ಬೆಂಗಳೂರು: ಗ್ರಾಮ ಪಂಚಾಯಿತಿಗಳಲ್ಲಿ ಒದಗಿಸಲಾಗುವ ಆಧಾರ್ ತಿದ್ದುಪಡಿ ಸೇವೆಗಳಿಗೆ ವಿಧಿಸಲಾಗುವ ಜಿಎಸ್‌ಟಿ ಬಗ್ಗೆ ಮೈ ಮರೆತಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆ ಇದೀಗ ಎಚ್ಚೆತ್ತುಕೊಂಡಿದೆ. ನಿಗದಿತ ಶುಲ್ಕದೊಂದಿಗೆ ಜಿಎಸ್‌ಟಿ ಸಹ ಸಂಗ್ರಹ ಮಾಡುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಿದೆ.
ಆಧಾರ್ ತಿದ್ದುಪಡಿ ಸೇವೆಗಳಿಗೆ ಸಂಬಂಧಿಸಿದಂತೆ ಈ ವರ್ಷ ಜೂನ್‌ನಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಶುಲ್ಕದ ಬಗ್ಗೆ ಮಾತ್ರ ಪ್ರಸ್ತಾಪವಿತ್ತು. ಆದರೆ, ಆಧಾರ್ ತಿದ್ದುಪಡಿ ಸೇವೆಗಳಿಗೆ ತಿಂಗಳುಗಳ ಹಿಂದೆಯೇ ಆಧಾರ್ ಪ್ರಾಧಿಕಾರ ಜಿಎಸ್‌ಟಿ ವಿಧಿಸಿರುವುದರಿಂದ ಈಗ ಅದನ್ನು ಸರಿಪಡಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ, ಜಿಎಸ್‌ಟಿ ಸಹಿತ ಶುಲ್ಕ ವಸೂಲಿ ಮಾಡುವಂತೆ ಗ್ರಾಮ ಪಂಚಾಯಿತಿಗಳಿಗೆ ಆ.23ರಂದು ಮತ್ತೂಂದು ಸುತ್ತೋಲೆ ಹೊರಡಿಸಿದೆ. ಆಧಾರ್ ಪ್ರಾಧಿಕಾರದ ಮಾರ್ಗಸೂಚಿಯಂತೆ ಆಧಾರ್ ತಿದ್ದುಪಡಿ ಸೇವೆಗಳಿಗೆ ಜಿಎಸ್‌ಟಿ ಅನ್ವಯವಾಗಲಿದ್ದು, ಆ ತೆರಿಗೆ ಹಣವನ್ನು ಗ್ರಾಮಪಂಚಾಯತಿಗಳೇ ಬಳಸುವಂತೆ ಸೂಚಿಸಲಾಗಿದೆ.
ಗ್ರಾಮ ಪಂಚಾಯಿತಿಗಳಲ್ಲಿನ ಆಧಾರ್ ತಿದ್ದುಪಡಿ ಕೇಂದ್ರಗಳಲ್ಲಿ ಮೂರು ಬಗೆಯ ತಿದ್ದುಪಡಿ ಸೇವೆಗಳು ಲಭ್ಯವಾಗಲಿವೆ. ಅದಕ್ಕೆ ಆಧಾರ್ ಪ್ರಾಧಿಕಾರ ಶುಲ್ಕ ಸಹ ನಿಗದಿಪಡಿಸಿದೆ. ಬಳಿಕ ಆ ಶುಲ್ಕದಲ್ಲಿ ಜಿಎಸ್‌ಟಿ ಸಹ ಸೇರ್ಪಡೆಗೊಂಡಿದೆ. ಆದರೆ, ರಾಜ್ಯ ಸರ್ಕಾರ ಜೂನ್‌ನಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಆಧಾರ್ ಕಾರ್ಡುದಾರರ ಹೆಸರು, ವಿಳಾಸ ತಿದ್ದುಪಡಿಗೆ ಈ ಹಿಂದೆ ಒಬ್ಬ ವ್ಯಕ್ತಿಗೆ ಒಂದು ಬಾರಿಗೆ 25 ರೂ., ಆಧಾರ್ ಸಂಖ್ಯೆ ಹುಡುಕಿ ಅದರ ಕಲರ್ ಪ್ರಿಂಟ್ ಪಡೆದುಕೊಳ್ಳಲು 20 ರೂ. ಮತ್ತು ಆಧಾರ್ ಸಂಖ್ಯೆ ಹುಡುಕಿ ಅದರ ಬ್ಲ್ಯಾಕ್ ಆ್ಯಂಡ್ ವೈಟ್ ಪ್ರಿಂಟ್ ತೆಗೆದುಕೊಳ್ಳಲು 10 ರೂ. ಶುಲ್ಕ ನಿಗದಿಪಡಿಸಿತ್ತು. ಇದರಲ್ಲಿ ಜಿಎಸ್‌ಟಿಯ ಪ್ರಸ್ತಾಪ ಇರಲಿಲ್ಲ.
ಆದರೆ, ಹೊಸ ಸುತ್ತೋಲೆಯಲ್ಲಿ ಜಿಎಸ್‌ಟಿ ವಿವರವಿದೆ. ಅದರಂತೆ, ಆಧಾರ್ ಕಾರ್ಡುದಾರರ ಹೆಸರು, ವಿಳಾಸ ತಿದ್ದುಪಡಿಗೆ ಈ ಹಿಂದೆ ನಮೂದಿಸಿದಂತೆ ಒಬ್ಬ ವ್ಯಕ್ತಿಗೆ ಒಂದು ಬಾರಿಗೆ 25 ರೂ. ಶುಲ್ಕದ ಜತೆಗೆ 5 ರೂ.ಜಿಎಸ್‌ಟಿ ಸೇರಿ 30 ರೂ., ಆಧಾರ್ ಸಂಖ್ಯೆ ಹುಡುಕಿ ಅದರ ಕಲರ್ ಪ್ರಿಂಟ್ ಪಡೆದುಕೊಳ್ಳಲು 20 ರೂ.ಜತೆಗೆ 4 ರೂ.ಜಿಎಸ್‌ಟಿ ಸೇರಿಸಿ 24 ರೂ., ಆಧಾರ್ ಸಂಖ್ಯೆ ಹುಡುಕಿ ಅದರ ಬ್ಲ್ಯಾಕ್ ಆ್ಯಂಡ್ ವೈಟ್ ಪ್ರಿಂಟ್ ತೆಗೆದುಕೊಳ್ಳಲು 10 ರೂ.ಜತೆಗೆ 2 ರೂ. ಜಿಎಸ್‌ಟಿ ಸೇರಿ 12 ರೂ. ಶುಲ್ಕ ನಿಗದಿ ಮಾಡಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳಿಗೆ ಆಧಾರ್ ಜೋಡಣೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಆಧಾರ್ ನೋಂದಣಿಯ ಜೊತೆಗೆ ಅದರ ತಿದ್ದುಪಡಿ ಮತ್ತು ಪರಿಷ್ಕರಣೆ ಸಹ ಅತಿ ಮುಖ್ಯವಾಗಿದೆ. ಅಲ್ಲದೆ, ತಿದ್ದುಪಡಿ ಸೇವೆಗಳು ತ್ವರಿತವಾಗಿ ಕಾಲಮಿತಿಯೊಳಗೆ, ಕಡಿಮೆ ಭೌಗೋಳಿಕ ಅಂತರದಲ್ಲಿ ಸಿಕ್ಕರೆ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂಬ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆಧಾರ್ ಪ್ರಾಧಿಕಾರವು ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ತಿದ್ದುಪಡಿ ಸೇವಾ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಿತ್ತು. ಅದಕ್ಕಾಗಿ ವಿಶೇಷ ಸಾಫ್ಟ್ವೇರ್ ಸಿದ್ದಪಡಿಸಿ ಅದನ್ನು ಗ್ರಾಮ ಪಂಚಾಯಿತಿಗಳ ಕಂಪ್ಯೂಟರ್‌ಗಳಲ್ಲಿ ಅಳವಡಿಸಲಾಗುತ್ತಿದೆ. ತಿದ್ದುಪಡಿ ಕೇಂದ್ರಗಳಲ್ಲಿ ಗ್ರಾಮ ಪಂಚಾಯಿತಿಗಳು ಒದಗಿಸುವ ಸೇವೆಗಳಿಗೆ ಕನಿಷ್ಟ ಶುಲ್ಕ ನಿಗದಿಪಡಿಸಿ, ಆ ಮೊತ್ತವನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು ತಮ್ಮ ನಿಧಿಗೆ ಜಮೆ ಮಾಡಿಕೊಂಡು, ಅದನ್ನು ಉಪಯೋಗಿಸಿಕೊಳ್ಳುವಂತಾಗಬೇಕು ಅನ್ನುವುದು ಆಧಾರ್ ಪ್ರಾಧಿಕಾರದ ಉದ್ದೇಶವಾಗಿದೆ.
ಶೀಘ್ರದಲ್ಲೇ ಸೇವೆ ಆರಂಭ:
ಈಗಾಗಲೇ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ತಿದ್ದುಪಡಿ ಸೇವಾ ಕೇಂದ್ರಗಳನ್ನು ಆರಂಭಿಸಿ, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ (ಇ-ಆಡಳಿತ) ವಿಶೇಷ ತರಬೇತಿ ಸಹ ನೀಡಲಾಗಿದೆ. ಆಧಾರ್ ತಿದ್ದುಪಡಿ ಸೇವೆಗಳು ಗ್ರಾಮ ಪಂಚಾಯಿತಿಗಳಲ್ಲೇ ಲಭ್ಯವಾಗಲಿದೆ ಎಂದು ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ಮಾಡಿ, ಶೀಘ್ರದಲ್ಲೇ ರಾಜ್ಯಮಟ್ಟದ ಕಾರ್ಯಕ್ರಮವೊಂದನ್ನು ಮಾಡಿ, ಸಚಿವರಿಂದಲೇ ಆಧಾರ್ ತಿದ್ದುಪಡಿ ಸೇವೆಗಳಿಗೆ ಚಾಲನೆ ನೀಡಲಾಗುವುದೆಂದು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆಧಾರ್ ನೋಂದಣಿ ಶೇ.96ರಷ್ಟು ಪೂರ್ಣಗೊಂಡಿದೆ. ಉಳಿದ ನೋಂದಣಿಗೆ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ, ತಿದ್ದುಪಡಿ ಪ್ರಕರಣಗಳು ಹೆಚ್ಚೆಚ್ಚು ಬರುತ್ತಿವೆ. ಆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ತಿದ್ದುಪಡಿ ಸೇವಾ ಕೇಂದ್ರಗಳನ್ನು ತೆರೆಯುವಂತೆ ಆಧಾರ್ ಪ್ರಾಧಿಕಾರ ಮನವಿ ಮಾಡಿದ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ. ಪ್ರಾಧಿಕಾರ ನಿಗದಿಪಡಿಸಿದ ಶುಲ್ಕ ವಸೂಲಿ ಮಾಡಲಾಗುತ್ತದೆ. ಆ ಹಣ ಗ್ರಾಮ ಪಂಚಾಯಿತಿಗಳಿಗೆ ಸೇರುತ್ತದೆ.
– ಎಂ.ಕೆ.ಕೇಂಪೇಗೌಡ, ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ.
– ರಫೀಕ್ ಅಹ್ಮದ್