಿಸುವ ಡೀಲರ್‌ಗಳು ಮಾಹಿತಿ ಪಡೆಯಬಹುದು. ಅಲ್ಲದೇ ಸಹಾಯ ಕೇಂದ್ರ ಸಂಪರ್ಕಿಸಿದರೆ ಅರ್ಜಿ ಭರ್ತಿ ಮಾಡಿ ಸಲ್ಲಿಕೆಗೂ ಮಾರ್ಗದರ್ಶನ ನೀಡಲಾಗುವುದು. ಈ ಹಿಂದೆ ವ್ಯಾಟ್ ವ್ಯವಸ್ಥೆಯಿಂದ ಜಿಎಸ್‌ಟಿಗೆ ವಹಿವಾಟು ವರ್ಗಾಯಿಸಿಕೊಂಡು ವಾರ್ಷಿಕ 20 ಲಕ್ಷ ರೂ.ಗಿಂತ ಕಡಿಮೆ ವಹಿವಾಟು ನಡೆಸುವವರು ಸಹಾಯ ಕೇಂದ್ರದಲ್ಲಿ ಜಿಎಸ್‌ಟಿ ನೋಂದಣಿ ರದ್ದುಪಡಿಸಿಕೊಳ್ಳಲು ನೆರವು ನೀಡಲಾಗುವುದು. ನ.10ರವರೆಗೆ ಸಹಾಯ ಕೇಂದ್ರ ಕಾರ್ಯ ನಿರ್ವಹಿಸಲಿದ್ದು, ಡೀಲರ್‌ಗಳು ಪ್ರಯೋಜನ ಪಡೆಯಬಹುದು ಎಂದು ಹೇಳಿದ್ದಾರೆ.
ನಗರದ ಕೆ.ಜಿ.ರಸ್ತೆಯಲ್ಲಿರುವ ಎಫ್ಕೆಸಿಸಿಐ ಕಚೇರಿ ಆವರಣದಲ್ಲಿ ಮಂಗಳವಾರ ಸಹಾಯ ಕೇಂದ್ರಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಬಿ.ಟಿ.ಮುರಳಿಕೃಷ್ಣ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ಉಪಾಧ್ಯಕ್ಷ ಸಿ.ಆರ್.ಜನಾರ್ದನ್, ಜಿಎಸ್‌ಟಿ ರಾಜ್ಯ ಸಮಿತಿ ಸದಸ್ಯ ಬಿ.ಟಿ.ಮನೋಹರ್ ಇತರರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.